‘ಬ್ರ್ಯಾಂಡ್ ಬೆಂಗಳೂರು’ ಮತ್ತು ಬೆಂಗಳೂರು ನಗರವನ್ನು ಜಾಗತಿಕ ನಗರವನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವೂ ಅಧ್ಯಯನ ನಡೆಸಿ ವರದಿ ನೀಡುವುದಕ್ಕೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ನಾಲ್ವರ ತಜ್ಞರ ಸಮಿತಿ ರಚಿಸಿ ಆದೇಶಿಸಿದೆ.
ಬೆಂಗಳೂರು (ಜು.22) : ‘ಬ್ರ್ಯಾಂಡ್ ಬೆಂಗಳೂರು’ ಮತ್ತು ಬೆಂಗಳೂರು ನಗರವನ್ನು ಜಾಗತಿಕ ನಗರವನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವೂ ಅಧ್ಯಯನ ನಡೆಸಿ ವರದಿ ನೀಡುವುದಕ್ಕೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ನಾಲ್ವರ ತಜ್ಞರ ಸಮಿತಿ ರಚಿಸಿ ಆದೇಶಿಸಿದೆ.
ತಜ್ಞರ ಸಮಿತಿಯ ಅಧ್ಯಕ್ಷರಾಗಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್, ಸದಸ್ಯರಾಗಿ ನಿವೃತ್ತ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ರಾಜ್ಯಸಭಾ ಮಾಜಿ ಸದಸ್ಯ ಎಂ.ವಿ.ರಾಜೀವ್ ಗೌಡ ಹಾಗೂ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಿರ್ದೇಶಕ ರವಿಚಂದರ್ ಅವರನ್ನು ನೇಮಿಸಲಾಗಿದೆ.
Brand Bangalore: ಮನೆ ಬಾಗಿಲಿಗೆ ಪಾಲಿಕೆ, ಬಿಡಿಎ ಆಸ್ತಿ ದಾಖಲೆ!
ಸಮಿತಿಯು ಬಿಬಿಎಂಪಿ, ಬಿಡಿಎ, ಬೆಂಗಳೂರು ನಗರ ಜಲಮಂಡಳಿ, ಬಿಎಂಆರ್‌ಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್), ಬಿಎಂಎಲ್‌ಟಿಎ, ಬಿಎಂಆರ್‌ಸಿಎಲ್(ಮೆಟ್ರೋ), ಬಿಎಂಟಿಸಿ, ಪೊಲೀಸ್, ಬಿಎಂಟಿಎಫ್, ಅಗ್ನಿ ಶಾಮಕ ದಳ, ಬೆಸ್ಕಾಂ, ಸಬ್‌ಅರ್ಬನ್ ರೈಲುಗಳನು್ನ ಸಮನ್ವಯಿಸಿಕೊಳ್ಳಬೇಕು. ನಗರದ ಟ್ರಾಫಿಕ್ ನಿರ್ವಹಣೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ಪ್ರವಾಹಗಳ ಸಮರ್ಪಕ ನಿರ್ವಹಣೆ, ಭದ್ರತೆ ಸೇರಿದಂತೆ ಉತ್ತಮ ಆಡಳಿತಕ್ಕಾಗಿ ಸೂಕ್ತ ಸಾಂಸ್ಥಿಕ ಕಾರ್ಯವಿಧಾನಗಳನ್ನು ಸೂಚಿಸಬೇಕು. ಸಮರ್ಥನೀಯ ಮತ್ತು ಸುಸ್ಥಿರ ಸ್ಥಿತಿ ಸ್ಥಾಪಕ ನಗರವನ್ನು ರಚಿಸಲು ಯೋಜಿತ ಮತ್ತು ವೈಜ್ಞಾನಿಕವಾಗಿ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮ ಮತ್ತು ಶಿಫಾರಸುಗಳನ್ನು ಒದಗಿಸಲು ಸರ್ಕಾರ ಸಮಿತಿ ರಚನೆ ಮಾಡಿದೆ.
ಈ ಮೂಲಕ ಬ್ರ್ಯಾಂಡ್ ಬೆಂಗಳೂರನ್ನು ಬಲಗೊಳಿಸುವುದು, ಮೆಟ್ರೋಪಾಲಿಟನ್ ಯೋಜನಾ ಸಮಿತಿ ಸ್ಥಾಪನೆ ಸೇರಿದಂತೆ 74ನೇ ತಿದ್ದುಪಡಿಗೆ ಅನುಗುಣವಾಗಿ ನಾಗರಿಕರ ಕೇಂದ್ರಿತವಾಗಿ ಉತ್ತಮ ಸೇವೆಗಳನ್ನು ನೀಡುವುದಕ್ಕೆ ಸೂಕ್ತ ಶಿಫಾರಸಿಗೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ತಜ್ಞರ ಸಮಿತಿಗೆ ಬಿಬಿಎಂಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರು ಅಗತ್ಯ ಮಾಹಿತಿ ಒದಗಿಸುವುದು ಮತ್ತು ಸಭೆಗಳ ಬಗ್ಗೆ ಸಮನ್ವಯ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
