ನವದೆಹಲಿ9ಮೇ.16): ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಯಲ್ಲಿರುವ 3ನೇ ಹಂತದ ಲಾಕ್‌ಡೌನ್‌ ಭಾನುವಾರ ಕೊನೆಗೊಳ್ಳಲಿದ್ದು, ಸೋಮವಾರದಿಂದ ಲಾಕ್‌ಡೌನ್‌ 4.0 ಜಾರಿಯಾಗಲಿದೆ. ಹೊಸ ಲಾಕ್‌ಡೌನ್‌ ಕುರಿತು ಕೇಂದ್ರ ಸರ್ಕಾರ ಬಹುತೇಕ ಶನಿವಾರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ವಿಸ್ತರಣೆ ಮಾಡಿ, ಹಸಿರು ವಲಯಗಳಲ್ಲಿ ಎಲ್ಲ ಬಗೆಯ ನಿರ್ಬಂಧ ತೆಗೆದು, ಕಿತ್ತಳೆ ವಲಯದಲ್ಲಿ ಸೀಮಿತ ನಿರ್ಬಂಧ ಮುಂದುವರಿಸುವ ಸಾಧ್ಯತೆ ಇದೆ.

ಹಾಟ್‌ಸ್ಪಾಟ್‌ಗಳ ಗುರುತಿಸುವಿಕೆಯನ್ನು ಕೇಂದ್ರ ಸರ್ಕಾರ ಆಯಾಯ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡುವ ನಿರೀಕ್ಷೆ ಇದೆ. ಆದರೆ, ಶಾಲೆ- ಕಾಲೇಜುಗಳು, ಶಾಪಿಂಗ್‌ ಮಾಲ್‌ಗಳು ಮತ್ತು ಸಿನಿಮಾ ಮಂದಿರಗಳನ್ನು ದೇಶದ ಯಾವುದೇ ಭಾಗದಲ್ಲಿ ತೆರೆಯಲು ಅವಕಾಶ ನೀಡುವ ಸಂಭವ ಕಡಿಮೆ. ಕ್ಷೌರದ ಅಂಗಡಿಗಳು, ಸಲೂನ್‌ಗಳು ಮತ್ತು ಕನ್ನಡಕದ ಅಂಗಡಿಗಳನ್ನು ಕಂಟೇನ್‌ಮೆಂಟ್‌ ಪ್ರದೇಶವನ್ನು ಹೊರತುಪಡಿಸಿ ಕೆಂಪು ವಲಯದಲ್ಲೂ ತೆರೆಯಲು ಅವಕಾಶ ದೊರೆಯಬಹುದು.

ಕೊರೋನಾ ಸೋಂಕಿನಲ್ಲಿ ಚೀನಾ ಹಿಂದಿಕ್ಕಿದ ಭಾರತ, ಆದ್ರೆ ಸಾವಿನ ಸಂಖ್ಯೆ ಕಡಿಮೆ!

ಬಸ್‌ ಹಾಗೂ ಮೆಟ್ರೋ, ಲೋಕಲ್‌ ರೈಲು ಸೇವೆಗಳು ನಿಯಮಿತ ಸಾಮರ್ಥ್ಯ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕೆಂಪು ವಲಯವನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇನ್ನು ರೈಲು ಸೇವೆ ಹಾಗೂ ಪ್ರಾದೇಶಿಕ ವಿಮಾನಗಳ ಹಾರಾಟವೂ ಕ್ರಮೇಣವಾಗಿ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಹಸಿರು ವಲಯದಲ್ಲಿ ಲಾಕ್‌ಡೌನ್‌ ತೆರವು?

ಲಾಕ್‌ಡೌನ್‌ 4.0ನಲ್ಲಿ ಹಸಿರು ವಲಯಕ್ಕೆ ಲಾಕ್‌ಡೌನ್‌ನಿಂದ ಸಂಪೂರ್ಣ ವಿನಾಯಿತಿ ದೊರೆಯುವುದು ಬಹುತೇಕ ನಿಶ್ಚಿತವಾಗಿದೆ. ಅದೇ ರೀತಿ ಕಿತ್ತಳೆ ವಲಯಕ್ಕೆ ಅತ್ಯಲ್ಪ ಪ್ರಮಾಣದ ನಿರ್ಭಂದಗಳು ಇರಲಿವೆ. ಆದರೆ, ಕೆಂಪು ಮತ್ತು ಕಂಟೈನ್‌ಮೆಂಟ್‌ ವಲಯದಲ್ಲಿ ಮಾತ್ರ ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೆಸರು ಹೇಳಲು ಇಚ್ಛಿಸಿದ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಅಸ್ಸಾಂ ಮತ್ತು ತೆಲಂಗಾಣ ಸರ್ಕಾರಗಳು ಲಾಕ್‌ಡೌನ್‌ ಮುಂದುವರಿಯಬೇಕು ಎಂದು ಬಯಸಿವೆ. ಆದರೆ, ಯಾವುದೇ ರಾಜ್ಯ ಲಾಕ್‌ಡೌನ್‌ ಸಂಪೂರ್ಣ ತೆರವುಗೊಳಿಸಬೇಕು ಬೇಡಿಕೆ ಇಟ್ಟಿಲ್ಲ. ತಮಿಳುನಾಡು, ಬಿಹಾರ ಸೇರಿದಂತೆ ಇನ್ನು ಕೆಲವು ರಾಜ್ಯಗಳು ರೈಲು ಮತ್ತು ವಿಮಾನ ಸೇವೆಯನ್ನು ಮೊದಲಿನಂತೆ ಆರಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ.

ಕೋಲಿನ ಬಂಡಿಯಲ್ಲಿ ಗರ್ಭಿಣಿ ಪತ್ನಿ, ಪುತ್ರಿಯನ್ನು 700 ಕಿ.ಮೀ. ಎಳೆದೊಯ್ದ ಕಾರ್ಮಿಕ!

ಮೇ 12ರಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಲಾಕ್‌ಡೌನ್‌ 4.0 ಸಂಪೂರ್ಣ ಭಿನ್ನ ಹಾಗೂ ಹೊಸ ರೂಪದಲ್ಲಿ ಇರಲಿದೆ ಎಂದು ಹೇಳಿದ್ದರು.

ಏನಿರುತ್ತೆ, ಏನಿರಲ್ಲ?

- ದೇಶದೆಲ್ಲೆಡೆ ಶಾಲೆ- ಕಾಲೇಜು, ಮಾಲ್‌, ಚಿತ್ರಮಂದಿರಗಳು ಪುನಾರಂಭ ಸಾಧ್ಯತೆ ಇಲ್ಲ

- ಕಂಟೇನ್‌ಮೆಂಟ್‌ ಹೊರತುಪಡಿಸಿ ಇತರೆಡೆ ರೈಲು, ಬಸ್‌, ಮೆಟ್ರೋ ಓಡಾಟ ನಿರೀಕ್ಷೆ

- ಕೆಂಪು ವಲಯದಲ್ಲೂ ಆಟೋ, ಟ್ಯಾಕ್ಸಿ ಸೇವೆಗೆ ಅವಕಾಶ ಸಂಭವ

- ಕಂಟೇನ್‌ಮೆಂಟ್‌ ಝೋನ್‌ ಹೊರುತುಪಡಿಸಿ ಉಳಿದೆಡೆ ಕ್ಷೌರದಂಗಡಿ, ಕನ್ನಡಕದ ಅಂಗಡಿಗಳ ಓಪನ್‌ ನಿರೀಕ್ಷೆ

- ಕೆಂಪು ವಲಯದಲ್ಲಿ ಸಮ- ಬೆಸ ವಿಧಾನದಲ್ಲಿ ಮಾರುಕಟ್ಟೆತೆರೆಯಲು ರಾಜ್ಯಗಳಿಗೆ ಅವಕಾಶ ಸಾಧ್ಯತೆ

ಕೊರೋನಾ ಮುಚ್ಚಿಡಲು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಒತ್ತಡ: ಗಂಭೀರ ಆರೋಪ

ಮೇ 17ರ ನಂತರ ಕೇಂದ್ರ ಸರ್ಕಾರ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ. ಸ್ಟಾರ್‌ ಹೋಟೆಲ್‌ ಹಾಗೂ ಇನ್ನಿತರೆ ಕೆಲವೊಂದನ್ನು ಬಿಟ್ಟು ಉಳಿದೆಲ್ಲವಕ್ಕೂ ಅನುಮತಿ ನೀಡುವ ಸಂಭವವಿದೆ.

- ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ