ಹೈಕೋರ್ಟ್ ಸೂಚನೆ ಮೇರೆಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬೆಂಗಳೂರು (ಜು.25): ಮನೆಗೆಲಸದ ಮಹಿಳೆ ಮೇಲಿನ ಅತ್ಯಾ*ಚಾರ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ 2ನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ ಪ್ರತಿವಾದ ಆಲಿಸಿ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪ್ರಜ್ವಲ್ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಅರ್ಜಿ ಸಂಬಂಧ ಗುರುವಾರ ನಡೆದ ವಿಚಾರಣೆಗೆ ಹಾಜರಾದ ಸಿಐಡಿಯ ಎಸ್‌ಐಟಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು. ಇದಕ್ಕೂ ಮುನ್ನ ಆರೋಪಿ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸಿ, ಪ್ರಜ್ವಲ್ ಬಂಧನವಾಗಿ 14 ತಿಂಗಳು ಕಳೆದಿದೆ. ಇದೇ ಪ್ರಕರಣದ ಆರೋಪಿ ಎಚ್.ಡಿ.ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಪ್ರಜ್ವಲ್‌ಗೂ ಜಾಮೀನು ನೀಡುವಂತೆ ಕೋರಿದರು.
ಈ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ಜಾಮೀನು ಕೋರಿ ಮೊದಲ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಬಳಿಕ ಪ್ರಜ್ವಲ್ ಜಾಮೀನು ಕೋರಿ ಕಳೆದ ಜೂನ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಪ್ರಜ್ವಲ್ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು.
ವಕೀಲರ ನೇಮಿಸಿಕೊಳ್ಳಲು ಪರದಾಟ: ಅತ್ಯಾ*ಚಾರ ಪ್ರಕರಣ ಸಂಬಂಧ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರು ವಕಾಲತ್ತಿನಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಹೊಸ ವಕೀಲರ ನೇಮಕಕ್ಕೆ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಾಲಾವಕಾಶ ನೀಡುವಂತೆ ಪರಿಪರಿಯಾಗಿ ಬೇಡಿದ ಪ್ರಸಂಗ ನಡೆಯಿತು.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ*ಚಾರ ಆರೋಪ ಪ್ರಕರಣದ ವಿಚಾರಣೆಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರನ್ನು ಬದಲಿಸುವಂತೆ ಪ್ರಜ್ವಲ್ ಪರ ವಕೀಲರು ಕೋರಿದ್ದ ಜ್ಞಾಪನಾ ಪತ್ರ (ಮೆಮೋ)ವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಪರ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ನ್ಯಾಯಾಧೀಶರಿಗೆ ಮೆಮೋ ಸಲ್ಲಿಸಿದ್ದರು.
