ಬೆಂಗಳೂರು(ಡಿ.02): ಮಾಜಿ ಸಚಿವ ವರ್ತೂರು ಪ್ರಕಾಶ್‌ ಹಾಗೂ ಅವರ ಕಾರು ಚಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಾಜಿ ಸಚಿವರು ಹಾಗೂ ಕಾರು ಚಾಲಕ ಸುನೀಲ್‌ನನ್ನು ಮೂರು ದಿನ ವಶದಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದ ಬಳಿಕ ವರ್ತೂರು ಪ್ರಕಾಶ್‌ ಅವರನ್ನು ಅಪಹರಣಕಾರರು ಹೊಸಕೋಟೆಯ ಬಳಿ ತಳ್ಳಿ ಪರಾರಿಯಾಗಿದ್ದಾರೆ. ವರ್ತೂರು ಪ್ರಕಾಶ್‌ ಅವರ ಕಾರು ಚಾಲಕ ಸುನೀಲ್‌ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಅಪರಿಚಿತ ಎಂಟು ಅಪಹರಣಕಾರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಾಣಿವಿಲಾಸದಲ್ಲಿ ಕದ್ದಿದ್ದ ಮಗು 80000ಕ್ಕೆ ಮಾರಾಟ

ಘಟನೆ ನಡೆದು ನಾಲ್ಕೈದು ದಿನಗಳ ಬಳಿಕ ವರ್ತೂರು ಪ್ರಕಾಶ್‌ ಅವರು ದೂರು ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಣಕಾಸಿನ ವಿಚಾರಕ್ಕೆ ಅಪಹರಣ ನಡೆದಿದೆಯೇ? ಬೇರೆ ವಿಚಾರಕ್ಕೆ ಅಪಹರಣವಾಗಿತ್ತೇ ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ. ವರ್ತೂರು ಪ್ರಕಾಶ್‌ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ದೂರಿನಲ್ಲೇನಿದೆ?:

‘ನ.25ರಂದು ಸಂಜೆ ಏಳು ಗಂಟೆ ಸುಮಾರಿಗೆ ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ಇರುವ ನನ್ನ ಫಾರಂ ಹೌಸ್‌ನಿಂದ ಕಾರಿನಲ್ಲಿ ನಗರಕ್ಕೆ ವಾಪಸ್‌ ಆಗುತ್ತಿದ್ದೆ. ಕಾರು ಚಾಲಕ ಸುನೀಲ್‌ ಕಾರು ಚಾಲನೆ ಮಾಡುತ್ತಿದ್ದ. ಫಾರಂಹೌಸ್‌ನಿಂದ ಒಂದು ಕಿ.ಮೀ.ದೂರದಲ್ಲಿ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಮ್ಮ ಕಾರು ಅಡ್ಡಗಟ್ಟಿದ್ದರು. ಬಲವಂತವಾಗಿ ನಮ್ಮನ್ನು ಕಾರಿನಿಂದ ಎಳೆದುಕೊಂಡರು. ದುಷ್ಕರ್ಮಿಗಳು ನಮ್ಮ ಕಣ್ಣಿಗೆ ಬಟ್ಟೆಕಟ್ಟಿಕಾರಿನಲ್ಲಿ ಅಪಹರಣ ಮಾಡಿದ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು . 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ತರಿಸಿಕೊಡಲು ನಿರಾಕರಿಸಿದಾಗ ಕೈ-ಕಾಲುಗಳನ್ನು ಕಟ್ಟಿಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಚಾಲಕ ಸುನೀಲ್‌ಗೂ ಕೂಡ ನಿಮ್ಮ ಬಾಸ್‌ ಹಣ ಎಲ್ಲಿಟ್ಟಿದ್ದಾನೆ ತಿಳಿಸು ಎಂದು ಚಿತ್ರ ಹಿಂಸೆ ನೀಡಿದ್ದಾರೆ’

‘ಅಪಹರಣಕಾರರ ಹಿಂಸೆ ತಾಳಲಾರದೆ, ನ.26ರಂದು ನಯಾಜ್‌ ಎಂಬ ಹುಡುಗನಿಗೆ ಕರೆ ಮಾಡಿದ್ದೆ. ಆತನ ಕೋಲಾರದ ಕಾಫಿ ಡೇ ಶಾಪ್‌ ಬಳಿ . 48 ಲಕ್ಷ ಹಣವನ್ನು ಅಪಹರಣಕಾರರಿಗೆ ಕೊಟ್ಟು ಹೋಗಿದ್ದ. ಆ ಬಳಿಕವೂ ಅಪಹರಣಕಾರರು ಹೆಚ್ಚಿನ ಹಣಕ್ಕಾಗಿ ಹಿಂಸೆ ನೀಡಿ, ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದರು.’

ಹೆತ್ತವರನ್ನೇ ಬೆಚ್ಚಿ ಬೀಳಿಸಿದ ಬಾಲಕನ ಕೃತ್ಯ : ಲಾಡ್ಜ್‌ನಿಂದ ವಿಡಿಯೋ ಮೇಸೆಜ್‌

‘ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಾಲಕ ಸುನೀಲ್‌ನನ್ನು ಅಪಹರಣಕಾರರು ಮೃತಪಟ್ಟಿರಬಹುದು ಎಂದು ಭಾವಿಸಿದ್ದರು. ಪ್ರಜ್ಞೆ ಬಂದು ಚಾಲಕ ಸುನೀಲ್‌ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ದುಷ್ಕರ್ಮಿಗಳು ಎರಡು ತಾಸು ಸುನೀಲ್‌ಗಾಗಿ ಹುಡುಕಾಟ ನಡೆಸಿದ್ದರು. ಆದರೆ ಪೊಲೀಸರಿಗೆ ದೂರು ನೀಡಬಹುದು ಎಂದು ಅಪಹರಣಕಾರರು ನ.26ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೊಸಕೋಟೆ ಬಳಿಯ ಶಿವನಾಪುರ ಗ್ರಾಮದ ಬಳಿ ಇರುವ ಖಾಲಿ ಮೈದಾನದಲ್ಲಿ ನನ್ನನ್ನು ತಳ್ಳಿದರು. ಪೊಲೀಸರಿಗೆ ದೂರು ನೀಡಿದರೆ ‘ನಿನ್ನ ಮತ್ತು ನಿನ್ನ ಮಕ್ಕಳನ್ನು ಮುಗಿಸುವುದಾಗಿ’ ಬೆದರಿಕೆ ಹಾಕಿ ನನ್ನ ಕಾರಿನ ಸಮೇತ ಪರಾರಿಯಾದರು. ಬಳಿಕ ನಾನು ಅಪರಿಚಿತ ಕಾರನ್ನು ಅಡ್ಡಹಾಕಿ ಕೆ.ಆರ್‌.ಪುರಂನಲ್ಲಿರುವ ಸತ್ಯಸಾಯಿ ಆಸ್ಪತ್ರೆವರೆಗೆ ಡ್ರಾಪ್‌ ಪಡೆದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಹೀಗಿರುವಾಗ ಮಂಗಳವಾರ ನನ್ನ ಕಾರು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇನೆ’ ಎಂದು ವರ್ತೂರು ಪ್ರಕಾಶ್‌ ದೂರಿನಲ್ಲಿ ತಿಳಿಸಿದ್ದಾರೆ.

ವಿವಿಧೆಡೆ ಸುತ್ತಾಟ:

‘ವರ್ತೂರು ಪ್ರಕಾಶ್‌ ಅವರನ್ನು ಕೋಲಾರದಿಂದ ಟಮಕಾ, ನರಸಪುರ, ಹೊಸಕೋಟೆ, ಚಿಂತಾಮಣಿ ಬಳಿಕ ಮುರುಗಮಲ್ಲ ಕಡೆ ಅಪಹರಣಕಾರರು ಸುತ್ತಾಡಿಸಿದ್ದಾರೆ. ಕಾರು ಬೆಳ್ಳಂದೂರಿನ ಸ್ಮಶಾನದ ಬಳಿ ಮಂಗಳವಾರ ಪತ್ತೆಯಾಗಿದೆ. ಕಾರಿನಲ್ಲಿ ನಂಬರ್‌ ಪ್ಲೇಟ್‌ ಇರಲಿಲ್ಲ. ಕಾರಿನ ಒಳಗಡೆ ಕಾರದಪುಡಿ ಚೆಲ್ಲಿತ್ತು. ಕಾರು ಚಾಲಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆತ ಕೂಡ ದೂರು ನೀಡುವ ಪ್ರಯತ್ನ ಮಾಡಿಲ್ಲ. ಎಲ್ಲ ಆಯಾಮಾಗಳಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.\

ಹಣಕ್ಕಾಗಿ ಅಪಹರಣ ನಾಟಕವಾಡಿ ಹೆತ್ತವರನ್ನೇ ಬೆಚ್ಚಿ ಬೀಳಿಸಿದ ಬಾಲಕ..!

ಎಂಟಿಬಿ, ಬೈರತಿಗೆ ಕರೆ!

30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು ಸಚಿವ ಬೈರತಿ ಬಸವರಾಜು, ಶಾಸಕರಾದ ಎಂಟಿಬಿ ನಾಗರಾಜ್‌ ಮತ್ತು ಬೈರತಿ ಸುರೇಶ್‌ಗೆ ವರ್ತೂರು ಪ್ರಕಾಶ್‌ ಅವರಿಂದ ಕರೆ ಮಾಡಿಸಿದ್ದರು ಎನ್ನಲಾಗಿದೆ. ಇವರಿಂದ ಯಾವುದೇ ಪ್ರಕ್ರಿಯೆ ಬಂದಿಲ್ಲ. ಬಳಿಕ ದುಷ್ಕರ್ಮಿಗಳು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಾಯ್ತು?

-ಕೋಲಾರದ ಫಾರಂಹೌಸ್‌ನಿಂದ ಬರುತ್ತಿದ್ದ ವರ್ತೂರು ಕಾರು ಅಡ್ಡಗಟ್ಟಿಅಪಹರಣ

-30 ಕೋಟಿ ಹಣಕ್ಕಾಗಿ ಬೇಡಿಕೆ, ಕಾರು ಚಾಲಕ ಮತ್ತು ವರ್ತೂರ್‌ ಕೈಕಾಲು ಕಟ್ಟಿಹಲ್ಲೆ

-ಹಣ ನೀಡದಿದ್ದಾಗ ಮತ್ತಷ್ಟುಚಿತ್ರಹಿಂಸೆ. ಹಿಂಸೆ ತಾಳದೆ 48 ಲಕ್ಷ ತರಿಸಿಕೊಟ್ಟವರ್ತೂರು

-ಈ ವೇಳೆ ಹಲ್ಲೆಗೊಳಗಾಗಿದ್ದ ಚಾಲಕ ಪರಾರಿ, ಬಳಿಕ ವರ್ತೂರನ್ನು ಕಾರಿಂದ ತಳ್ಳಿದ ಅಪಹರಣಕಾರರು

-ವರ್ತೂರು ಕಾರಿನ ಜತೆ ಕಿಡ್ನಾಪರ್‌ ಪರಾರಿ

-ದಾರಿಯಲ್ಲಿ ಹೋಗುತ್ತಿದ್ದ ಕಾರಲ್ಲಿ ಆಸ್ಪತ್ರೆಗೆ ಡ್ರಾಪ್‌ ಪಡೆದ ವರ್ತೂರು

-4 ದಿನ ಬಳಿಕ ಬೆಳ್ಳಂದೂರು ಸ್ಮಶಾನ ಬಳಿ ವರ್ತೂರು ಕಾರು ಪತ್ತೆ