ಮಾಜಿ ಸಚಿವ ಪಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಮದುವೆ ಆಮಿಷವೊಡ್ಡಿ ವಂಚಿಸಿದ ಆರೋಪ ಕೇಳಿಬಂದಿದೆ. ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ.  

ಮಾಜಿ ಸಚಿವ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಇದೀಗ ಪ್ರಕರಣ ಕುತೂಹಲ ಹುಟ್ಟಿಸಿದೆ.

ದೂರಿನಲ್ಲಿರುವ ಆರೋಪಗಳೇನು?

ಎರಡೂ ಕುಟುಂಬದ ಒಪ್ಪಿಗೆಯೊಂದಿಗೆ 2023ರ ಡಿಸೆಂಬರ್ 25ರಂದು ಪ್ರತೀಕ್ ಚೌಹಾಣ್ ನಿವಾಸದಲ್ಲಿ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥದ ನಂತರ, ಇಬ್ಬರ ನಡುವೆ ಹೊಂದಾಣಿಕೆ ಅಗತ್ಯವೆಂದು ಹೇಳಿ, ಪ್ರತೀಕ್ ಅವರ ಕುಟುಂಬ ನನ್ನನ್ನು ವಿವಿಧ ಸ್ಥಳಗಳಿಗೆ ಅವರೊಂದಿಗೆ ಕಳಿಸಿತು. ಪ್ರತೀಕ್, ಮಹಾರಾಷ್ಟ್ರದ ಲಾತೂರಿಗೆ ಕರೆದುಕೊಂಡು ಹೋಗಿ, ಮದುವೆಯಾಗುವವರಿದ್ದೇವೆ ಲೈಂಗಿಕ ಕ್ರಿಯೆ ನಡೆಸಿದರೆ ತಪ್ಪೇನಿಲ್ಲವೆಂದು ಒತ್ತಾಯಿಸಿದರು. ನಾನು ಅವರ ಒತ್ತಾಯಕ್ಕೆ ಮಣಿದು ಸಹಕರಿಸಿದ್ದೇನೆ. ನಂತರ, 2024ರ ಮೇ 13ರಂದು ನಾವು ನಾಲ್ವರು ಶಿರಡಿಗೆ ವಿಮಾನದಲ್ಲಿ ತೆರಳಿ, ಖಾಸಗಿ ಹೋಟೆಲ್‌ನಲ್ಲಿ ಒಂದೇ ಕೊಠಡಿಯಲ್ಲಿ ಉಳಿದಾಗ ಪ್ರತೀಕ್ ಮತ್ತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆಯ ಕುರಿತು ಒತ್ತಾಯಿಸಿದಾಗ ಅವರು ನಿರಂತರವಾಗಿ ಮುಂದೂಡುತ್ತಲೇ ಬಂದರು. ಅಲ್ಲದೆ, ನನ್ನ ಕನ್ಯತ್ವವನ್ನೂ ಪ್ರಶ್ನಿಸಿ ಮಾನಸಿಕ ನೋವುಂಟು ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕುಟುಂಬ ಮಟ್ಟದ ಮಾತುಕತೆ ಮತ್ತು ಪೊಲೀಸರಿಂದ ನಿರಾಕರಣೆ

2025ರ ಜುಲೈ 5ರಂದು ಸಂಜೆ 7:30ಕ್ಕೆ ನನ್ನ ಪೋಷಕರು ಪ್ರತೀಕ್ ಅವರ ಮನೆಗೆ ಭೇಟಿ ನೀಡಿ ವಿವರಣೆ ಕೇಳಿದರು. ಈ ಸಂದರ್ಭದಲ್ಲಿ ವಾಗ್ವಾದ ಉಂಟಾಯಿತು. "ನೀವು ಬಡವರು" ಎಂದು ಅವಮಾನಿಸಿದ ಆರೋಪವೂ ಇದೆ. ಈ ಸಂಬಂಧ 2025ರ ಜುಲೈ 6ರಂದು ಬೀದರ್ ಜಿಲ್ಲೆಯ ಔರಾದ್‌ನ ಹೋಕ್ರಾಣ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರೆಂದು ಮಹಿಳೆ ಆರೋಪಿಸಿದ್ದಾರೆ. ಮಹಿಳಾ ಆಯೋಗದ ಗಮನಕ್ಕೆ ದೂರು ಸಲ್ಲಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುವ ನಿರೀಕ್ಷೆ ಇದೆ. ಪ್ರತೀಕ್ ಚೌಹಾಣ್ ಹಾಗೂ ಅವರ ಕುಟುಂಬ ಈ ಕುರಿತು ಸ್ಪಷ್ಟನೆ ನೀಡಬೇಕಾದ ಅಗತ್ಯವಿದೆ.

ಜುಲೈ 6ರಂದು ಬಡಿದಾಡಿಕೊಂಡಿದ್ದ ಕುಟುಂಬ!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಪ್ರಭು ಚೌಹಾಣ್ ಮತ್ತು ಅವರ ಸಂಬಂಧಿಕರ ನಡುವೆ ಗಲಾಟೆ ನಡೆದಿತ್ತು. ಮಹಾರಾಷ್ಟ್ರದ ಉದ್ದಗೀರ್ ಮೂಲದ ಸಂಬಂಧಿಕರು ಮತ್ತು ಚೌಹಾಣ್ ನಡುವೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಎರಡೂ ಕಡೆಯವರು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿ ಕೈ ಕೈ ಮಿಲಾಸಿಕೊಂಡಿದ್ದರು. ಈ ಗಲಾಟೆಯಲ್ಲಿ ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಪರಿಸ್ಥಿತಿಯನ್ನು ತಿಳಿದು ಸ್ಥಳಕ್ಕೆ ಧಾವಿಸಿದ ಹೊಕ್ರಾಣ ಪೊಲೀಸ್ ಠಾಣೆಯ ಪೊಲೀಸರು ಗಲಾಟೆಯನ್ನು ನಿಯಂತ್ರಿಸಿದ್ದರು. ಶಾಸಕರಾದ ಪ್ರಭು ಚೌಹಾಣ್ ಮತ್ತು ಸಂಬಂಧಿಕರ ನಡುವೆ ನಡೆದ ಈ ಗಲಾಟೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ದೂರು ಆಗಿರಲಿಲ್ಲ.