ಬೆಂಗಳೂರು: ಜಮಖಂಡಿಯಲ್ಲಿ ನಡೆದ ಉಪ ಚುನಾವಣೆ ವೇಳೆ ಇವಿಎಂ ಮತಯಂತ್ರ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಅರವಿಂದ್ ಲಿಂಬಾವಳಿ ಆರೋಪಿಸಿದರು. 

ಇವಿಎಂ ಯಂತ್ರ ಕೊಂಡೊಯ್ಯಲು ಮಾಜಿ ಸಚಿವ ಎಂ.ಬಿ. ಪಾಟೀಲ್‌ಗೆ ಸೇರಿದ ಕಾಲೇಜಿನ ಬಸ್ಸು ಹಾಗೂ ಜೆಡಿಎಸ್‌ನ ಕೊನ್ನೂರ್ ಶಾಲಾ ವಾಹನ ಬಳಕೆ ಮಾಡಲಾಗಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಹೀಗಾಗಿ ಈ ಸಂಬಂಧ ತನಿಖೆ ಆಗಬೇಕು.

ಬಳಿಕ ಮತ ಎಣಿಕೆ ಮಾಡಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಬಬಲೇಶ್ವರದಲ್ಲಿ ಮತ ಯಂತ್ರಗಳು ಸಿಕ್ಕಿತ್ತು. ಈ ಬಾರಿಯೂ ಜಮಖಂಡಿಯಲ್ಲಿ ಅದೇ ರೀತಿ ಮಾಡಿರಬೇಕು. ಈ ಬಗ್ಗೆ ದೂರು ನೀಡಿದರೂ ಚುನಾವಣಾಧಿಕಾರಿ ಖಾಸಗಿ ವಾಹನ ಬಳಸಲು ಅವಕಾಶ ಇದೆ ಎಂದು ಹೇಳಿದ್ದಾರೆ. ಎಸ್‌ಪಿ ಹಾಗೂ ಡಿಸಿ ಮತ ಕೇಂದ್ರಕ್ಕೆ ಬರುವ ಜನರ ಮೇಲೆ ಗೊಂದಲ ಸೃಷ್ಟಿಸಿ ಮತದಾನ ಪ್ರಮಾಣ ಕಡಿಮೆ ಮಾಡಲು ಯತ್ನಿಸಿದರು. ಈ ಬಗ್ಗೆಯೂ ಚುನಾವಣಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.