ರಾಜ್ಯದಲ್ಲಿ ದಿನದಿನವೂ ಕೊರೋನಾ ಸಾವು ನೋವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕೊರೋನಾ ಮಹಾಮಾರಿ ಕಾರಣದಿಂದಾಗಿ ಪ್ರತಿನಿತ್ಯ 40 ಯುವಜನತೆ ಸಾವಿಗೀಡಾಗುತ್ತಿದ್ದಾರೆಂಬ ಆತಂಕದ ವಿಚಾರ ಒಂದು ಬೆಳಕಿಗೆ ಬಂದಿದೆ. 

ವರದಿ : ರಾಕೇಶ್‌ ಎನ್‌.ಎಸ್‌.

 ಬೆಂಗಳೂರು (ಮೇ.03): ಕೋವಿಡ್‌-19 ಆರೋಗ್ಯವಂತ ಯುವಕರ ಮೇಲೆ ದೊಡ್ಡ ಪರಿಣಾಮ ಬೀರದು ಎಂದು ಭಾವಿಸಿದ್ದ ವೈದ್ಯಲೋಕ ಮತ್ತು ಸರ್ಕಾರಕ್ಕೆ ಸವಾಲೊಡ್ಡುವ ಹಾಗೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಸಡ್ಡೆ ತೋರುವ ಯುವಕರಿಗೆ ರಾಜ್ಯದ ಕೋವಿಡ್‌ ದೈನಂದಿನ ವರದಿ ದೊಡ್ಡ ಎಚ್ಚರಿಕೆ ನೀಡುತ್ತಿದೆ. ಕಳೆದ ಎಂಟು ದಿನದಲ್ಲಿ ಯಾವುದೇ ಪೂರ್ವ ಆರೋಗ್ಯ ಸಮಸ್ಯೆ ಹೊಂದಿಲ್ಲದ (ಕೋಮಾರ್ಬಿಡ್‌ ಅಲ್ಲದ) 289 ಮಂದಿ ಯುವಕರು ಕೋವಿಡ್‌ಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಏ.25ರಿಂದ ಮೇ 2ರ ಅವಧಿಯಲ್ಲಿ ಒಟ್ಟು 1,728 ಮಂದಿ ಮೃತರಾಗಿದ್ದಾರೆ. ಮೃತರಲ್ಲಿ 518 ಮಂದಿ 50 ವರ್ಷದೊಳಗಿನವರು. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಯುವಕರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ.

ಕಳೆದ ಕೆಲ ದಿನಗಳಿಂದ ಪ್ರತಿ ದಿನ ಕೋಮಾರ್ಬಿಡ್‌ ಅಲ್ಲದ 30 ರಿಂದ 40 ಮಂದಿ ಯುವಕರು ಕೋವಿಡ್‌ಗೆ ಶರಣಾಗುತ್ತಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಕಳೆದೆರಡು ದಿನಗಳಿಂದ ಬೇರಾರ‍ಯವುದೇ ಅಸ್ವಸ್ಥತೆ ಹೊಂದಿಲ್ಲದ 40ಕ್ಕೂ ಹೆಚ್ಚು ಮಂದಿ ಮರಣವನ್ನಪ್ಪಿದ್ದಾರೆ. ಮರಣವನ್ನಪ್ಪುವ 40 ವರ್ಷ ಕೆಳಗಿನವರಲ್ಲಿ ಶೇ.75 ಮಂದಿಯಲ್ಲಿ ಮಧುಮೇಹ, ಹೈಪರ್‌ ಟೆನ್ಷನ್‌, ಹೃದ್ರೋಗ ಮುಂತಾದ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ.

ಆಕ್ಸಿಜನ್‌ ಸಿಗದೆ ಡಾಕ್ಟರ್‌ ಕಣ್ಣೆದುರೇ ಪತ್ನಿ ಸಾವು: ಹೆಂಡತಿ ಉಳಿಸಲಾಗದೆ ವೈದ್ಯನ ಕಣ್ಣೀರು! ..

ಕೋವಿಡ್‌ ಈ ಬಾರಿ ಯುವಕರಿಗೆ ಅದರಲ್ಲೂ ಕೋಮಾರ್ಬಿಡ್‌ ಅಲ್ಲವದರಿಗೆ ಮಾರಣಾಂತಿಕವಾಗುತ್ತಿರುವುದು ಏಕೆ ಎಂಬುದಕ್ಕೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ. ಕೊರೋನಾ ವೈರಾಣು ರೂಪಾಂತರಿ ಆಗಿದ್ದು ಮರಣ ಪ್ರಮಾಣ ಹೆಚ್ಚಲು ಕಾರಣವೇ ಎಂಬ ಪ್ರಶ್ನೆಯಿದೆ. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಲ್ಲಿ ಮತ್ತು ಕೋವಿಡ್‌ನ ಗುಣ ಲಕ್ಷಣಗಳನ್ನು ಗಮನಿಸಿ ಆರಂಭದಲ್ಲೇ ಚಿಕಿತ್ಸೆ ಪಡೆಯಲು ವಿಫಲರಾಗಿರುವುದು ಕಾರಣವಾಗುತ್ತಿದೆ ಎಂದು ಕೆಲ ತಜ್ಞರು ಅಭಿಪ್ರಾಯ ಪಡುತ್ತಾರೆ.

ಯುವಕರು ಕೋವಿಡ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಕೋವಿಡ್‌ ನಿಯಮ ಪಾಲಿಸದ ಅವರ ವರ್ತನೆಯೇ ಇದಕ್ಕೆ ಪ್ರಮುಖ ಕಾರಣ. ಕೊರೋನಾ ವೈರಾಣು ರೂಪಾಂತರಿ ಆಗಿರುವುದು ಇನ್ನೊಂದು ಕಾರಣ ಎಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಸಿ. ನಾಗರಾಜ್‌ ಹೇಳುತ್ತಾರೆ.

ಈ ಬಗ್ಗೆ ಮಾತನಾಡಿದ ಡಾ. ನಾಗರಾಜ್‌, ಯುವಕರು ಕೋವಿಡ್‌ ಮುನ್ಚೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿಲ್ಲ. ಕೋವಿಡ್‌ನ ಲಕ್ಷಣಗಳು ಕಂಡು ಬಂದರೂ ತಕ್ಷಣವೇ ಪರೀಕ್ಷೆಗೆ ಒಳಗಾಗುವುದಿಲ್ಲ, ಚಿಕಿತ್ಸೆ ಪಡೆಯಲು ಮುಂದಾಗುವುದಿಲ್ಲ. ಅವರು ತಮ್ಮ ರೋಗ ನಿರೋಧಕ ಶಕ್ತಿಯ ಬಗ್ಗೆ ಅಪಾರ ವಿಶ್ವಾಸ ಹೊಂದಿರುತ್ತಾರೆ. ಸಮಸ್ಯೆ ಗಂಭೀರವಾದ ಬಳಿಕವೇ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಮನೆಯಲ್ಲಿದ್ದು ಆಕ್ಸಿಮೀಟರ್‌ ಮೂಲಕ ಆಮ್ಲಜನಕ ಮಟ್ಟದ ಮೇಲೆ ನಿಗಾ ಇಡುವಲ್ಲಿಯೂ ಉದಾಸೀನ ಮಾಡುತ್ತಿದ್ದಾರೆ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona