ಆಕ್ಸಿಜನ್‌ ಸಿಗದೆ ಡಾಕ್ಟರ್‌ ಕಣ್ಣೆದುರೇ ಪತ್ನಿ ಸಾವು!| ವೈದ್ಯರ ಕಣ್ಣೆದುರೇ ಪತ್ನಿ ಸಾವು| ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ| ಪತ್ನಿ ಉಳಿಸಲಾಗದೆ ಖ್ಯಾತ ವೈದ್ಯನ ಕಣ್ಣೀರು

ಕಲಬುರಗಿ(ಮೇ.03): ಕೊರೋನಾದಿಂದ ಬಳಲುತ್ತಿದ್ದ ಖ್ಯಾತ ವೈದ್ಯರೊಬ್ಬರ ಪತ್ನಿ ಅವರ ಕಣ್ಣೆದುರೇ ಆಕ್ಸಿಜನ್‌ ಕೊರತೆಯಿಂದ ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಕಲಬುರಗಿಯ ಖ್ಯಾತ ವೈದ್ಯ ಡಾ.ಸಿ.ಎಸ್‌. ಪಾಟೀಲ್‌ ಅವರ ಪತ್ನಿ ಅರುಂಧತಿ ಪಾಟೀಲ್‌ (54) ಮೃತ​ರು. ಕೊರೋನಾಗೆ ತುತ್ತಾಗಿದ್ದ ಅರುಂಧತಿ ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಎರಡು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರುಂಧತಿ ಅವರು ಶನಿವಾರ ಸಂಜೆ ವೇಳೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಆಕ್ಸಿಜನ್‌ ಸಿಲಿಂಡರ್‌ ಕೊರತೆಯಿಂದಾಗಿ ಕೊನೆಯುಸಿರೆಳೆದರು. ಖ್ಯಾತ ವೈದ್ಯರಾಗಿದ್ದರೂ ಆಕ್ಸಿಜನ್‌ ಕೊರತೆಯಿಂದ ತಮ್ಮ ಪತ್ನಿಯ ಸಾವನ್ನು ತಡೆಯಲಾಗದೆ ಡಾ.ಸಿ.ಎಸ್‌.ಪಾಟೀಲ್‌ ಅಸಹಾಯಕರಾಗಿ ಕಣ್ಣೀರು ಹಾಕಿದರು.

"

ಸಿ.ಎಸ್‌.ಪಾಟೀಲರು ಸರ್ಕಾರಿ ವೈದ್ಯರಾಗಿದ್ದವರು, ನಂತರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಲಬುರಗಿಯ ಜೇವ​ರ್ಗಿ ರಸ್ತೆಯಲ್ಲಿ ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದರು. ಗುಣಮಟ್ಟದ ಚಿಕಿತ್ಸೆಗಾಗಿ ಖ್ಯಾತಿಗಳಿಸಿದವರು. ಆದರೆ ದುರದೃಷ್ಟವಶಾತ್‌ ಸ್ವತಃ ವೈದ್ಯರಾದರೂ ಆಕ್ಸಿಜನ್‌ ಕೊರತೆಯಿಂದಾಗಿ ಅವರಿಗೆ ತಮ್ಮ ಪತ್ನಿಯನ್ನೇ ಉಳಿಸಿಕೊಳ್ಳಲಾಗಲಿಲ್ಲ. ಅನೇಕರಿಗೆ ನಾನು ಚಿಕಿತ್ಸೆ ನೀಡಿ ಗುಣಪಡಿಸಿದ್ದೇನೆ, ಆದರೆ ನನ್ನ ಪತ್ನಿಯನ್ನೇ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಡಾ.ಪಾಟೀಲ ಕಣ್ಣೀರು ಹಾಕಿದರು.

ಕಲಬುರಗಿ ಜಿಲ್ಲೆಯಲ್ಲಿ ಅನೇಕ ಕೋವಿಡ್‌ ಆಸ್ಪತ್ರೆಗಳಲ್ಲಿ ಸ್ವಂತವಾಗಿ ಆಕ್ಸಿಜನ್‌ ಉತ್ಪಾದಿಸುವ ಘಟಕಗಳಿಲ್ಲ. ಹೀಗಾಗಿ ಬಹುತೇಕ ಆಸ್ಪತ್ರೆಗಳು ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಸಿಲಿಂಡರ್‌ ಪೂರೈಕೆ ವೇಳೆ ಸಣ್ಣ ವತ್ಯಾಸ ಕಂಡು ಬಂದರೂ ಜೀವಕ್ಕೆ ಕುತ್ತಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona