ಬೆಂಗಳೂರು [ಫೆ.08]:  ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ (ಯುಜಿಸಿ) ಮಾನದಂಡಗಳ ಅನ್ವಯ ಕನಿಷ್ಠ ಮೂಲ ಸೌಕರ್ಯಗಳನ್ನೂ ಕಲ್ಪಿಸದ ಸಂಸ್ಥೆಗಳಿಗೆ ಕಾಲೇಜು ತೆರೆಯಲು ಶಿಫಾರಸು ಮಾಡಬಾರದು. ಒಂದು ವೇಳೆ ಅಂತಹ ಕಾಲೇಜುಗಳಿಗೆ ಶಿಫಾರಸು ಮಾಡಿದರೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ವತಿಯಿಂದ ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರಿಗೆ ಶುಕ್ರವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಅಶ್ವತ್ಥನಾರಾಯಣ, ಬಹಳ ಕಾಲೇಜುಗಳಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಇಂತಹ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಕುಲಪತಿ, ಕುಲ ಸಚಿವರಿಗೆ ಯಾವುದೇ ರಕ್ಷಣೆ ನೀಡಲಾಗದು ಎಂದು ಸ್ಪಷ್ಟಪಡಿಸಿದರು.

ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು ಎಂಬ ಕಾರಣಕ್ಕೆ ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತೆ ನೀಡಲಾಗುತ್ತದೆ. ಆದರೆ, ಕೊಟ್ಟಂತಹ ಅಧಿಕಾರ ಪ್ರಯೋಜನ ಆಗದಿದ್ದರೆ ಅದನ್ನು ವಾಪಸ್‌ ಪಡೆಯಬಹುದು. ನಮ್ಮ ಸರ್ಕಾರದಿಂದ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಇಂತಹ ಸ್ವಾತಂತ್ರ್ಯ ಹಾಗೂ ಅಧಿಕಾರವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಒಂದು ವೇಳೆ ಕೊಟ್ಟಅಧಿಕಾರ ದುರುಪಯೋಗ ಆದರೆ ಸ್ವಾಯತ್ತೆ ಹಿಂಪಡೆಯುವುದಾಗಿ ಅವರು ಎಚ್ಚರಿಕೆ ನೀಡಿದರು.

ಆನ್‌ಲೈನ್‌ ವ್ಯವಸ್ಥೆಗೆ ಒತ್ತು:

ಸಿಂಡಿಕೇಟ್‌ ಸಭೆಯಲ್ಲಿ ಮುಚ್ಚುಮರೆ ಬೇಡ. ಎಲ್ಲ ವಿಶ್ವವಿದ್ಯಾಲಯಗಳನ್ನು ಒಂದೇ ವೇದಿಕೆಯಡಿ ತಂದು ಉತ್ತರದಾಯಿತ್ವ ಮತ್ತು ಪಾರದರ್ಶಕತೆ ತರಲು ತೀರ್ಮಾನಿಸಲಾಗಿದೆ. ಜತೆಗೆ ಇನ್ನು ಮುಂದೆ ವಿಶ್ವವಿದ್ಯಾಲಯಗಳ ಎಲ್ಲ ಕೆಲಸ, ಶಿಫಾರಸುಗಳು ಆನ್‌ಲೈನ್‌ ಮೂಲಕವೇ ನಡೆಯಬೇಕು. ಜತೆಗೆ, ನಮ್ಮ ಸರ್ಕಾರ ಆರಂಭಿಸಿರುವ ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರತಿ ಶಾಲೆಯಲ್ಲೂ ಒಬ್ಬ ಸಮಾಲೋಚಕರನ್ನು ನೇಮಿಸಿಕೊಳ್ಳಲಾಗುವುದು. ಪ್ರೌಢಶಾಲೆ ಮಟ್ಟದಲ್ಲೇ ಮುಂದಿನ ಓದು, ಕೌಶಲ್ಯ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಈ ವೇಳೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ, ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಸ್‌.ಎ. ಕೋರಿ ಹಾಜರಿದ್ದರು.

1,600 ಸಹಾಯಕ ಪ್ರಾಧ್ಯಾಪಕ, 400 ಪ್ರಾಂಶುಪಾಲರ ನೇಮಕ

ರಾಜ್ಯದ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,600 ಸಹಾಯಕ ಪ್ರಾಧ್ಯಾಪಕ ಹಾಗೂ 400 ಪ್ರಾಂಶುಪಾಲರ ಹುದ್ದೆ ನೇಮಕಕ್ಕೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಇವುಗಳನ್ನು ಶೇ.100ರಷ್ಟುಪಾರದರ್ಶಕವಾಗಿ ನೇಮಕ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದರು.

ನೇಮಕಾತಿಯಲ್ಲಿ ಪಾರದರ್ಶಕತೆ ಸಾಧಿಸಲು ಮೌಖಿಕ ಸಂದರ್ಶನ ಮಾಡದಿರಲು ನಿರ್ಧರಿಸಿದ್ದೇವೆ. ಕೇವಲ ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಲಾಗುವುದು. ಈ ಮೂಲಕ ಶೇ.100 ರಷ್ಟುಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಯುಜಿಸಿ ಮಾನದಂಡದ ಪ್ರಕಾರ ಅರ್ಜಿದಾರರ ಅರ್ಜಿಯನ್ನು ಪರಿಶೀಲಿಸಿ, ಮೌಲ್ಯಮಾಪನ ನಡೆಸಿ, ವಿಶ್ವವಿದ್ಯಾಲಯ ಮಟ್ಟದಲ್ಲೇ ನೇಮಕ ಮಾಡಲಾಗುವುದು. ಪರೀಕ್ಷಾ ಪ್ರಾಧಿಕಾರದಿಂದ ಯಾವುದೇ ಹೆಚ್ಚುವರಿ ಪರೀಕ್ಷೆ ಅಥವಾ ಸಂದರ್ಶನ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.