Asianet Suvarna News Asianet Suvarna News

ಬೆಂಗಳೂರು ಸೇರಿದಂತೆ 4 ನಗರದಲ್ಲಿ ನಾಳೆಯಿಂದ ಇ-ರುಪಿ ಸೇವೆ ಆರಂಭ

  • ಬೆಂಗಳೂರು ಸೇರಿದಂತೆ 4 ನಗರದಲ್ಲಿ ನಾಳೆಯಿಂದ ಇ-ರುಪಿ ಸೇವೆ ಆರಂಭ
  • ಕ್ರಿಪ್ಟೋ ಬದಲು ಆರ್‌ಬಿಐನ ಡಿಜಿಟಲ್‌ ಕರೆನ್ಸಿ
  • ವ್ಯಾಪಾರಿಗಳ ಜತೆ ಚಿಲ್ಲರೆ ಗ್ರಾಹಕರಿಗೂ ಲಭ್ಯ
ERupee service to start in 4 cities including Bengaluru from tomorrow ravi
Author
First Published Nov 29, 2022, 11:49 PM IST

ಮುಂಬೈ (ನ.29) : ನಗದು ರಹಿತ ಆರ್ಥಿಕತೆ ಮತ್ತು ಡಿಜಿಟಲ್‌ ವಹಿವಾಟು ವ್ಯವಸ್ಥೆಯಲ್ಲಿ ಕ್ರಾಂತಿಗೆ ಕಾರಣವಾಗಬಹುದು ಎಂದು ಹೇಳಲಾಗಿರುವ ಡಿಜಿಟಲ್‌ ರುಪಿ ಡಿ.1ರ ಗುರುವಾರದಿಂದ ಬೆಂಗಳೂರು ಸೇರಿದಂತೆ ದೇಶದ 4 ನಗರಗಳ ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರಾಯೋಗಿಕ ಯೋಜನೆಯಡಿ ಮೊದಲ ಹಂತದಲ್ಲಿ ನಾಲ್ಕು ಬ್ಯಾಂಕ್‌ಗಳ ಮೂಲಕ ನಾಲ್ಕು ನಗರಗಳ ಸೀಮಿತ ಸಂಖ್ಯೆಯ ಗ್ರಾಹಕರಿಗೆ ಮತ್ತು ಉದ್ಯಮಗಳಿಗೆ ಈ ಡಿಜಿಟಲ್‌ ರುಪಿ ಬಿಡುಗಡೆ ಮಾಡಲಾಗುತ್ತಿದೆ.

ಕಳೆದ ನ.1ರಂದು ಸಗಟು ವಹಿವಾಟುದಾರರಿಗೆ ಡಿಜಿಟಲ್‌ ರುಪಿ ಬಿಡುಗಡೆ ಮಾಡಿದ್ದ ಭಾರತೀಯ ರಿಸವ್‌ರ್‍ ಬ್ಯಾಂಕ್‌, ಇದೀಗ ಮೊದಲ ಬಾರಿಗೆ ಚಿಲ್ಲರೆ ಬಳಕೆದಾರರಿಗೂ ಇದನ್ನು ಪರಿಚಯಿಸುತ್ತಿದೆ. ಸಗಟು ಮತ್ತು ಚಿಲ್ಲರೆ ವಹಿವಾಟಿನ ವೇಳೆ ಲಭ್ಯವಾಗುವ ಮಾಹಿತಿಯನ್ನು ಆಧರಿಸಿ ಮುಂದಿನ ಹಂತದಲ್ಲಿ ಇದನ್ನು ಇನ್ನಷ್ಟುನಗರಗಳು ಮತ್ತು ಇನ್ನಷ್ಟುಜನರಿಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಏನಿದು ಡಿಜಿಟಲ್‌ ರುಪಿ?:

ಇದು ಖಾಸಗಿ ವಲಯದ ಬಿಟ್‌ಕಾಯಿನ್‌ ರೀತಿಯಲ್ಲೇ, ಆರ್‌ಬಿಐ ಬಿಡುಗಡೆ ಮಾಡಿರುವ ಡಿಜಿಟಲ್‌ ಕರೆನ್ಸಿ. ಡಿಜಿಟಲ್‌ ಕರೆನ್ಸಿ ಕೂಡಾ ನೋಟು ಮತ್ತು ನಾಣ್ಯಗಳ ರೀತಿಯಲ್ಲೇ ಮೌಲ್ಯ ಮತ್ತು ಕಾನೂನಿನ ಎಲ್ಲಾ ಬೆಂಬಲ ಹೊಂದಿರುತ್ತದೆ. ಇದನ್ನು ಯಾವುದೇ ವಸ್ತು ಖರೀದಿಗೆ, ಯಾರಿಗಾದರೂ ಹಣ ಪಾವತಿಗೆ ಬಳಸಬಹುದು. ನೋಟಿನಷ್ಟೇ ವಿಶ್ವಾಸ, ಸುರಕ್ಷತೆ ಇದಕ್ಕೂ ಇದೆ. ಇದನ್ನು ನಗದಿಗೆ ವರ್ಗಾಯಿಸಿಕೊಳ್ಳಬಹುದು, ಠೇವಣಿ ಇಡಲು ಬಳಸಬಹುದು. ಆದರೆ ಇದನ್ನು ಕೈಯಲ್ಲಿ ನೋಟಿನ ರೀತಿಯಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ. ಜೊತೆಗೆ ಬ್ಯಾಂಕ್‌ನಲ್ಲಿ ನಗದು ಇಟ್ಟರೆ ಅದಕ್ಕೆ ಸಿಗುವ ರೀತಿಯ ಬಡ್ಡಿ ಸಿಗುವುದಿಲ್ಲ.

ಯಾರಿಗೆ ಸಿಗುತ್ತೆ?:

ಮೊದಲ ಹಂತದಲ್ಲಿ ಡಿಜಿಟಲ್‌ ರುಪಿಯನ್ನು 4 ನಗರಗಳಲ್ಲಿ ಇರುವ 4 ಪ್ರಮುಖ ಬ್ಯಾಂಕ್‌ಗಳ ಮೂಲಕ ಸೀಮಿತ ಪ್ರದೇಶದ ಸೀಮಿತ ಸಂಖ್ಯೆಯ ಗ್ರಾಹಕರು ಮತ್ತು ಉದ್ಯಮಿಗಳಿಗೆ ನೀಡಲಾಗುವುದು. ಈ ಡಿಜಿಟಲ್‌ ರುಪಿಯನ್ನು ಇಬ್ಬರು ವ್ಯಕ್ತಿಗಳ ನಡುವೆ (ಪರ್ಸನ್‌ ಟು ಪರ್ಸನ್‌) ಮತ್ತು ವ್ಯಕ್ತಿಯೊಬ್ಬ ವ್ಯಾಪಾರಿಗೆ (ಪರ್ಸನ್‌ ಟು ಮರ್ಚಂಟ್‌) ನೀಡಲು ಬಳಸಬಹುದು. ಯೋಜನೆಗೆ ಆಯ್ಕೆಯಾದ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಒದಗಿಸುವ ಡಿಜಿಟಲ್‌ ವಾಲೆಟ್‌ನಲ್ಲಿ ಡಿಜಿಟಲ್‌ ರುಪಿ ಠೇವಣಿ ಮಾಡಬಹುದು, ಅದರ ಮೂಲಕವೇ ಹಣ ಪಾವತಿಸಬಹುದು ಮತ್ತು ಅದರ ಮೂಲಕವೇ ಡಿಜಿಟಲ್‌ ಹಣ ಸ್ವೀಕರಿಸಬಹುದು. ಅಂಗಡಿಗಳಲ್ಲಿ ಇಟ್ಟಿರುವ ಕ್ಯುಆರ್‌ ಕೋಡ್‌ ಬಳಸಿ ಹಣ ಪಾವತಿಸಬಹುದು.

ಎಲ್ಲೆಲ್ಲಿ ಬಿಡುಗಡೆ?:

ಮೊದಲ ಹಂತದಲ್ಲಿ ಬೆಂಗಳೂರು, ಮುಂಬೈ, ನವದೆಹಲಿ ಮತ್ತು ಭುವನೇಶ್ವರದಲ್ಲಿ ಡಿಜಿಟಲ್‌ ರುಪಿ ಬಿಡುಗಡೆ ಮಾಡಲಾಗುತ್ತಿದೆ. ನಂತರ ಇದನ್ನು ಅಹಮದಾಬಾದ್‌, ಗ್ಯಾಂಗ್ಟಕ್‌, ಗುವಾಹಟಿ, ಹೈದ್ರಾಬಾದ್‌, ಇಂದೋರ್‌, ಕೊಚ್ಚಿ, ಲಖನೌ, ಪಟನಾ ಮತ್ತು ಶಿಮ್ಲಾಕ್ಕೂ ವಿಸ್ತರಿಸಲಾಗುವುದು.

ಯಾವ ಬ್ಯಾಂಕ್‌?:

ಮೊದಲ ಹಂತದಲ್ಲಿ ಎಸ್‌ಬಿಐ, ಐಸಿಐಸಿಐ, ಯಸ್‌ ಬ್ಯಾಂಕ್‌, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಮೂಲಕ ಡಿಜಿಟಲ್‌ ರುಪಿ ಲಭ್ಯವಾಗಲಿದೆ. ನಂತರ ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ ಂಡಿಯಾ, ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೂ ಯೋಜನೆ ವಿಸ್ತರಣೆಯಾಗಲಿದೆ.

ಡಿಜಿಟಲ್‌ ರುಪಿ ಲಾಭ ಏನು?

ನೋಟು ಮುದ್ರಣದ ಅವಶ್ಯಕತೆ ಇಲ್ಲ, ನೋಟು ಹಾಳಾಗುವ ಭೀತಿ ಇಲ್ಲ, ನೋಟುಗಳ ರೀತಿ ನಿರ್ವಹಣೆ ಬೇಕಿಲ್ಲ, ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಣೆ ಅವಶ್ಯಕತೆ ಇಲ್ಲ, ತತ್‌ಕ್ಷಣದಲ್ಲೇ ಎಷ್ಟುಹಣ ಬೇಕಾದರೂ, ಎಲ್ಲಿಂದ ಎಲ್ಲಿಗೆ ಬೇಕಾದರೂ ಸೆಟ್‌್ಲಮೆಂಟ್‌ ಮಾಡಬಹುದು.

Follow Us:
Download App:
  • android
  • ios