Asianet Suvarna News Asianet Suvarna News

ಅತಿವೇಗದ ಬಸ್‌ ಡಿಕ್ಕಿ ಹೊಡೆದು ಆನೆ ‘ರೌಡಿರಂಗ’ ಬಲಿ

ಕನಕಪುರ, ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ನೂರಾರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತನ್ನ ಹುಂಬತನದಿಂದ ಖ್ಯಾತನಾಮನಾಗಿ ಮೆರೆದಿದ್ದ ರಂಗ ಅಲಿಯಾಸ್‌ ರೌಡಿ ರಂಗ ಆನೆ ಬಸ್‌ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದೆ. ಈ ಸಾಕಾನೆ ಸಾವಿಗೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

Elephant Rowdi Ranga dies by bus accident
Author
Bengaluru, First Published Oct 9, 2018, 10:58 AM IST

ಗೋಣಿಕೊಪ್ಪಲು: ಖಾಸಗಿ ಬಸ್‌ ಒಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಸಾಕಾನೆಯೊಂದು ತೀವ್ರ ಗಾಯಗೊಂಡು ನರಳಾಡಿ ಸ್ಥಳದಲ್ಲೇ ಮೃತಪಟ್ಟಧಾರುಣ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಮತ್ತಿಗೋಡು ಸಾಕಾನೆ ಶಿಬಿರದ ಸಮೀಪ ಈ ಘಟನೆ ನಡೆದಿದ್ದು, ‘ರೌಡಿ ರಂಗ’ನೆಂದೇ ಖ್ಯಾತವಾಗಿದ್ದ ರಂಗ(45) ಸಾವಿಗೀಡಾಗಿರುವ ಸಾಕಾನೆ. ಘಟನೆಗೆ ಸಂಬಂಧಿಸಿ ವನ್ಯಜೀವಿ ಪ್ರದೇಶದಲ್ಲಿ ಅತೀ ವೇಗದಿಂದ ಬಸ್‌ ಚಲಾಯಿಸಿದ ಆರೋಪಿ ಚಾಲಕ ಕೇರಳದ ಇರಿಟ್ಟಿಯ ಇಸ್ಮಾಯಿಲ್‌(40) ಎಂಬಾತನನ್ನು ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ:

ಸಾಕಾನೆ ಶಿಬಿರದಿಂದ ರಾತ್ರಿ ತಿರುಗಾಡಲು ಬಿಟ್ಟಿದ್ದ ರಂಗನಿಗೆ ಸೋಮವಾರ ತಡರಾತ್ರಿ 2 ಗಂಟೆ ಸುಮಾರಿಗೆ ಕೇರಳದ ಕಣ್ಣೂರಿನಿಂದ ಬೆಂಗಳೂರಿನ ಕಡೆಗೆ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಗುದ್ದಿರುವ ರಭಸಕ್ಕೆ ಬೆನ್ನುಮೂಳೆ ಮುರಿದು ರಸ್ತೆ ಬದಿಯಲ್ಲೇ ಕುಸಿದು ಬಿದ್ದು ಒದ್ದಾಡಿತು. ಹೊಟ್ಟೆಯಿಂದ ಅತೀವ ರಕ್ತಸ್ರಾವವಾಗಿತ್ತು. ಮುಂಜಾನೆ 4.15ರ ಸುಮಾರಿಗೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವೈದ್ಯ ಡಾ. ಮುಜಿಬ್‌ ರೆಹಮನ್‌ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ನಂತರ 10 ನಿಮಿಷದಲ್ಲಿ ಆನೆ ಸಾವನ್ನಪ್ಪಿದೆ. ಡಾ.ಮುಜಿಬ್‌ ರೆಹಮನ್‌ ಶವ ಪರೀಕ್ಷೆ ನಡೆಸಿದ ಬಳಿಕ ಸ್ಥಳದಲ್ಲಿಯೇ ಹೂಳಲಾಯಿತು.

ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗದ ಒಂದು ಕಡೆ ಜಖಂ ಆಗಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಕಣ್ಣೀರಿಟ್ಟ ಮಾವುತ:

2016ರಲ್ಲಿ ಮಾಗಡಿಯಲ್ಲಿ ದಾಂಧಲೆ ನಡೆಸಿದ್ದ ಕಾಡಾನೆಯನ್ನು ಸೆರೆ ಹಿಡಿದು ಬನ್ನೇರುಘಟ್ಟಕ್ಕೆ ತರಲಾಗಿತ್ತು. ಅಲ್ಲಿ ಅದರ ಪುಂಡಾಟ ಕಂಡು ‘ರೌಡಿ ರಂಗ’ ಎಂದು ಹೆಸರಿಡಲಾಗಿತ್ತು. ಆದರೆ ಮತ್ತಿಗೋಡು ಶಿಬಿರಕ್ಕೆ ಬಂದ ನಂತರ ಸೌಮ್ಯವಾದ ಕಾರಣ ಕೇವಲ ‘ರಂಗ’ ಅಂತಲೇ ಕರೆಯಲಾಗುತ್ತಿತ್ತು. ಘಟನೆ ತಿಳಿದು ಸಾಕಾನೆ ಶಿಬಿರದಲ್ಲಿ ರಂಗನನ್ನು ನೋಡಿಕೊಳ್ಳುತ್ತಿದ್ದ ಮಾವುತ ಷರೀಫ್‌ ಆನೆಯ ಸಾವಿನ ಸುದ್ದಿ ತಿಳಿದು ಕಣ್ಣೀರಿಟ್ಟಿದ್ದಾರೆ. ‘ಅವನು ಮತ್ತಿಗೋಡಿಗೆ ಬಂದ ಮೇಲೆ ಒಬ್ಬರಿಗೂ ತೊಂದರೆ ಕೊಟ್ಟವನಲ್ಲ. ಮಕ್ಕಳು, ದೊಡ್ಡವರು ಯಾರೇ ಹೋದರು ಏನೂ ಮಾಡುತ್ತಿರಲಿಲ್ಲ. ಈ ನೋವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.

ಪರಿಸರ ಪ್ರೇಮಿಗಳ ಕಂಬನಿ

ಆನೇಕಲ್‌: ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಿಂದ ಪ್ರಾರಂಭಗೊಂಡು ಕನಕಪುರ, ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ನೂರಾರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತನ್ನ ಹುಂಬತನದಿಂದ ಖ್ಯಾತನಾಮನಾಗಿ ಮೆರೆದಿದ್ದ ರಂಗ ಅಲಿಯಾಸ್‌ ರೌಡಿ ರಂಗ ಆನೆ ಬಸ್‌ ಡಿಕ್ಕಿಯಾಗಿ ಅಪಘಾತದಲ್ಲಿ ಮಡಿದಿರುವುದು ದುರದೃಷ್ಠಕರ ಎಂದು ಪರಿಸರ ಮತ್ತು ವನ್ಯಜೀಬಿ ಹಿತರಕ್ಷಣಾ ಸಮಿತಿಯ ಮಂಜುನಾಥ್‌ ಕಂಬನಿ ಮಿಡಿದರು.

ಅವರು ಬನ್ನೇರುಘಟ್ಟದಲ್ಲಿ ಮಾತನಾಡಿ, ಇಂದು ಮುಂಜಾನೆ ಮತ್ತಿಗೊಡು ಆನೆ ಶಿಬಿರ ಸಮೀಪದ ಆಹಾರವನ್ನರಸಿ ಹೊರಟಾಗ ಖಾಸಗಿ ಬಸ್‌ ಡಿಕ್ಕಿಯಾಗಿ ರಂಗ ಮೃತಪಟ್ಟಸುದ್ದಿ ನಮಗೆಲ್ಲಾ ಆಘಾತ ತಂದಿದೆ. ಜನರನ್ನು ತುಳಿಯುವುದು, ವಾಹನಗಳನ್ನು ಜಜ್ಜಿ ತುಳಿಯುವುದು ಬೆಳೆಯನ್ನು ಹಾನಿ ಮಾಡುವ ಜೊತೆಗೆ ಬನ್ನೇರುಘಟ್ಟಜೈವಿಕ ಉದ್ಯಾನವನದ ಸಾಕಾನೆಗಳನ್ನು ಜೊತೆ ಮಾಡಿಕೊಂಡು ಮಾವುತರನ್ನು ಅಟ್ಟಾಡಿಸಿಕೊಂಡು ಬರುವುದು, ಸಾಕಾನೆಗಳನ್ನು ಹುಡುಕಿಕೊಂಡು ಉದ್ಯಾನವನದ ಶಿಬಿರಕ್ಕೆ ಲಗ್ಗೆ ಇಡುವುದು, ಘೀಳಿಡುವುದು ಸೇರಿದಂತೆ ಸಾಕಷ್ಟುಉಪಟಳ ಕೊಡುತ್ತಿದ್ದ. ಹಾಗಾಗಿ ಈ ಆನೆಗೆ ರಂಗ, ರೌಡಿ ರಂಗ ಎಂದು ಕರೆಯಲಾಗುತ್ತಿತ್ತು. ಖಾಸಗೀ ಬಸ್‌ ಡಿಕ್ಕಿಯಾಗಿ ಮರಣವಪ್ಪುವ ಮೂಲಕ ಪ್ರಾಣಿ ಪರಿಯ ಪ್ರಿಯರಿಗೆ ನೋವುಂಟಾಗಿದೆ ಎಂದರು. ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿಯ ನಳಿನಿ ಗೌಡ, ಮಲ್ಲಿಕಾರ್ಜುನ್‌, ನವೀನ್‌ ಸೇರಿದಂತೆ ಬಹುತೇಕ ಸದಸ್ಯರು ರಂಗನ ಸಾವಿಗೆ ಕಂಬನಿ ಮಿಡಿದು ಅಶ್ರುತರ್ಪಣ ಸಲ್ಲಿಸಿದರು.

Follow Us:
Download App:
  • android
  • ios