Asianet Suvarna News Asianet Suvarna News

ಸತತ 2ನೇ ತಿಂಗಳೂ ವಿದ್ಯುತ್‌ ದರ ಏರಿಕೆ ಶಾಕ್‌: ಗೃಹಜ್ಯೋತಿ ಫಲಾನುಭವಿಗಳಿಗೂ ಎಫೆಕ್ಟ್‌?

ಇಂಧನ-ವಿದ್ಯುತ್‌ ಖರೀದಿ ವೆಚ್ಚ: ಯುನಿಟ್‌ಗೆ 50 ಪೈಸೆವರೆಗೆ ಏರಿಕೆ, ಜುಲೈನಿಂದ ಸಂಗ್ರಹ, ಗೃಹಜ್ಯೋತಿ ಫಲಾನುಭವಿಗಳು ಪಾರು 

Electricity Price Increased in Karnataka grg
Author
First Published Jun 4, 2023, 9:27 AM IST

ಬೆಂಗಳೂರು(ಜೂ.04):  ರಾಜ್ಯದಲ್ಲಿ ಮೇ ತಿಂಗಳ 12 ರಂದು ಪ್ರತಿ ಯುನಿಟ್‌ಗೆ 70 ಪೈಸೆಯಷ್ಟು ವಿದ್ಯುತ್‌ ದರ ಹೆಚ್ಚಳ ಮಾಡಿ ಶಾಕ್‌ ನೀಡಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಇದೀಗ ಮತ್ತೆ ‘ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ’ (ಎಫ್‌ಪಿಪಿಸಿಎ) ಹೆಸರಿನಲ್ಲಿ ಪ್ರತಿ ಯುನಿಟ್‌ಗೆ ವಿವಿಧ ಎಸ್ಕಾಂಗಳ ಗ್ರಾಹಕರಿಗೆ ಯುನಿಟ್‌ 41 ಪೈಸೆಯಿಂದ 50 ಪೈಸೆವರೆಗೆ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಪರಿಷ್ಕೃತ ಶುಲ್ಕವನ್ನು ಜುಲೈನಿಂದ ಸಂಗ್ರಹಿಸಲು ತಿಳಿಸಿರುವುದರಿಂದ ‘ಗೃಹ ಜ್ಯೋತಿ’ ಫಲಾನುಭವಿ ಗ್ರಾಹಕರು ಈ ಹೊರೆಯಿಂದ ಪಾರಾಗಲಿದ್ದಾರೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ. ಆದರೆ, ವಾಣಿಜ್ಯ ಸಂಪರ್ಕ ಹೊಂದಿರುವವರು ಹಾಗೂ ಗೃಹಜ್ಯೋತಿ ಫಲಾನುಭವಿಗಳು ಅಲ್ಲದ ಗ್ರಾಹಕರಿಗೆ ಶುಲ್ಕ ಹೊರೆ ಬೀಳಲಿದೆ.

ರಾಜ್ಯದ ಜನತೆಗೆ ವಿದ್ಯುತ್‌ ಶಾಕ್: ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ

ಮೇ 12 ರಂದು ಏಪ್ರಿಲ್‌ 1 ರಿಂದ ಪೂರ್ವಾನ್ವಯವಾಗುವಂತೆ ಈಗಾಗಲೇ ಪ್ರತಿ ಯುನಿಟ್‌ಗೆ 70 ಪೈಸೆಯಷ್ಟುವಿದ್ಯುತ್‌ ದರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಏಪ್ರಿಲ್‌ ಹಾಗೂ ಮೇ ತಿಂಗಳ ಎರಡೂ ಹೆಚ್ಚುವರಿ ಶುಲ್ಕವನ್ನು ಜೂನ್‌ ತಿಂಗಳಲ್ಲಿ ವಿಧಿಸಲಾಗುತ್ತದೆ. ಹೀಗಾಗಿ ಜೂನ್‌ ತಿಂಗಳ ಬಳಕೆಗೆ ಜುಲೈನಲ್ಲಿ ಬರುವ ಬಿಲ್‌ನಲ್ಲಿ ‘ಗೃಹಜ್ಯೋತಿ’ ಫಲಾನುಭವಿಗಳಲ್ಲದವರಿಗೆ ಪ್ರತಿ ಯುನಿಟ್‌ಗೆ 1.90 ರು.ಗಳಷ್ಟುಹೆಚ್ಚುವರಿ ಶುಲ್ಕ ಬೀಳಲಿದೆ.

ಏನಿದು ಶುಲ್ಕ ಹೆಚ್ಚಳ ಆದೇಶ?:

ಜನವರಿ 1ರಿಂದ ಮಾಚ್‌ರ್‍ 31ರವರೆಗೆ ಇಂಧನ ಇಲಾಖೆಗೆ ಹೊರೆಯಾಗಿರುವ ಹೆಚ್ಚುವರಿ ಇಂಧನ ಹಾಗೂ ವಿದ್ಯುತ್‌ ಖರೀದಿ ವೆಚ್ಚವನ್ನು ಏಪ್ರಿಲ್‌ನಿಂದ ಜೂನ್‌ ನಡುವಿನ ಮೂರು ತಿಂಗಳ ಅವಧಿಯಲ್ಲಿ ಗ್ರಾಹಕರಿಂದ ಸಂಗ್ರಹಿಸಬೇಕಾಗಿತ್ತು. ಈ ಸಂಬಂಧ ಮಾ.13ರಂದೇ ಆದೇಶ ಹೊರಡಿಸಿದ್ದ ಕೆಇಆರ್‌ಸಿಯು ಎಸ್ಕಾಂಗಳ ಗ್ರಾಹಕರಿಂದ 3 ತಿಂಗಳ ಅವಧಿಗೆ ಸೀಮಿತವಾಗಿ ಬರೋಬ್ಬರಿ ಪ್ರತಿ ಯುನಿಟ್‌ಗೆ 101 ಪೈಸೆವರೆಗೂ ಹೆಚ್ಚುವರಿ ಶುಲ್ಕ ಸಂಗ್ರಹಿಸಲು ಆದೇಶಿಸಿತ್ತು.

ಆದರೆ, ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ತಾಂತ್ರಿಕ ಕಾರಣಗಳನ್ನು ನೀಡಿ ದರ ಹೆಚ್ಚಳ ಅನುಷ್ಠಾನಗೊಳಿಸಿರಲಿಲ್ಲ. ಹೀಗಾಗಿ ಜನವರಿಯಿಂದ ಮಾ.31ರವರೆಗಿನ ಹೊಂದಾಣಿಕೆ ಶುಲ್ಕವನ್ನು ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳು ಯುನಿಟ್‌ಗೆ 101 ಪೈಸೆಯಂತೆ ಹೆಚ್ಚುವರಿ ಶುಲ್ಕ ವಿಧಿಸಿ ಸಂಗ್ರಹಿಸಬೇಕಾಗಿತ್ತು. ಇದು ಹೊರೆಯಾಗುವ ಸಾಧ್ಯತೆಯಿರುವುದರಿಂದ ಬೆಸ್ಕಾಂ ಜುಲೈನಿಂದ ಸೆಪ್ಟೆಂಬರ್‌ವರೆಗೆ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಎರಡು ತ್ರೈಮಾಸಿಕಗಳಲ್ಲಿ ತಲಾ ಅರ್ಧದಷ್ಟುಶುಲ್ಕ ಸಂಗ್ರಹಿಸಲು ಅವಕಾಶ ಮಾಡಿಕೊಡುವಂತೆ ಕೆಇಆರ್‌ಸಿಗೆ ಮನವಿ ಮಾಡಿತ್ತು. ಅದರಂತೆ ಕೆಇಆರ್‌ಸಿಯು ಶನಿವಾರ ಆದೇಶ ಹೊರಡಿಸಿದೆ.

ವಿದ್ಯುತ್‌ ದರ ಹೆಚ್ಚಳ ಪಟ್ಟಿ

ಎಸ್ಕಾಂ ಎಫ್‌ಪಿಪಿಸಿಎ ಶುಲ್ಕ (ಜುಲೈ-ಸೆಪ್ಟೆಂಬರ್‌) ಎಫ್‌ಪಿಪಿಸಿಎ ಶುಲ್ಕ (ಅಕ್ಟೋಬರ್‌-ಡಿಸೆಂಬರ್‌)
ಬೆಸ್ಕಾಂ 51 ಪೈಸೆ 50 ಪೈಸೆ
ಬೆಸ್ಕಾಂ 47 ಪೈಸೆ 46 ಪೈಸೆ
ಸೆಸ್ಕಾಂ 41 ಪೈಸೆ 41 ಪೈಸೆ
ಹೆಸ್ಕಾಂ 50 ಪೈಸೆ 50 ಪೈಸೆ
ಜೆಸ್ಕಾಂ 34 ಪೈಸೆ 33 ಪೈಸೆ

200 ಯೂನಿಟ್‌ ವಿದ್ಯುತ್‌ ಫ್ರೀ: ಜು.1ರಿಂದ ಜಾರಿ

ಎಸ್ಕಾಂ ವಾರು ಶುಲ್ಕ ಹೆಚ್ಚಳ:

ಕೆಇಆರ್‌ಸಿಯು 2023ರ ಮಾ.13 ರಂದು ಅನುಮೋದನೆ ನೀಡಿರುವ ಪ್ರಕಾರ ಏಪ್ರಿಲ್‌ 2023ರಿಂದ ಜೂನ್‌ 2023ರವರೆಗೆ ಮೂರು ತಿಂಗಳವರೆಗೆ ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ (ಬೆಸ್ಕಾಂ) 101 ಪೈಸೆ, ಮಂಗಳೂರಿನ ಮೆಸ್ಕಾಂ 93 ಪೈಸೆ, ಮೈಸೂರಿನ ಸೆಸ್ಕಾಂ 82 ಪೈಸೆ, ಹುಬ್ಬಳ್ಳಿಯ ಹೆಸ್ಕಾಂ 100 ಪೈಸೆ, ಕಲಬುರಗಿಯ ಜೆಸ್ಕಾಂ 67 ಪೈಸೆಯಷ್ಟುದರ ಹೆಚ್ಚಳ ಮಾಡಬಹುದಿತ್ತು.

ಈ ಹೊರೆಯನ್ನು ಆರು ತಿಂಗಳಿಗೆ ಹಂಚಿರುವುದರಿಂದ ಏಪ್ರಿಲ್‌ 1ರಿಂದ ಜೂನ್‌ 30ರವರೆಗೆ ಸಂಗ್ರಹಿಸುವ ಬದಲು ಜುಲೈ 1, 2023ರಿಂದ ಡಿಸೆಂಬರ್‌ 31ರವರೆಗೆ ವಸೂಲಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 51 ಪೈಸೆ, ಜೆಸ್ಕಾಂ 47 ಪೈಸೆ, ಸೆಸ್‌್ಕ 41 ಪೈಸೆ, ಹೆಸ್ಕಾಂ 50 ಪೈಸೆ, ಜೆಸ್ಕಾಂ 34 ಪೈಸೆಯಷ್ಟುಶುಲ್ಕ ಹೆಚ್ಚಳ ಮಾಡಲಾಗಿದೆ. ಬಳಿಕ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬೆಸ್ಕಾಂ 50 ಪೈಸೆ, ಮೆಸ್ಕಾಂ 46 ಪೈಸೆ, ಸೆಸ್‌ 41 ಪೈಸೆ, ಹೆಸ್ಕಾಂ 50 ಪೈಸೆ, ಜೆಸ್ಕಾಂ ಗ್ರಾಹಕರಿಗೆ 33 ಪೈಸೆಯಷ್ಟುಶುಲ್ಕ ಹೆಚ್ಚಳ ಆಗಲಿದೆ.

Follow Us:
Download App:
  • android
  • ios