ವಿದ್ಯುತ್ ದರ ಏರಿಕೆ ವಾಪಸ್ ಸಾಧ್ಯವಿಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ
ಕೆಇಆರ್‌ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ) ಕೇಂದ್ರ ಕಾಯ್ದೆಯಡಿ ವಿದ್ಯುತ್ ದರ ಏರಿಕೆಯಾಗಿದ್ದು, ಇದರಡಿ ದರ ಏರಿಕೆಯಾಗಿದ್ದನ್ನು ನಾವು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದ ಇಂಧನ ಸಚಿವ ಕೆ.ಜೆ.ಜಾರ್ಜ್
ಬಾಳೆಹೊನ್ನೂರು (ಜೂ.19) ಕೆಇಆರ್‌ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ) ಕೇಂದ್ರ ಕಾಯ್ದೆಯಡಿ ವಿದ್ಯುತ್ ದರ ಏರಿಕೆಯಾಗಿದ್ದು, ಇದರಡಿ ದರ ಏರಿಕೆಯಾಗಿದ್ದನ್ನು ನಾವು ಕಡಿಮೆ ಮಾಡಲು ಸಾಧ್ಯವಿಲ್ಲ. ಕೆಇಆರ್‌ಸಿನವರು ಒಂದು ಬಾರಿ ಏರಿಕೆ ಮಾಡಿದರೆ ಅದನ್ನು ನಾವು ಹಿಂಪಡೆಯಲು ಆಗಲ್ಲ. ಅದಕ್ಕೆ ನಾವು ಬದ್ಧರಾಗಿ ಇರಬೇಕಿದೆ. ಹೀಗಾಗಿ, ಈಗಾಗಲೇ ಏರಿಕೆ ಆಗಿರುವ ಬೆಲೆಯನ್ನು ವಾಪಸ್ ಪಡೆಯಲು ಸಾಧ್ಯವೇ ಇಲ್ಲ ಇಂಧನ ಸಚಿವ ಕೆ.ಜೆ.ಜಾಜ್‌ರ್ ಸ್ಪಷ್ಟಪಡಿಸಿದರು.
ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ವಿದ್ಯುತ್ ಬೆಲೆ ಏರಿಕೆ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿದ್ಯುತ್ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಮಾಡುವ ಪ್ರಕ್ರಿಯೆ 2022ರ ನವೆಂಬರ್ ತಿಂಗಳಿನಿಂದಲೇ ನಡೆದಿದ್ದು, ಮಾಚ್‌ರ್‍ನಲ್ಲಿ ಏರಿಕೆ ಆಗಬೇಕಿತ್ತು. ಆದರೆ, ಆಗ ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಏರಿಕೆ ಮಾಡಿರಲಿಲ್ಲ. ನಂತರ ಮೇ 12ರಂದು ದರ ಏರಿಕೆ ಮಾಡಲಾಗಿದೆ. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮೇ 20ಕ್ಕೆ ಎಂದರು.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಬೆಳವಣಿಗೆ, ಸೋನಿಯಾ ಭೇಟಿ ಮಾಡಿದ ಜಾರ್ಜ್!
ಸೆಸ್ಕಾಂನವರು ಯೂನಿಟ್‌ಗೆ 1.50 ರು. ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಕೆಇಆರ್‌ಸಿ, ಎಲ್ಲಾ ಸಂಘ ಸಂಸ್ಥೆ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಯೂನಿಟ್‌ಗೆ ಕೇವಲ 70 ಪೈಸೆ ಏರಿಕೆ ಮಾಡಿದೆ. ಈಗ ನಮ್ಮ ಸರ್ಕಾರ ಬಂದ ನಂತರ 200 ಯೂನಿಟ್ ವಿದ್ಯುತ್‌ನ್ನು ಗೃಹಬಳಕೆಗೆ ಉಚಿತವಾಗಿ ನೀಡುತ್ತಿದೆ. ಇದರಿಂದಾಗಿ ಗೃಹ ಬಳಕೆದಾರರಿಗೆ ಯಾವುದೇ ತೊಂದರೆಯಿಲ್ಲ. ಗೃಹ ಬಳಕೆದಾರರು ಈ ಹಿಂದೆ ಇದ್ದ ವಿದ್ಯುತ್ ಬಾಕಿಯನ್ನು ಮಾತ್ರ ಪಾವತಿಸಬೇಕಿದೆ ಎಂದರು.
ರೈತರ ಐಪಿ ಸೆಟ್‌ಗಳಿಗೆ ಸಂಪರ್ಕ ಕಲ್ಪಿಸದಿರುವ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಕರೆಂಟ್ ಬಿಲ್ ಕೊಡಬೇಡಿ, ನಾವು ಕಟ್ಟಲ್ಲ: ಮೆಸ್ಕಾಂ ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿದ ಉಡುಪಿ ನಾಗರಿಕ
ಶೃಂಗೇರಿ, ರಂಭಾಪುರಿ ಮಠಕ್ಕೆ ಭೇಟಿ:
ಭಾನುವಾರ ಸಚಿವ ಜಾಜ್‌ರ್ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ರಂಭಾಪುರಿ ಪೀಠಕ್ಕೆ ತೆರಳಿ, ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಫಲ ಸಮರ್ಪಿಸಿ ಆಶೀರ್ವಾದ ಪಡೆದರು.