Asianet Suvarna News Asianet Suvarna News

ಭಾರಿ ಪ್ರಮಾಣದಲ್ಲಿ ಏರುತ್ತಾ ವಿದ್ಯುತ್‌ ಬಿಲ್‌?

ವಿದ್ಯುತ್‌ ಸರಬರಾಜು ಕಂಪನಿಗಳ ಸಿಬ್ಬಂದಿ ವರ್ಗದವರಿಗೆ ನೀಡಲಾಗುವ ನಿವೃತ್ತಿ ವೇತನದ ಮೊತ್ತದ ಹೆಸರಿನಲ್ಲಿ ಅನಗತ್ಯವಾಗಿ ವಿದ್ಯುತ್‌ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾದರೆ ಕೈಗಾರಿಕೆಗಳು ಮತ್ತು ಗೃಹೋಪಯೋಗಿ ವಿದ್ಯುತ್‌ ಗ್ರಾಹಕರ ಮೇಲೆ ಹೊರೆ ಹೆಚ್ಚಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಆಕ್ರೋಶ ವ್ಯಕ್ತಪಡಿಸಿದೆ.

Electricity bill likely  to increase massively  snr
Author
First Published Jan 15, 2023, 6:10 AM IST

  ಬೆಂಗಳೂರು :  ವಿದ್ಯುತ್‌ ಸರಬರಾಜು ಕಂಪನಿಗಳ ಸಿಬ್ಬಂದಿ ವರ್ಗದವರಿಗೆ ನೀಡಲಾಗುವ ನಿವೃತ್ತಿ ವೇತನದ ಮೊತ್ತದ ಹೆಸರಿನಲ್ಲಿ ಅನಗತ್ಯವಾಗಿ ವಿದ್ಯುತ್‌ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾದರೆ ಕೈಗಾರಿಕೆಗಳು ಮತ್ತು ಗೃಹೋಪಯೋಗಿ ವಿದ್ಯುತ್‌ ಗ್ರಾಹಕರ ಮೇಲೆ ಹೊರೆ ಹೆಚ್ಚಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್‌ರೆಡ್ಡಿ, ವಿದ್ಯುಚ್ಛಕ್ತಿ ನಿಗಮದ ಸಿಬ್ಬಂದಿ ವರ್ಗಕ್ಕೆ ಕೊಡಬೇಕಾಗಿರುವ ನಿವೃತ್ತಿ ವೇತನದ ಮೊತ್ತವನ್ನು ವಿದ್ಯುಚ್ಛಕ್ತಿ ಗ್ರಾಹಕರ ಮೇಲೆ ಹಾಕುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ವಿದ್ಯುತ್‌ ಸರಬರಾಜು ಕಂಪನಿಗಳು ಕೈಗಾರಿಕೆಗಳು ಮತ್ತು ಗ್ರಾಹಕರ ಮೇಲೆ ನಿವೃತ್ತಿ ವೇತನದ ಮೊತ್ತವನ್ನು ಹಾಕಲು ಮುಂದಾಗಿವೆ. ಈ ಮೂಲಕ ಗ್ರಾಹಕರು 3,353 ಕೋಟಿ ರು.ಗಳನ್ನು ಮೂರು ವಾರ್ಷಿಕ ಕಂತುಗಳಲ್ಲಿ ಕಟ್ಟಬೇಕಾಗಿದೆ. ಹಾಗೆಯೇ ತಣ್ಣೀರು ಬಾವಿ ಮೊತ್ತಕ್ಕೆ ಸಂಬಂಧಿಸಿದಂತೆ 1,657 ಕೋಟಿ ಬಾಬ್ತನ್ನು ಗ್ರಾಹಕರಿಂದ ತೆರಿಗೆ ಮೂಲಕ ಸಂಗ್ರಹಿಸಲು ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ವಾರ್ಷಿಕ ಸುಮಾರು 1500 ಕೋಟಿ ರು.ಗಳನ್ನು ಗ್ರಾಹಕರೇ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಕೈಗಾರಿಕೆಗಳಿಗೆ ಡಿಮ್ಯಾಂಡ್‌ ಚಾರ್ಜಸ್‌ (ಹೈಟೆನ್ಷನ್‌-ಎಚ್‌ಟಿ), ವಾಣಿಜ್ಯ ಮತ್ತು ಗೃಹಬಳಕೆಯ ಗ್ರಾಹಕರಿಗೆ ಸ್ಥಿರ ಶುಲ್ಕ (ಲೊ ಟೆನ್ಷನ್‌- ಎಲ್‌ಟಿ) ಸೇರಿ ಬೇರೆ ಬೇರೆ ಶುಲ್ಕ ಹಾಕುವಂತೆ ವಿದ್ಯುತ್‌ ಸರಬರಾಜು ಕಂಪನಿಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಿವೆ. ಈ ಪ್ರಸ್ತಾವನೆಯನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿದೆ. ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ಟರೆ ಪ್ರತಿ ತಿಂಗಳು ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು 30 ಸಾವಿರ ರು., ವಾಣಿಜ್ಯ ಮತ್ತು ಗೃಹ ಬಳಕೆ ಗ್ರಾಹಕರು ವಿದ್ಯುತ್‌ ಶುಲ್ಕದ ಜತೆಗೆ ಹೆಚ್ಚುವರಿ 500-600 ರು. ಶುಲ್ಕ ಕಟ್ಟಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊರೋನಾ ಸಂಕಷ್ಟದಿಂದ ಈಗಷ್ಟೇ ಉತ್ಪಾದನಾ ಮತ್ತು ಸೇವಾ ವಲಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ 15,147 ದೊಡ್ಡ ಮತ್ತು ಮಧ್ಯಮ ಪ್ರಮಾಣದ ಉತ್ಪಾದನಾ ಘಟಕಗಳು ಹೈ ಟೆನ್ಷನ್‌ (ಎಚ್‌ಟಿ) ವಿದ್ಯುತ್‌ ಬಳಸಿದರೆ, ಗೃಹ ಬಳಕೆದಾರರು ಲೊ ಟೆನ್ಷನ್‌ (ಎಲ್‌ಟಿ-1) ವಿದ್ಯುತ್‌ ಉಪಯೋಗಿಸುತ್ತಿದ್ದಾರೆ. 5.35 ಲಕ್ಷ ಸಣ್ಣ ಕೈಗಾರಿಕೆಗಳು ಹೈ ಟೆನ್ಷನ್‌-1 ವಿದ್ಯುತ್‌ ಬಳಸುತ್ತಿದ್ದಾರೆ. ರಾಜ್ಯದ ಒಟ್ಟಾರೆ ವಿದ್ಯುತ್‌ ಬಳಕೆಯಲ್ಲಿ ಶೇ.3.20 ಪ್ರಮಾಣದಲ್ಲಿ ಸಣ್ಣ ಕೈಗಾರಿಕೆಗಳು ಉಪಯೋಗಿಸುತ್ತಿದ್ದರೆ, ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು ಶೇ.16.30 ವಿದ್ಯುತ್‌ ಬಳಸುತ್ತಿವೆ. ಅವೈಜ್ಞಾನಿಕವಾಗಿ ವಿದ್ಯುತ್‌ ದರ ಹೆಚ್ಚಿಸುತ್ತಾ ಹೋದರೆ ಈ ಎಲ್ಲ ಉದ್ದಿಮೆಗಳು ಮುಚ್ಚುವ ಹಂತಕ್ಕೆ ಬರಲಿವೆ ಎಂದು ವಿವರಿಸಿದರು.

ವಿದ್ಯುತ್‌ ಬಿಲ್‌ ಎಷ್ಟುಏರಬಹುದು?

ರಾಜ್ಯದ ಎಸ್ಕಾಂಗಳು ಸಲ್ಲಿಸಿರುವ ನೂತನ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ ಪ್ರತಿ ತಿಂಗಳು 30 ಸಾವಿರ ರು. ವಿದ್ಯುತ್‌ ಬಿಲ್‌ ಕಟ್ಟುತ್ತಿರುವ ಕೈಗಾರಿಕೆಗಳು, ಡಿಮ್ಯಾಂಡ್‌ ಚಾರ್ಜಸ್‌ ಸೇರಿ ಒಟ್ಟು 60-65 ಸಾವಿರ ರು. ಪಾವತಿಸಬೇಕಾಗುತ್ತದೆ. ಅದೇ ರೀತಿ, 200, 500 ಹಾಗೂ ಒಂದು ಸಾವಿರ ಯೂನಿಟ್‌ ವಿದ್ಯುತ್‌ ಬಳಸುವ ಆಧಾರದ ಮೇರೆಗೆ ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳು ವಿದ್ಯುತ್‌ ಬಿಲ್‌ ಜತೆಗೆ ಹೆಚ್ಚುವರಿ ಶುಲ್ಕಗಳನ್ನು ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ಪ್ರತಿ ತಿಂಗಳು 1,500 ರು. ವಿದ್ಯುತ್‌ ಬಿಲ್‌ ಪಾವತಿಸುತ್ತಿರುವ ಗೃಹ ಬಳಕೆ ಗ್ರಾಹಕ, 600 ರು. ಸ್ಥಿರ ಶುಲ್ಕ ಸೇರಿ 2,100 ರು. ಕಟ್ಟಬೇಕಾಗುತ್ತದೆ. ಇದರಲ್ಲಿ ಯೂನಿಟ್‌ ವಿದ್ಯುತ್‌ ಶುಲ್ಕವು ಎಂದಿನಂತೆ ಇರಲಿದ್ದು ಸ್ಥಿರ ಶುಲ್ಕ ಹೆಚ್ಚಾಗಲಿದೆ.

- ಎಂ.ಜಿ.ಪ್ರಭಾಕರ್‌

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಸಲಹಾ ಸಮಿತಿಯ ಮಾಜಿ ಸದಸ್ಯ

Follow Us:
Download App:
  • android
  • ios