ಮಂಗಳೂರು: ಇನ್ನೂ ಮೃತರ ಹೆಸರಲ್ಲೇ ಇರುವ ಕರೆಂಟ್‌ ಬಿಲ್‌!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಗೆ ದ.ಕ.ದಲ್ಲಿ ಫಲಾನುಭವಿಗಳು ಇದ್ದರೂ ಹೆಚ್ಚಿನ ಮಂದಿ ಇದರಿಂದ ವಂಚಿತರಾಗುವ ಸಂಭವ ಎದುರಾಗಿದೆ.

electricity bill is still in the name of the deceased in mangaluru dakshina kannada rav

ಆತ್ಮಭೂಷಣ್‌

 ಮಂಗಳೂರು (ಜೂ.19): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಗೆ ದ.ಕ.ದಲ್ಲಿ ಫಲಾನುಭವಿಗಳು ಇದ್ದರೂ ಹೆಚ್ಚಿನ ಮಂದಿ ಇದರಿಂದ ವಂಚಿತರಾಗುವ ಸಂಭವ ಎದುರಾಗಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಹೆಚ್ಚಿನ ಮನೆಗಳ ವಿದ್ಯುತ್‌ ಬಿಲ್‌ಗಳು ಮೃತರ ಹೆಸರಿನಲ್ಲಿ ಇರುವುದು ಈ ಯೋಜನೆಯ ಫಲಾನುಭವಿಯಾಗಲು ಅಡ್ಡಿಯಾಗಲಿದೆ.

ಗೃಹ ಬಳಕೆಗೆ ನೀಡುವ ಉಚಿತ ವಿದ್ಯುತ್‌ ‘ಗೃಹ ಜ್ಯೋತಿ’ ಯೋಜನೆ (Gruhajyoti scheme)ಗೆ ಅರ್ಜಿ ಸಲ್ಲಿಕೆಯನ್ನು ರಾಜ್ಯ ಸರ್ಕಾರ ಭಾನುವಾರದಿಂದ ರಾಜ್ಯಾದ್ಯಂತ ಆರಂಭಿಸಿದೆ. ಅರ್ಜಿ ಸಲ್ಲಿಕೆ ವೇಳೆ ಪ್ರಾಥಮಿಕವಾಗಿ ಆಧಾರ್‌ ಗುರುತಿನ ಚೀಟಿ ಹಾಗೂ ಮೆಸ್ಕಾಂ ಬಿಲ್‌ನ ದಾಖಲೆಯನ್ನು ಮಾತ್ರ ಕೇಳಲಾಗಿದೆ. ಉಳಿದಂತೆ ಯಾವುದೇ ದಾಖಲೆ ಈಗ ಕೇಳುವುದಿಲ್ಲ ಎಂದು ಹೇಳಿದೆ. ಆದರೆ ಯೋಜನೆ ಅನುಷ್ಠಾನ ವೇಳೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸಬೇಕಾಗುವ ಸಂಭವ ಇದೆ. ಬೇರೆ ಯಾವುದೇ ದಾಖಲೆ ಕೇಳದಿದ್ದರೂ ವಿದ್ಯುತ್‌ ಸಂಪರ್ಕ ಮನೆಯ ಯಜಮಾನನ ಹೆಸರಿನಲ್ಲಿ ಇರಲೇ ಬೇಕಾದ್ದು ಕಡ್ಡಾಯ. ಇಲ್ಲದಿದ್ದರೆ ಈ ಯೋಜನೆ ಎಲ್ಲ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗದು.

ರೈತಸಂಘ ಹೋರಾಟದ ಫಲ; 2 ದಶಕದಿಂದ ಕರೆಂಟ್​ ಬಿಲ್​ ಕಟ್ಟದ ಗ್ರಾಮ!

ಸಾವಿರಾರು ಬಿಲ್‌ಗಳು ಮೃತರ ಹೆಸರಲ್ಲಿ!:

ಲಭ್ಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಸಾವಿವಾರು ಗೃಹ ಬಳಕೆಯ ವಿದ್ಯುತ್‌ ಬಿಲ್‌ಗಳು ಈಗಲೂ ಮೃತಪಟ್ಟವರ ಹೆಸರಿನಲ್ಲೇ ಇದೆ. ಹಿರಿಯರು ಗತಿಸಿದರೂ ಬಿಲ್‌ ಮಾತ್ರ ಅವರದೇ ಹೆಸರಿನಲ್ಲಿ ಗ್ರಾಹಕರನ್ನು ತಲುಪುತ್ತಿದೆ!

ಸುಳ್ಯ ತಾಲೂಕಿನಲ್ಲೂ ಸಾವಿರಾರು ಕರೆಂಟ್‌ ಬಿಲ್‌ಗಳು ಮೃತರ ಹೆಸರಿನಲ್ಲೇ ಗ್ರಾಹಕರಿಗೆ ರವಾನೆಯಾಗುತ್ತಿದೆ. ಇದನ್ನು ಹಾಲಿ ಗ್ರಾಹಕರೂ ತಮ್ಮ ಹೆಸರಿಗೆ ವರ್ಗಾಯಿಸಿಲ್ಲ, ವಿದ್ಯುತ್‌ ನಿಗಮ ಕೂಡ ಕಾಲಕಾಲಕ್ಕೆ ಮಾಹಿತಿ ನೀಡಿಲ್ಲ. ಆದರೆ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿಗೆ ಸಿದ್ಧತೆ ಆರಂಭಿಸಿದಾಗ ಎಚ್ಚೆತ್ತ ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್‌ ಬಿಲ್‌ ಮೃತರ ಹೆಸರಿಗೆ ರವಾನೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮೃತರ ಹೆಸರಿನಿಂದ ಹಾಲಿ ಗ್ರಾಹಕರ ಹೆಸರಿಗೆ ವಿದ್ಯುತ್‌ ಬಿಲ್‌ ವರ್ಗಾಯಿಸುವಂತೆ ಮೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಮೃತ ವ್ಯಕ್ತಿಗಳ ಹೆಸರಿನಿಂದ ಹಾಲಿ ಗ್ರಾಹಕರ ಹೆಸರಿಗೆ ವಿದ್ಯುತ್‌ ಬಿಲ್‌ ವರ್ಗಾಯಿಸುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.

ಪಂಚಾಯ್ತಿಗಳಲ್ಲಿ ಸರತಿ ಸಾಲು:

ಗೃಹ ಜ್ಯೋತಿ ಯೋಜನೆಯ ಫಲಾನುಭವಿ ಆಗಬೇಕಾದರೆ ಗೃಹ ಬಳಕೆ ವಿದ್ಯುತ್‌ನ ದಾಖಲೆ ಮನೆಯ ಯಜಮಾನರ ಹೆಸರಿನಲ್ಲಿ ಇರಬೇಕು. ಇದು ಮೃತಪಟ್ಟವರ ಹೆಸರಿನಲ್ಲಿ ಇದ್ದರೆ ಯೋಜನೆ ಫಲಾನುಭವಿ ಆಗಲು ಸಾಧ್ಯವಾಗದು. ಅದಕ್ಕಾಗಿ ಇದನ್ನು ವರ್ಗಾವಣೆ ಮಾಡಿಸಿಕೊಳ್ಳಲು ಮೊದಲು ಗ್ರಾಮ ಪಂಚಾಯ್ತಿಗಳಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ.

200 ರು. ಸ್ಟಾಪ್‌ ಪೇಪರ್‌ ಬಾಂಡ್‌ ಪಡೆದುಕೊಂಡು ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌, ಮನೆ ತರಿಗೆ ರಸೀದಿ, ಕರೆಂಟ್‌ ಬಿಲ್‌, ವಾರಸುದಾರರ ಒಪ್ಪಿಗೆ ಪತ್ರ, ನೋಟರಿ ಪ್ರಮಾಣ ಪತ್ರ ಮಾಡಿ ಬಳಿಕ ಪಂಚಾಯ್ತಿಯ ನಿರಕ್ಷೇಪಣಾ ಪತ್ರ ಕಡ್ಡಾಯ ಇರಬೇಕು. ನಿರಕ್ಷೇಪಣಾ ಪತ್ರ ನೀಡಬೇಕಾದರೆ, ಪಂಚಾಯ್ತಿಗೆ ಬಾಕಿ ಇರುವ ಮನೆ ತೆರಿಗೆ ಹಾಗೂ ನೀರಿನ ತೆರಿಗೆಯನ್ನು ಬಾಕಿ ಇರಿಸುವಂತಿಲ್ಲ. ಹೀಗಾಗಿ ಈ ಯೋಜನೆ ಮೂಲಕವೂ ಪಂಚಾಯ್ತಿಗಳು ಸುಲಭದಲ್ಲಿ ಆದಾಯ ಕ್ರೋಢೀಕರಿಸುವಂತಾಗಿದೆ.

ಯಜಮಾನರ ಹೆಸರಿಗೆ ಬಿಲ್‌ ರವಾನೆ ಅಗತ್ಯ

ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಗೃಹ ವಿದ್ಯುತ್‌ ಬಳಕೆಯ ಗ್ರಾಹಕರಿದ್ದಾರೆ. ಇವರಲ್ಲಿ ಮೃತರ ಹೆಸರಲ್ಲಿ ಎಷ್ಟುಮಂದಿಗೆ ವಿದ್ಯುತ್‌ ಬಿಲ್‌ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಮೆಸ್ಕಾಂ ಅಧಿಕಾರಿಗಳಲ್ಲಿ ಇಲ್ಲ. ಈಗ ಗೃಹ ಜ್ಯೋತಿ ಯೋಜನೆ ಜಾರಿ ಹಂತದಲ್ಲಿ ಫಲಾನುಭವಿಗಳ ಲೆಕ್ಕ ಪಕ್ಕಾ ಆಗಬೇಕಾದರೆ, ವಿದ್ಯುತ್‌ ಬಿಲ್‌ ಮನೆಯ ಯಜಮಾನರ ಹೆಸರಿಗೆ ರವಾನೆಯಾಗುತ್ತಿದೆ ಎಂಬುದೂ ಅಷ್ಟೇ ಪಕ್ಕಾ ಇರಬೇಕು ಎಂಬ ಸೂಚನೆಯನ್ನು ಮೇಲಧಿಕಾರಿಗಳು ನೀಡಿದ್ದಾರೆ. ಹೀಗಾಗಿ ತರಾತುರಿಯಲ್ಲಿ ವಿದ್ಯುತ್‌ ಬಿಲ್‌ನ್ನು ಮನೆಯ ಹಾಲಿ ಯಜಮಾನರ ಹೆಸರಿಗೆ ವರ್ಗಾಯಿಸಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಹಾಕಲಾರಂಭಿಸಿದ್ದಾರೆ ಎಂದು ಗ್ರಾಹಕ ಮೂಲಗಳು ಹೇಳುತ್ತಿವೆ.

ಮೆಸ್ಕಾಂ(Mescom) ವ್ಯಾಪ್ತಿಯಲ್ಲಿ 25 ಲಕ್ಷ ಗೃಹ ಬಳಕೆ ಗ್ರಾಹಕರಿದ್ದಾರೆ, ಅವರಲ್ಲಿ ಮೃತ ವ್ಯಕ್ತಿಗಳ ಹೆಸರಿನಲ್ಲಿ ಈಗಲೂ ವಿದ್ಯುತ್‌ ಬಿಲ್‌ ರವಾನೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈಗ ಸರಿಪಡಿಸುವಂತೆ ಸೂಚಿಸಲಾಗಿದೆ. ಮೃತರ ಹೆಸರಿನಲ್ಲಿ ಕರೆಂಟ್‌ ಬಿಲ್‌ ಇದ್ದರೆ ಗೃಹ ಜ್ಯೋತಿ ಯೋಜನೆಯ ಫಲಾನುಭವಿಯಾಗಲು ಅಡ್ಡಿಯಾಗಲಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಮೆಸ್ಕಾಂ ಅಧಿಕಾರಿಯೊಬ್ಬರು.

 

ಕರೆಂಟ್‌ ಬಿಲ್‌ ಕೊಡಬೇಡಿ, ನಾವು ಕಟ್ಟಲ್ಲ: ಮೆಸ್ಕಾಂ ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿದ ಉಡುಪಿ ನಾಗರಿಕ

ಮನೆಯ ವಿದ್ಯುತ್‌ ಸಂಪರ್ಕ ಮೃತಪಟ್ಟವರ ಹೆಸರಿನಲ್ಲಿ ಇದ್ದರೆ ಅದನ್ನು ಕೂಡಲೇ ಹಾಲಿ ಯಜಮಾನರ ಹೆಸರಿಗೆ ವರ್ಗಾಯಿಸಬೇಕು. ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳ ಸೂಚನೆ ಮೇರೆಗೆ ಸುಳ್ಯದಲ್ಲಿ ದಾಖಲೆ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಅಧಿಕಾರಿಗಳು ಇಂತಹ ವಿದ್ಯುತ್‌ ಸಂಪರ್ಕಗಳ ಪರಿಶೀಲನೆ ನಡೆಸಬೇಕು.

-ಧರ್ಮಪಾಲ, ಕೊಯಿಂಗಾಜೆ, ನ್ಯಾಯವಾದಿ, ನೋಟರಿ, ಸುಳ್ಯ

Latest Videos
Follow Us:
Download App:
  • android
  • ios