ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಇಡಿ ವಿಚಾರಣೆ ಸನ್ನಿಹಿತ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ.ಡಿ. ಸಂಕಷ್ಟ ದಿನೇ ದಿನೇ ಸನಿಹವಾಗುವ ಸಾಧ್ಯತೆ ಕಂಡುಬಂದಿದೆ. ಅವರ ಮೈಸೂರಿನ ಆಪ್ತ ಸಿ.ಟಿ.ಕುಮಾರ್ ವಿಚಾರಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರವರೆಗೂ ವಿಚಾರಣೆ ಬಿಸಿ ತಲುಪುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು(ನ.14): ಮುಡಾ ಹಗರಣ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ರಾಯಚೂರಿನ ಸಂಸದ ಕುಮಾರ್ ನಾಯಕ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಿ.ಟಿ. ಕುಮಾರ್ ಅವರನ್ನು ಸೋಮವಾರ ಪ್ರತ್ಯೇಕವಾಗಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ.ಡಿ. ಸಂಕಷ್ಟ ದಿನೇ ದಿನೇ ಸನಿಹವಾಗುವ ಸಾಧ್ಯತೆ ಕಂಡುಬಂದಿದೆ. ಅವರ ಮೈಸೂರಿನ ಆಪ್ತ ಸಿ.ಟಿ.ಕುಮಾರ್ ವಿಚಾರಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೂ ವಿಚಾರಣೆ ಬಿಸಿ ತಲುಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಶೀಘ್ರ ರಾಜೀನಾಮೆ: ವಿಜಯೇಂದ್ರ
ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಶಾಂತಿನಗರದಲ್ಲಿನ ನಿರಂತರವಾಗಿ ಇಡಿ ಕಚೇರಿಯಲ್ಲಿ ಕುಮಾರ್ ನಾಯಕ್ ಹಾಗೂ ಕುಮಾರ್ ಅವರನ್ನು ವಿಚಾರಣೆ ನಡೆಸಲಾಗಿದೆ. ನೋಟಿಸ್ ಹಿನ್ನೆಲೆಯಲ್ಲಿ ಹಾಜರಾಗಿದ್ದ ಇಬ್ಬರನ್ನೂ ವಿಚಾರಣೆ ನಡೆಸಿ ಮುಡಾ ಹಗರಣ ಸಂಬಂಧ ಪ್ರಶ್ನಿಸಲಾಗಿದೆ. ಅಲ್ಲದೇ, ಸಿದ್ದರಾಮಯ್ಯ ಪಾತ್ರದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕುಮಾರ್ ನಾಯಕ್ ಅವರು 2002ರಿಂದ 2005ರವರೆಗೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು. ಅದೇ ಅವಧಿಯಲ್ಲಿ ಮುಡಾಗೆ ಭೂಪರಿವರ್ತನೆ ಮಾಡಲಾಗಿತ್ತು. ಆಗ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗೆ ಕುಮಾರ್‌ನಾಯಕ್ ಅವರನ್ನು ವಿಚಾರಣೆ ನಡೆಸಿದ್ದರು. ಇದೀಗ ಇ.ಡಿ.ಯಿಂದ ಕುಮಾರ್ ನಾಯಕ್ ಅವರನ್ನು ಆರೂವರೆ ತಾಸು ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ಮುಡಾದಲ್ಲಿ ನಡೆದ ಭೂಪರಿವರ್ತನೆ ಬಗ್ಗೆ ಮತ್ತು ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆಯೂ ವಿಚಾರಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು, ಸಿದ್ದರಾಮಯ್ಯ ಆಪ್ತ ಸಿ.ಟಿ.ಕುಮಾರ್ ಮೈಸೂರು ರಾಜಕೀಯದ ಬಗ್ಗೆ ಗಮನ ವಹಿಸಿದ್ದರಿಂದ ಮುಡಾ ಹಗರಣದಲ್ಲಿಯೂ ಆತನ ಪಾತ್ರ ಇರುವ ಮಾಹಿತಿ ಇರುವ ಕಾರಣ ವಿಚಾರಣೆ ನಡೆಸಲಾಗಿದೆ. ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸಿ.ಟಿ.ಕುಮಾರ್ ಭಾಗಿಯಾಗಿರುವ ಆರೋಪಗಳು ಕೇಳಿಬಂದಿವೆ. ಈ ಕಾರಣಕ್ಕಾಗಿ ವಿಚಾರಣೆ ನಡೆಸಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.
ಮೈಸೂರಿನಲ್ಲಿನ ಮುಡಾ ಕಚೇರಿಗೆ ದಾಳಿ ನಡೆಸಿದಾಗ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಇ.ಡಿ. ಅಧಿಕಾರಿಗಳು, ನಂತರ ಹಗರಣದಲ್ಲಿ ಕೇಳಿಬಂದ ಹೆಸರುಗಳ ಪೈಕಿ ಒಬ್ಬೊಬ್ಬರನ್ನು ಕರೆದು ವಿಚಾರಣೆ ಮಾಡುತ್ತಿದ್ದಾರೆ. ಮುಡಾ ಹಗರಣ ವಿಚಾರದಲ್ಲಿ ಕೂಲಂಕಷವಾಗಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿರುವ ಇ.ಡಿ. ಅಧಿಕಾರಿಗಳು ಸಿದ್ದರಾಮಯ್ಯ ಅವರ ವಿಚಾರಣೆಯನ್ನು ಸಹ ನಡೆಸುವ ಸಮಯ ಸನ್ನಿಹಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮುಡಾ ತೀರ್ಪು ರಾಜಕೀಯ ಪ್ರೇರಿತ ಹೇಳಿಕೆ: ಜಮೀರ್ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಗೌರ್ನರ್ ಸೂಚನೆ
ಯಾರೀ ಸಿ.ಟಿ.ಕುಮಾರ್?
ಮೂಲತಃ ಮೈಸೂರಿನವರೇ ಆದ ಸಿ.ಟಿ.ಕುಮಾರ್ ಹಲವು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ವಾರ್ತೆ ಜೊತೆಗೆ ಹಿಂದೆ ಚಾಮುಂಡೇಶ್ವರಿ, ಈಗ ವರುಣ ಕ್ಷೇತ್ರಕ್ಕೆ ಸಂಬಂಧಿಸಿ ಯಾವುದೇ ಕೆಲಸಗಳಿರಲಿ, ಅರ್ಜಿ ಕೊಡುವುದಿರಲಿ, ಅಲ್ಲಿನ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಶಾಲಾ- ಕಾಲೇಜುಗಳಲ್ಲಿ ಸೀಟು, ಕಾರ್ಖಾನೆಗಳಲ್ಲಿ ಕೆಲಸ, ಮತ್ತಿತರ ಕಾರ್ಯಗಳು ಇವರ ಮೂಲಕವೇ ಹೋಗಬೇಕು. ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದಾಗ ಜನತಾ ದರ್ಶನ ನಡೆಸಿ, ಜನರಿಂದ ಅರ್ಜಿ ಸ್ವೀಕರಿಸಿದರೆ ಕೊಡುವುದು ಇವರ ಕೈಗೆ. ಅಲ್ಲದೆ ಮುಖ್ಯಮಂತ್ರಿ ನಿವಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸುವುದು, ಅವರಿಗೆ ಹೇಳಿ ಕ್ಷೇತ್ರದ ಹಾಗೂ ಜಿಲ್ಲೆಯ ಕೆಲಸ ಮಾಡಿಸುವುದು ಈ ಕುಮಾರನೇ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಪುತ್ರ ಯತೀಂದ್ರ ಅವರ ಕೆಲಸಗಳ ಉಸ್ತುವಾರಿಯನ್ನು ಇವರೇ ನೋಡಿಕೊಳ್ಳುತ್ತಾರೆ.
ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇ.ಡಿ. ವಿಚಾರಣೆ ಎದುರಿಸಿದ್ದೇನೆ. ಇ.ಡಿ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದರ ಕುರಿತು ಮಾಹಿತಿ ನೀಡಿದ್ದೇನೆ. ದಾಖಲೆಗಳ ಸಮೇತ ವಿವರಣೆ ನೀಡಿದ್ದೇನೆ ಎಂದು ಸಂಸದ ಕುಮಾರ್ ನಾಯಕ್ ತಿಳಿಸಿದ್ದಾರೆ.