ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ಐಸಿಸ್‌ಗೆ ಹಣಕಾಸು ನೆರವು ನೀಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ್ದಾರೆ. ಎನ್‌ಐಎ ತನಿಖೆಯ ಆಧಾರದ ಮೇಲೆ, 'ಇಕ್ರಾ ವೆಲ್ಫೇರ್ ಟ್ರಸ್ಟ್' ಮತ್ತು 'ಜಿಎಫ್‌ಎಂ ಟ್ರಸ್ಟ್' ಮೂಲಕ ಸಿರಿಯಾದಲ್ಲಿರುವ ಐಸಿಸ್ ಶಿಬಿರಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಸಿರಿಯಾದ 'ಐಸಿಸ್' (ISIS) ಶಿಬಿರಗಳಿಗೆ ಭಾರತದಿಂದ ಯುವಕರನ್ನು ನೇಮಕಾತಿ ಮಾಡುತ್ತಿದ್ದ ಹಾಗೂ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಜಾಲವನ್ನು ಬೆನ್ನಟ್ಟಿರುವ ಇಡಿ ಅಧಿಕಾರಿಗಳು, ನಗರದ ಒಟ್ಟು 8 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್‌ಐಆರ್ (FIR) ಮತ್ತು ತನಿಖಾ ವರದಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಈ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದೆ.

ಟ್ರಸ್ಟ್‌ಗಳ ಹೆಸರಲ್ಲಿ ಐಸಿಸ್‌ಗೆ ಹಣ ವರ್ಗಾವಣೆ

ಎನ್‌ಐಎ ತನಿಖೆಯ ವೇಳೆ ಅತ್ಯಂತ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ 'ಇಕ್ರಾ ವೆಲ್ಫೇರ್ ಟ್ರಸ್ಟ್' (Ikra Welfare Trust) ಮತ್ತು 'ಜಿಎಫ್‌ಎಂ ಟ್ರಸ್ಟ್' (GFM Trust) ಎಂಬ ಎರಡು ಸಂಸ್ಥೆಗಳ ಮೂಲಕ ಸಿರಿಯಾದಲ್ಲಿರುವ ಐಸಿಸ್ ಉಗ್ರರ ಶಿಬಿರಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಮುಗ್ಧ ಮುಸ್ಲಿಂ ಯುವಕರನ್ನು ಬ್ರೈನ್ ವಾಶ್ ಮಾಡಿ, ಅವರನ್ನು ಐಸಿಸ್ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಹಾಗೂ ಅವರಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲು ಈ ಎರಡು ಟ್ರಸ್ಟ್‌ಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ.

ಪ್ರಮುಖ ಅಡಿಟರ್ ಶಬೀರ್ ಖಾನ್ ನಿವಾಸದ ಮೇಲೆ ದಾಳಿ

ಈ ಇಡೀ ಹಣಕಾಸು ಜಾಲದ ಪ್ರಮುಖ ಕೊಂಡಿಯಾಗಿದ್ದ ಜಿಎಫ್‌ಎಂ ಟ್ರಸ್ಟ್‌ನ ಅಧಿಕೃತ ಅಡಿಟರ್ ಶಬೀರ್ ಖಾನ್ ಎಂಬಾತನನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಸಿದೆ. ಫ್ರೇಜರ್ ಟೌನ್‌ನಲ್ಲಿರುವ 'ಟಾಸ್ಕಿನ್ ಅಪಾರ್ಟ್ಮೆಂಟ್'ನಲ್ಲಿರುವ ಶಬೀರ್ ಖಾನ್ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ತಡರಾತ್ರಿಯವರೆಗೂ ಹಣಕಾಸಿನ ದಾಖಲೆಗಳ ತೀವ್ರ ಪರಿಣಾಮಕಾರಿ ಪರಿಶೀಲನೆ ನಡೆಸಿದ್ದಾರೆ. ವಿದೇಶಗಳಿಂದ ಟ್ರಸ್ಟ್‌ಗೆ ಬಂದಿರುವ ದೇಣಿಗೆ ಹಾಗೂ ಅವುಗಳು ಎಲ್ಲೆಲ್ಲಿಗೆ ವರ್ಗಾವಣೆಯಾಗಿವೆ ಎಂಬ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

2012ರ ಸಿರಿಯಾ ಉಗ್ರರ ಜಾಲಕ್ಕೆ ಬಿಗ್ ಟ್ವಿಸ್ಟ್

ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ, ಈ ಜಾಲವು 2012 ರಿಂದಲೇ ಸಕ್ರಿಯವಾಗಿರುವುದು ಕಂಡುಬಂದಿದೆ. ಬೆಂಗಳೂರಿನಿಂದ ಒಟ್ಟು 6 ಯುವಕರನ್ನು ಆರ್ಥಿಕ ಸಹಾಯ ನೀಡಿ ಸಿರಿಯಾದಲ್ಲಿರುವ ಐಸಿಸ್ ಶಿಬಿರಕ್ಕೆ ಕಳುಹಿಸಿಕೊಡಲಾಗಿತ್ತು. ಈ 6 ಯುವಕರಲ್ಲಿ ಇಬ್ಬರು ಸಿರಿಯಾ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ್ದು, ಉಳಿದ ನಾಲ್ವರು ತೀವ್ರವಾಗಿ ಗಾಯಗೊಂಡು ಅಲ್ಲಿಯೇ ವಾಸವಾಗಿದ್ದರು. ಈ ಸರಣಿ ದೇಶದ್ರೋಹದ ಚಟುವಟಿಕೆಗೆ ಸಂಬಂಧಿಸಿದಂತೆ 2013 ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಭಾರಿ ತನಿಖೆ ನಡೆಸಿದ್ದರು.

ನಾಲ್ವರು ಆರೋಪಿಗಳು ಜೈಲಿಗೆ, ಲಂಡನ್-ದುಬೈನಲ್ಲಿ ಆಸ್ತಿ ಪತ್ತೆ

ಎನ್‌ಐಎ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಫಾನ್ ನಾಸೀರ್, ಮೊಹಮದ್ ತಾಕೀರ್, ಜುಹೈಬ್ ಮನ್ನ ಮತ್ತು ಅಬ್ದುಲ್ ಖಾದಿರ್ ಎಂಬ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಸದ್ಯ ಈ ನಾಲ್ವರೂ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ಟ್ರಯಲ್ ನಡೆಯುತ್ತಿದೆ.

ಬಂಧಿತ ಆರೋಪಿಗಳ ಮನೆಗಳು ಮತ್ತು ಟ್ರಸ್ಟ್ ಕಚೇರಿಗಳ ಮೇಲೆ ಇಡಿ ಈಗ ದಾಳಿ ಮುಂದುವರಿಸಿದೆ. ಈ ಟ್ರಸ್ಟ್‌ಗಳು ಮತ್ತು ಆರೋಪಿಗಳು ಯುಎಇ (UAE), ಲಂಡನ್ ಮತ್ತು ದುಬೈ ಸೇರಿದಂತೆ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಹೊಂದಿರುವುದನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.