* ರಾಹುಲ್, ಕಾಂಗ್ರೆಸ್ ನಾಯಕರಿಗೆ ಕೇಂದ್ರ ಕಿರುಕುಳ* 2-3 ತಾಸಿನ ವಿಚಾರಣೆ 14 ತಾಸಿಗೆ ಅನಗತ್ಯ ವಿಸ್ತರಣೆ* ರಾಹುಲ್ ಅಕ್ರಮ ಎಸಗಿಲ್ಲ ಎಂದು ಜೇಟ್ಲಿ ಹೇಳಿದ್ದರು
ಬೆಂಗಳೂರು(ಜೂ.16): ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಹೆಸರಿನಲ್ಲಿ ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿರುವ ಬಿಜೆಪಿ ದ್ವೇಷದ ರಾಜಕಾರಣ ಖಂಡಿಸಿ ಗುರುವಾರ ಬೆಳಗ್ಗೆ ರಾಜಭವನ ಮುತ್ತಿಗೆ ಹಾಕಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ ನಡೆಸಿ ಬಳಿಕ ರಾಜಭವನ ಮುತ್ತಿಗೆ ಹಾಕಲಿದ್ದಾರೆ.
ಇದಲ್ಲದೆ, ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಇದೇ ರೀತಿಯಲ್ಲಿ ಕೇಂದ್ರದ ಧೋರಣೆ ವಿರುದ್ಧ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ದೇಶದಲ್ಲಿ ನಡೆಯುತ್ತಿರುವ ಅಧಿಕಾರ ದುರುಪಯೋಗ, ಬಿಜೆಪಿ ಸರ್ಕಾರ ನಡೆಸುತ್ತಿರುವ ದ್ವೇಷದ ರಾಜಕಾರಣ ಹಾಗೂ ಪ್ರತಿಭಟನೆ ನಿರತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ರಾಜಭವನ ಚಲೋ, ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾನೂನನ್ನು ಗಾಳಿಗೆ ತೂರಿ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ನಮ್ಮ ನಾಯಕರಾದ ರಾಹುಲ… ಗಾಂಧಿ ಅವರಿಗೆ ಇ.ಡಿ. ನೋಟೀಸ್ ಕೊಟ್ಟು ವಿಚಾರಣೆ ಮಾಡುತ್ತಿದೆ. ಎರಡು-ಮೂರು ಗಂಟೆಯಲ್ಲಿ ಮಾಡುವ ವಿಚಾರಣೆಯನ್ನು 10, 14 ಗಂಟೆಗಳ ಕಾಲ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಯಾವುದೇ ಅಕ್ರಮ ನಡೆಸದಿದ್ದರೂ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಯಾವುದೇ ಅಕ್ರಮ ನಡೆಸಿಲ್ಲ. ಈ ಬಗ್ಗೆ ಅರುಣ್ ಜೇಟ್ಲಿ ಅವರೇ ಹೇಳಿದ್ದರು ಎಂದರು.
ರಾಜ್ ಭವನ್ ಚಲೋ: ಪೊಲೀಸ್ ಭದ್ರತೆ
ಇನ್ನು ಖಾಂಗ್ರೆಸ್ ಆಯೋಜಿಸಿರುವ ರಾಜ್ ಭವನ್ ಚಲೋ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ರಾಜಭವನಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ರಾಜಭವನ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, 6 ಪೊಲೀಸ್ ಇನ್ಸ್ಪೆಕ್ಟರ್, 14 ಪೊಲೀಸ್ ಸಬ್ಇನ್ಸ್ಪೆಕ್ಟರ್, 100 ಪೊಲೀಸ್ ಕಾನ್ಸ್ಟೇಬಲ್ ಹಾಗೂ 3 ಕೆಎಸ್ಆರ್ಪಿ ತುಕಡಿ ಸೇರಿದಂತೆ ಒಟ್ಟು ನೂರಕ್ಕೂ ಹೆಚ್ಚು ಪೊಲೀಸರನ್ನ ರಾಜಭಾವನ ಬಳಿ ನಿಯೋಜನೆ ಮಾಡಲಾಗಿದೆ.
ಸಿಲಿಕಾನ್ ಸಿಟಿಯ ಜನರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ರ್ಯಾಲಿ ಬೆಳಗ್ಗೆ 9.30ಕ್ಕೆ ಕೆಪಿಸಿಸಿ ಕಚೇರಿಯಿಂದ ಆರಂಭವಾಗಲಿದ್ದು ರಾಜಭವನದವರೆಗೆ ಸಾಗಲಿದೆ. ಕಾಂಗ್ರಸ್ ರ್ಯಾಲಿ ಹಿನ್ನೆಲೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಕ್ವೀನ್ಸ್ ರೋಡ್- ಇಂಡಿಯನ್ ಎಕ್ಸ್ ಪ್ರೇಸ್, ಜಿಪಿಓ ಸಿಗ್ನಲ್ ಮೂಲಕ ಈ ರ್ಯಾಲಿ ಸಾಗಲಿದೆ.
ಹೀಗಿರುವಾಗ ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್, ವಸಂತನಗರ, ಶಿವಾಜಿನಗರ, ಕೋಲ್ಸ್‌ಪಾರ್ಕ್, ನಂದಿ ದುರ್ಗ ರೋಡ್, ವಿಧಾನ ಸೌಧ, ಕೆ ಆರ್ ಸರ್ಕಲ್ ಸೇರಿದಂತೆ ಸಿಲಿಕಾನ್‌ಸಿಟಿಯ ಹೃದಯ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಕೆಲಸವಿಟ್ಟುಕೊಂಡು ಪ್ರಯಾಣಿಸುವವರು ಈ ರಸ್ತೆಗಳನ್ನು ಬಿಟ್ಟು ಸಂಚರಿಸೋದೇ ಉತ್ತಮ
