* ಬೆಳ್ಳಂಬೆಳಗ್ಗೆ 2 ಬಾರಿ ಕಂಪಿಸಿದ ಭೂಮಿ* 10 ಕಿ.ಮೀ. ಆಳದಲ್ಲಿ ಕಂಪನ* 2 ವಾರಗಳ ಬಳಿಕ ವಿಜಯಪುರ ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ನಡುಗಿದ ಭೂಮಿ
ವಿಜಯಪುರ/ಬಾಗಲಕೋಟ/ಅಥಣಿ(ಜು.10): ಪದೇ ಪದೇ ಭೂಕಂಪನವಾಗುತ್ತಿರುವ ವಿಜಯಪುರ, ಸಮೀಪದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಹಲವೆಡೆ ಶನಿವಾರ ಬೆಳಗಿನ ಜಾವ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.4ರಷ್ಟು ತೀವ್ರತೆ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ಹಲವೆಡೆ ಶನಿವಾರ ಬೆಳಗ್ಗೆ 5.44 ಹಾಗೂ 6.22ರ ಸುಮಾರಿಗೆ ಸುಮಾರು 2-3 ಸೆಕೆಂಡ್ ಭೂಮಿ ಕಂಪಿಸಿದೆ. ವಿಜಯಪುರ ನಗರದ ಜಲನಗರ, ಇಬ್ರಾಹಿಂಪುರ, ಕಸ್ತೂರಿ ಕಾಲನಿ, ಆದರ್ಶನಗರ, ಗೋಳಗುಮ್ಮಟ ಪ್ರದೇಶ, ಕಾಸಗೇರಿ ಓಣಿ, ಕೆ.ಸಿ. ನಗರದಲ್ಲಿ ಕಂಪನ ಉಂಟಾಗಿದೆ. ಜತೆಗೆ ಇಂಡಿ ತಾಲೂಕಿನ ಇಂಡಿ ರೈಲ್ವೆ ಸ್ಟೇಶನ್, ಚಿಕ್ಕಬೇವನೂರ, ಮಿರಗಿ, ನಾದ, ಗೊಳಸಾರ, ತಿಕೋಟಾ ತಾಲೂಕಿನ ತಿಕೋಟಾ, ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಘೋಣಸಗಿ, ಸೋಮದೇವರ ಹಟ್ಟಿಮುಂತಾದ ಕಡೆಗಳಲ್ಲಿ ಭೂಕಂಪನವಾಗಿದೆ. ಚಡಚಣ ತಾಲೂಕಿನ ಚಡಚಣ, ಲೋಣಿ ಬಿ.ಕೆ., ಇಂಚಗೇರಿ, ಧೂಳಖೇಡ ಮತ್ತಿತರ ಕಡೆಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ಬಸವನ ಬಾಗೇವಾಡಿ ತಾಲೂಕಿನ ಹಲವೆಡೆ ಭೂಕಂಪನದ ಅನುಭವವಾಗಿದೆ.
ವಿಜಯಪುರದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ: 4.9 ತೀವ್ರತೆ ದಾಖಲು!
ಇನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ ಗ್ರಾಮ ಸೇರಿದಂತೆ ಹಲವೆಡೆ 2 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿ ವ್ಯಾಪ್ತಿಯ ತುಬಚಿ, ಶೂರ್ಪಾಲಿ, ಜಂಬಗಿ ಕೆಡಿ ಹಾಗೂ ರಬಕವಿ-ಬನಹಟ್ಟಿತಾಲೂಕಿನ ರಾಂಪೂರ ಮತ್ತು ಹೊಸೂರು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿಗ್ರಾಮದಲ್ಲಿಯೂ ಭೂಮಿ ಕಂಪಿಸಿರುವ ಅನುಭವವಾಗಿದೆ.
ವಿಜಯಪುರ ನಗರ ವ್ಯಾಪ್ತಿ ಮತ್ತು ಬಸವನಬಾಗೇವಾಡಿಯ ಮನಗೂಳಿಯಲ್ಲಿ ಜೂ.24ರಂದು ಲಘುಭೂಕಂಪವಾಗಿತ್ತು. ಆದು ರಿಕ್ಟರ್ ಮಾಪಕದಲ್ಲಿ 2.4ರಷ್ಟುದಾಖಲಾಗಿತ್ತು. ಇದೀಗ 2 ವಾರಗಳ ಬಳಿಕ ವಿಜಯಪುರ ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಭೂಮಿ ನಡುಗಿದೆ.
10 ಕಿ.ಮೀ. ಆಳದಲ್ಲಿ ಕಂಪನ
ವಿಜಯಪುರ ತಾಲೂಕಿನ ಕನ್ನೂರಿನಿಂದ 2.30 ಕಿ.ಮೀ. ದೂರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಆಗ್ನೇಯ ದಿಕ್ಕಿನಲ್ಲಿ ಈ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯಿಂದ ಸುಮಾರು 10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪನ ದಾಖಲಾಗಿದೆ ಅಂತ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
