ಜಿಲ್ಲೆಯಾದ್ಯಂತ ಇಂದು ಮತ್ತೆ ಭೂಮಿ ನಡುಗಿದೆ. ಒಂದು ಬಾರಿ ಅಲ್ಲ ಸತತವಾಗಿ ಎರಡು ಬಾರಿ ಭೂಮಿ ಕಂಪಿಸಿದೆ. ವಿಜಯಪುರ ನಗರ ಸೇರಿದಂತೆ ಇಂಡಿ, ಬಬಲೇಶ್ವರ, ತಿಕೋಟ, ನಾಗಠಾಣ, ತಾಂಬಾ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂಕಂಪನದ ಅನುಭವವಾಗಿದೆ. 

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜು.09): ಜಿಲ್ಲೆಯಾದ್ಯಂತ ಇಂದು ಮತ್ತೆ ಭೂಮಿ ನಡುಗಿದೆ. ಒಂದು ಬಾರಿ ಅಲ್ಲ ಸತತವಾಗಿ ಎರಡು ಬಾರಿ ಭೂಮಿ ಕಂಪಿಸಿದೆ. ವಿಜಯಪುರ ನಗರ ಸೇರಿದಂತೆ ಇಂಡಿ, ಬಬಲೇಶ್ವರ, ತಿಕೋಟ, ನಾಗಠಾಣ, ತಾಂಬಾ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಮತ್ತೆ ಭೂಕಂಪನದಿಂದ ಜನರು ಬೆಚ್ಚಿಬಿದ್ದಿದ್ದಾರೆ.

ಗುಮ್ಮಟನಗರಿಯಲ್ಲಿ ಭೂಮಿ ಗಢಗಢ: ನಸುಕಿನ ಜಾವ 6 ಗಂಟೆ 22 ನಿಮಿಷಕ್ಕೆ ಹಾಗೂ 6 ಗಂಟೆ 24 ನಿಮಿಷಕ್ಕೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿಯ ಆಳದಿಂದ ಗಢಗಢ ಅಂತ ಸದ್ದು ಬರುವ ಮೂಲಕ ಭೂಮಿ ನಡುಗಿದ ಅನುಭವಾಗಿದೆ. ಮನೆಯಲ್ಲಿದ್ದ ಜನರು ಓಡೋಡಿ ಹೊರಗೆ ಬಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ದನ ಕರುಗಳು ಹಗ್ಗ ಹರಿದುಕೊಂಡು ಓಡಾಡಿವೆ ಎನ್ನುವ ಮಾಹಿತಿಗಳು ಬಂದಿವೆ. ಇಂಚಗೇರಿ ಗ್ರಾಮದ ಇಂಚಗೇರಿ ಮಠದಲ್ಲಿ ಭೂಕಂಪನ ವಾಗ್ತಿದ್ದಂತೆ ಅಲ್ಲಿರುವ ನೂರಾರು ನವಿಲುಗಳು ಬೆದರಿ ಕೂಗಿವೆ.

ವಿಜಯಪುರ: ಗ್ರಾಮೀಣ ಭಾಗದಲ್ಲಿ ಬಂದ್‌ ಆಯ್ತಾ ಬಿಸಿಯೂಟ..?

ಜತ್ತ್‌ ತಾಲೂಕಿನಲ್ಲಿ ಬಿರುಕು ಬಿಟ್ಟ ಮನೆ: ಸಾಂಗಲಿ ಜಿಲ್ಲೆಯ ಜತ್ತ್‌ ತಾಲೂಕಿನಲ್ಲು ಭೂಕಂಪನ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ. ಇಲ್ಲಿನ ಮರಬಗಿ ಗ್ರಾಮದ ಅಣ್ಣಾರಾಯ್‌ ಗದ್ಯಾಳ ಎಂಬುವರ ಮನೆ ಬಿರುಕು ಬಿಟ್ಟಿದೆ. ಭೂಕಂಪನದ ಸದ್ದಿಗೆ ಅಣ್ಣಾರಾಯ ಮನೆಯಲ್ಲಿನ ದನ ಕರುಗಳು ಓಡಾಡಿವೆ. ಜನರು ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡೋಡಿ ಬಂದಿದ್ದಾರೆ. ಹೊರಗೆ ಬಂದು ನೋಡಲಾಗಿ ಮನೆ ಬಿರುಕು ಬಿಟ್ಟಿದ್ದು ಗಮನಕ್ಕೆ ಬಂದಿದೆ ಎಂದಿದ್ದಾರೆ ಅಣ್ಣಾರಾಯ ಗದ್ಯಾಳ.

ಸಿಸಿಟಿವಿಗಳಲ್ಲು ಕಂಪನದ ದೃಶ್ಯ ಸೆರೆ: ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಉಂಟಾದ ಭೂಕಂಪನದ ದೃಶ್ಯಗಳು ಸಿಸಿಟಿವಿಗಳಲ್ಲು ಸೆರೆಯಾಗಿವೆ. ಭೂಕಂಪನ ಉಂಟಾಗ್ತಿದ್ದಂತೆ ಮನೆಯಲ್ಲಿನ ಜನರು ಎದ್ದು ಹೊರಗೆ ಓಡಿ ಬರುವುದು, ಮನೆ ಎದುರಿನ ವಿದ್ಯುತ್‌ ಕಂಬದ ತಂತಿಗಳು ಅಲುಗಾಡುವ ದೃಶ್ಯಗಳು ನಗರದ ನಿವಾಸಿ ಸಂತೋಷ ಪಾಟೀಲ್‌ ಎಂಬುವರ ಸಿಸಿಟಿವಿಯಲ್ಲಿ ದಾಖಲಾಗಿವೆ. ಇನ್ನು ಮತ್ತೋರ್ವರ ಮನೆಯ ಸಿಸಿಟಿವಿಯಲ್ಲಿ ಭೂಕಂಪನಕ್ಕೆ ಅಲ್ಲಿದ್ದ ನೀರಿನ ಪೈಪ್‌ ಕಂಪಿಸೋ ದೃಶ್ಯವು ಸೆರೆಯಾಗಿದೆ.



4.9 ಹಾಗೂ 4.6 ತೀವ್ರತೆ ದಾಖಲು:
ಎರಡು ಬಾರಿ ಭೂಮಿ ಕಂಪಿಸಿದ್ದು, ಎರಡು ತೀವ್ರತೆಗಳು ದಾಖಲಾಗಿವೆ. ಭೂಕಂಪನದ ಬಗ್ಗೆ ಮಾಹಿತಿ ನೀಡುವ ವಿಶೇಷ ಆಫ್‌ಗಳಲ್ಲು ಎರಡು ಬಾರಿ ಭೂಕಂಪನವಾಗಿರುವ ಬಗ್ಗೆ ಪಕ್ಕಾ ಮಾಹಿತಿ ಅಪಡೇಟ್‌ ಆಗಿದೆ. ಗೂಗಲ್‌ ಸಹ ವಿಜಯಪುರದಲ್ಲಿ ಉಂಟಾದ ಭೂಕಂಪನವನ್ನ ರಿಪೋರ್ಟ್‌ ಮಾಡಿದೆ. ಬೆಳಗಿನ ಜಾವ 6.22 ನಿಮಿಷಕ್ಕೆ 4.9 ರಷ್ಟು ತೀವ್ರತೆ ದಾಖಲಾಗಿದೆ. 6 ಗಂಟೆ 24 ನಿಮಿಷಕ್ಕೆ 4.6 ನಷ್ಟು ತೀವ್ರತೆ ದಾಖಲಾಗಿದೆ. ಹಾಗೇ ನೋಡಿದ್ರೆ ಕಳೆದ ವರ್ಷ ವಿಜಯಪುರದಲ್ಲಿ ಉಂಟಾದ ಭೂಕಂಪನಕ್ಕಿಂತಲು ನಡುಗಿದ ಪ್ರಮಾಣ ಹೆಚ್ಚಿತ್ತು ಎಂದು ಸಾರ್ವಜನಿಕರು ಬಣ್ಣಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಭೂಕಂಪನ ಕೇಂದ್ರಗಳು: ಮಹಾರಾಷ್ಟ್ರ ರಾಜ್ಯದ ಸಾಂಗಲಿ ಹಾಗೂ ಸೊಲ್ಲಾಪುರಗಳು ಭೂಕಂಪನ ಕೇಂದ್ರಗಳು ಎನ್ನಲಾಗಿದೆ. ಮೊದಲಿಗೆ 6.22 ಕ್ಕೆ 4.9 ತೀವ್ರತೆಯಲ್ಲಿ ಉಂಟಾದ ಭೂಕಂಪನ ವಿಜಯಪುರ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಭೂಕಂಪನ ಕೇಂದ್ರ ಎಂದು ಅಂತರ್ಜಾಲದಲ್ಲಿ ಮಾಹಿತಿ ಸಿಗ್ತಿದೆ. ಇನ್ನು 6.24ಕ್ಕೆ 4.6 ತೀವ್ರತೆಯಲ್ಲಿ ಉಂಟಾದ ಭೂಕಂಪನ ಮಹಾರಾಷ್ಟ್ರದ ಸಾಂಗಲಿ ಕೇಂದ್ರ ಬಿಂದು ಎನ್ನಲಾಗ್ತಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಈವರೆಗು ಅಧಿಕೃತ ಮಾಹಿತಿ ನೀಡಿಲ್ಲ. ಮಾಹಿತಿಗಾಗಿ ವಿಜಯಪುರ ಜಿಲ್ಲಾಡಳಿತ ಕಾಯುತ್ತಿದೆ.

Vijayapura: ಕೋವಿಡ್ ನಂತರ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಅಜ್ಜನ ಜಾತ್ರೆಗೆ ಅದ್ಧೂರಿ ಸಿದ್ಧತೆ!

ಮುಂಬೈ-ಪೂಣೆಯಲ್ಲು ಭೂಕಂಪನ ಅನುಭವ: ವಿಜಯಪುರ ಜಿಲ್ಲೆಯಾದ್ಯಂತ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ರಬಕವಿ, ಜಮಖಂಡಿ, ಮಹಾರಾಷ್ಟ್ರದ ಸಾಂಗಲಿ, ಸೊಲ್ಲಾಪುರ, ಪಂಡರಾಪೂರ ಪೂಣೆ, ಮುಂಬೈನಲ್ಲು ಭೂಕಂಪನದ ಅನುಭವ ಉಂಟಾಗಿದೆ. ಆದ್ರೆ ವಿಜಯಪುರ-ಸೊಲ್ಲಾಪೂರ ಭಾಗದಲ್ಲಿ ತೀವ್ರತೆ ಹೆಚ್ಚು ಅನುಭವಕ್ಕೆ ಬಂದಿದೆ. ಈ ಸಂಬಂಧ ಅಧಿಕೃತ ಮಾಹಿತಿಯನ್ನು ವಿಜಯಪುರ ಜಿಲ್ಲಾಡಳಿತ ಕಲೆಹಾಕುತ್ತಿದೆ. ಹಿಂದೆ ಮಸೂತಿ-ಮಲಘಾಣ ಭಾಗದಲ್ಲಿ ಅಳವಡಿಕೆ ಮಾಡಲಾಗಿದ್ದ ಭೂಕಂಪನ ಮಾಪಕದಲ್ಲಿ ಇದು ರೆಕಾರ್ಡ್‌ ಆಗಿದೆಯಾ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಳ್ತಿದ್ದಾರೆ.