ಕೈದಿಗಳಿಗೆ ಜಿಹಾದಿ ಬೋಧನೆ: ಜೈಲಲ್ಲಿನ ಶಂಕಿತ ಉಗ್ರರ ಮೇಲೆ ಇನ್ನು ಹದ್ದಿನ ಕಣ್ಣು
ಜೈಲಿನಲ್ಲಿರುವ ಶಂಕಿತ ಭಯೋತ್ಪಾದಕರ ಮೇಲಿನ ಕಣ್ಗಾವಲಿಗೆ ಅಧೀಕ್ಷಕರ (ಸೂಪರಿಂಟೆಂಡೆಂಟ್) ಸಾರಥ್ಯದಲ್ಲಿ ವಿಶೇಷ ತಂಡವನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯಸ್ಥರು ನೇಮಿಸಿದ್ದಾರೆ.

ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಸೆ.24): ಮುಸ್ಲಿಂ ಸಮುದಾಯದ ಕೈದಿಗಳಿಗೆ ಜಿಹಾದಿ ಬೋಧನೆ ಹಾಗೂ ಅನ್ಯಧರ್ಮೀಯರ ಮತಾಂತರಕ್ಕೆ ಯತ್ನ ಸೇರಿದಂತೆ ಅಕ್ರಮ ಚಟುವಟಿಕೆಗಳ ಆರೋಪ ಹಿನ್ನಲೆಯಲ್ಲಿ ಜೈಲಿನಲ್ಲಿರುವ ಶಂಕಿತ ಭಯೋತ್ಪಾದಕರ ಮೇಲಿನ ಕಣ್ಗಾವಲಿಗೆ ಅಧೀಕ್ಷಕರ (ಸೂಪರಿಂಟೆಂಡೆಂಟ್) ಸಾರಥ್ಯದಲ್ಲಿ ವಿಶೇಷ ತಂಡವನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯಸ್ಥರು ನೇಮಿಸಿದ್ದಾರೆ. ಈ ಮೊದಲು ಶಂಕಿತ ಉಗ್ರರ ಬ್ಯಾರಕ್‌ಗಳ ಮೇಲುಸ್ತುವಾರಿಯನ್ನು ಜೈಲರುಗಳು ಹಾಗೂ ಸಹಾಯಕ ಸೂಪರಿಂಟೆಂಡೆಂಟ್‌ಗಳು ನಿರ್ವಹಿಸುತ್ತಿದ್ದರು.
ಈಗ ನೇರವಾಗಿ ಅಧೀಕ್ಷಕರಿಗೆ ಶಂಕಿತ ಭಯೋತ್ಪಾದಕರ ಭದ್ರತೆಯ ಹೊಣೆಗಾರಿಕೆ ವಹಿಸಲಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಕ ಕೃತ್ಯಕ್ಕೆ ಸಂಚು ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ -ಎ-ತೊಯ್ಬಾದ (ಎಲ್‌ಇಟಿ) ಐವರು ಶಂಕಿತ ಉಗ್ರರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೇರಳ ಮೂಲದ ಶಂಕಿತ ಉಗ್ರ ಟಿ.ನಸೀರ್ ಹಾಗೂ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರಿಗೆ ಚಾಕು ಇರಿತ ಪ್ರಕರಣದ ಆರೋಪಿ ಜಬೀವುಲ್ಲಾನಿಗೆ ಬೆಳಗಾವಿ ಹಿಂಡಲಗ ಜೈಲಿನಲ್ಲಿದ್ದ ಶಂಕಿತ ಉಗ್ರರು ಜಿಹಾದಿ ಭೋದಿಸಿದ್ದ ಸಂಗತಿ ಬಯಲಾಗಿತ್ತು.
ಮಂಡ್ಯ ನಗರ, ಮದ್ದೂರು ಬಂದ್ ಭರ್ಜರಿ ಯಶಸ್ವಿ: ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ
ಹಾಗೆ ಹಣದಾಸೆ ತೋರಿಸಿ ಓರ್ವ ಹಿಂದೂ ಹಾಗೂ ಇಬ್ಬರು ಕ್ರೈಸ್ತ ಧರ್ಮೀಯರನ್ನು ಇಸ್ಲಾಂಗೆ ಜೈಲಿನಲ್ಲೇ ಮತಾಂತರಿಸಲು ಶಂಕಿತ ಉಗ್ರ ನಸೀರ್ ಯತ್ನಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಎರಡು ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ (ಎಡಿಜಿಪಿ) ಮಾಲಿನಿ ಕೃಷ್ಣಮೂರ್ತಿ ಅವರು, ಶಂಕಿತ ಉಗ್ರರಿಗೆ ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ. ಪ್ರತಿ ದಿನ ಸೂಪರಿಂಟೆಂಡೆಂಟ್ ಅವರಿಗೆ ಶಂಕಿತರ ಉಗ್ರರ ಕುರಿತು ವರದಿ ಸಲ್ಲಿಸುವಂತೆ ಸಹ ಎಡಿಜಿಪಿ ಸೂಚಿಸಿದ್ದಾರೆ.
ಹೇಗಿರಲಿದೆ ಇನ್ನು ಭದ್ರತೆ?: ನಾಡಿನ ಸೆರೆಮನೆಗಳ ಕತ್ತಲ ಕೋಣೆಗಳಲ್ಲಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ, 2013ರ ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ, 2015ರ ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚಿನ ಶಂಕಿತ ಉಗ್ರರು ಇದ್ದಾರೆ. ಈ ಪೈಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 85 ಹಾಗೂ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 15 ಮಂದಿ ಇದ್ದಾರೆ.
ಈಗ ಶಂಕಿತ ಉಗ್ರರಿಗೆ ಸಹ ಕೈದಿಗಳ ಸಂಪರ್ಕವನ್ನು ಕಡಿತಗೊಳಿಸಿ ಕಾರಾಗೃಹದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದ 85 ಶಂಕಿತ ಉಗ್ರರ ಮೇಲೆ ಓರ್ವ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ಎಎಸ್‌ಪಿ, 3 ಜೈಲರ್‌ಗಳು, 5 ವಾರ್ಡನ್‌ಗಳು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್‌ಎಫ್) ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅದೇ ರೀತಿ ಬೆಳಗಾವಿ ಜೈಲಿನಲ್ಲಿ ಸಹ ಸೂಪರಿಂಟೆಂಡೆಂಟ್ ಸಾರಥ್ಯದಲ್ಲಿ ಪ್ರತ್ಯೇಕ ಭದ್ರತೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ''ಕನ್ನಡಪ್ರಭ''ಕ್ಕೆ ತಿಳಿಸಿದ್ದಾರೆ.
ಶಂಕಿತ ಉಗ್ರರಿಗೆ ಹೊಸ ಜೈಲು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿಶೇಷ ಭದ್ರತಾ ಕಾರಾಗೃಹ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನಾರು ತಿಂಗಳಲ್ಲಿ ಕಟ್ಟಡ ಸಿದ್ದವಾಗಲಿದೆ. ಬಳಿಕ ಆ ಜೈಲಿಗೆ ಶಂಕಿತ ಉಗ್ರರನ್ನು ವರ್ಗಾಯಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆ: ಕಾರಾಗೃಹದಲ್ಲಿ ಕೈದಿಗಳ ಭದ್ರತೆಗೆ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ. ಕಾರಾಗೃಹದ ಕೈದಿಗಳ ಅನುಗುಣವಾಗಿ ಸಿಬ್ಬಂದಿ ನೇಮಕವಾಗಿಲ್ಲ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ತಲಾ 6 ಕೈದಿಗಳಿಗೆ ಓರ್ವ ಜೈಲು ಸಿಬ್ಬಂದಿ ಇರಬೇಕು. ಆದರೆ ಪ್ರಸುತ್ತ 400 ಕೈದಿಗಳಿಗೆ ಓರ್ವ ಸಿಬ್ಬಂದಿ ಇದ್ದಾನೆ. ಒಟ್ಟಾರೆ ಮಂಜೂರಾಗಿರುವ 965 ಹುದ್ದೆಗಳಲ್ಲಿ 422 ಹುದ್ದೆಗಳು ಖಾಲಿ ಇವೆ ಎಂದು ಮೂಲಗಳು ಹೇಳಿವೆ.
ಈ ವರ್ಷದಿಂದ 9, 11ನೇ ಕ್ಲಾಸಿಗೂ ಇನ್ನು ಪಬ್ಲಿಕ್ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಆದೇಶ
ಕಾರಾಗೃಹಗಳಲ್ಲಿ ಶಂಕಿತ ಉಗ್ರರ ಭದ್ರತೆಗೆ ಈಗ ಅಧೀಕ್ಷಕರನ್ನು ನೇಮಿಸಲಾಗಿದ್ದು, ಮತ್ತಷ್ಟು ಭದ್ರತಾ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ. ಅಕ್ರಮ ಚಟುವಟಿಕೆಗಳಿಗೆ ನೆರವಾದರೆ ಮುಲಾಜಿಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗುತ್ತದೆ.
ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ