ರೆಮ್ಡೆಸಿವಿರ್ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಕೇಂದ್ರ ಸಚಿವ ಸದಾನಂದ ಗೌಡ

* ನಾಳೆ ಭಾರತ ತಲುಪಲಿರುವ 40,000 ಸೀಸೆ ಕಪ್ಪುಶಿಲೀಂಧ್ರ ಔಷಧ
* ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ರಾಜ್ಯದಲ್ಲೇ ಬಳಸಲು ತಾತ್ವಿಕ ಒಪ್ಪಿಗೆ
* ರಾಜ್ಯಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ: ಡಾ.ಅಶ್ವತ್ಥನಾರಾಯಣ
 

DV Sadananda Gowda Talks Over Allocation of Remdesivir to Karnataka grg

ಬೆಂಗಳೂರು(ಮೇ.22): ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಬರುವ ವಾರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದು ಸಕ್ರಿಯ ಪ್ರಕರಣಗಳನ್ನು ಆಧರಿಸಿ ರಾಜ್ಯಕ್ಕೆ ಸಿಂಹಪಾಲು ದೊರೆಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಈ ವಾರದ ಬಳಕೆಗಾಗಿ ರಾಜ್ಯಕ್ಕೆ ಅತಿಹೆಚ್ಚು 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗಿತ್ತು. ಮೇ. 24ರಿಂದ ಮೇ. 30ರವರೆಗಿನ ಬಳಕೆಗಾಗಿಯೂ ರಾಜ್ಯಕ್ಕೆ ಹಚ್ಚಿನ ರೆಮ್ಡೆಸಿವಿರ್ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗುತ್ತಿದ್ದು ಎಂಫೋಟೆರಿಸಿನ್-ಬಿ (Amphotericin-B) ಔಷಧಕ್ಕಾಗಿ ಎಲ್ಲ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ಕರ್ನಾಟಕದಿಂದಲೂ 20 ಸಾವಿರ ವಯಲ್ಸ್’ಗೆ ಬೇಡಿಕೆ ಬಂದಿದೆ. ಆಂತರಿಕವಾಗಿ ಇದರ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ (ಭಾರತದಲ್ಲಿ ಐದು ಫಾರ್ಮಾ ಕಂಪನಿಗಳು ಈ ಔಷಧ ಉತ್ಪಾದನೆಯ ಲೈಸನ್ಸ್ ಪಡೆದಿದ್ದು ಹೊಸದಾಗಿ ಇನ್ನೂ 5 ಕಂಪನಿಗಳಿಗೆ ಅನುಮತಿ ದೊರಕಿಸಿಕೊಡಲಾಗಿದೆ.) ಮೈಲಾನ್ ಫಾರ್ಮಾ ಕಂಪನಿಯ ಮೂಲಕ ಮೂರು ಲಕ್ಷ ವಯಲ್ಸ್ ಎಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲಾಗುತ್ತಿದೆ. ನಾಳೆ 40 ಸಾವಿರ ವಯಲ್ಸ್ ಎಂಫೋಟೆರಿಸಿನ್-ಬಿ ಭಾರತ ತಲುಪಲಿದ್ದು ರಾಜ್ಯಕ್ಕೆ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಈ ಔಷಧವನ್ನು ದೊರಕಿಸಿಕೊಡಲು ಯತ್ನಿಸುವುದಾಗಿ ಔಷಧ ಇಲಾಖೆಯನ್ನೂ ಹೊಂದಿರುವ ಸದಾನಂದ ಗೌಡ ಭರವಸೆ ನೀಡಿದ್ದಾರೆ.

ಇನ್ಮುಂದೆ ಹೋಂ ಐಸೋಲೇಷನ್‌ ಇಲ್ಲ, ಕೋವಿಡ್‌ ಕೇಂದ್ರಕ್ಕೆ ದಾಖಲು: ಸುಧಾಕರ್‌

ಕರ್ನಾಟಕಕ್ಕೆ ಒರಿಸ್ಸಾ, ಜಾರ್ಖಂಡ್‌ ರಾಜ್ಯಗಳಿಂದ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ 500 ಟನ್‌ಗಳಿಗೂ ಹೆಚ್ಚು ಲಿಕ್ವಿಡ್ ಆಮ್ಲಜನಕ ಪೂರೈಕೆ ಮಾಡಲಾಗಿದೆ. ಸಾಗಣೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ (ಜಿಂದಾಲ್ ಉಕ್ಕು ಕಾರ್ಖಾನೆ ತೋರಣಗಲ್ಲು, ಬಳ್ಳಾರಿ) ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವ ಬಗ್ಗೆ ರೇಲ್ವೆ ಸಚಿವ ಪಿಯುಷ್ ಗೋಯಲ್ ಅವರೊಂದಿಗೆ ಚರ್ಚಿಸಲಾಗಿದ್ದು ಅವರು ಈ ವ್ಯವಸ್ಥೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಗ್ರಾಮೀಣ ನಿವಾಸಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ

ಗ್ರಾಮಾಂತರ ಭಾಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವರು ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದರು. ಗ್ರಾಮೀಣ ನಿವಾಸಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಲಭ್ಯವಿರುವ ಸಮುದಾಯ ಭವನ ಮುಂತಾದ ಸಾರ್ವಜನಿಕ ಕಟ್ಟಡಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಬೇಕಾಗಿದೆ. ಗ್ರಾಮೀಣ ಸೋಂಕಿತರಿಗೆ ಅವರಿರುವಲ್ಲಿಯೇ ಕೋವಿಡ್ ಚಿಕಿತ್ಸೆಯ ಕಿಟ್‌ಗಳನ್ನು ಒದಗಿಸುವ ಬಗ್ಗೆ ಸ್ಥಳೀಯ ಆಡಳಿತ ಚಿಂತಿಸಬೇಕು ಎಂದೂ ಕೇಂದ್ರ ಸಚಿವರು ಸಲಹೆ ನೀಡಿದರು.

ರಾಜ್ಯದ ರೈತರಿಗೂ 750 ಕೋಟಿ ಉಳಿತಾಯ

ಕೇಂದ್ರ ಸರ್ಕಾರವು ರೈತರಿಗೆ ಹೆಚ್ಚುವರಿಯಾಗಿ 14,775 ಕೋಟಿ ರೂ ರಸಗೊಬ್ಬರ ಸಬ್ಸಿಡಿ ಘೋಷಿಸಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು ಇದು ಪ್ರಧಾನಿ ನರೇಂದ್ರ ಮೋದಿಯವರು ರೈತ ಕಲ್ಯಾಣದ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗಿ ಭಾರತದಲ್ಲಿ ಡಿಎಪಿ, ಪಿ&ಕೆ ಮುಂತಾದ ಗೊಬ್ಬರಗಳ ದುಬಾರಿಯಾದವು. ರೈತರಿಗೆ ಇದರ ಬಿಸಿ ತಟ್ಟದಂತೆ ನೋಡಿಕೋಳ್ಳಲು ಕೇಂದ್ರವು ಈ ಮಹತ್ವದ ನಿರ್ಧಾರ ಕೈಗೊಂಡಿತು. ಇದರಿಂದ ರಾಜ್ಯದ ರೈತರಿಗೂ ಸುಮಾರು 750 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮಾತನಾಡಿ ಕೋವಿಡ್ ಹೋರಾಟದಲ್ಲಿ ಕೇಂದ್ರವು ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ರೆಮ್ಡೆಸಿವಿರ್ ಮತ್ತಿತರ ಔಷಧಗಳು ಅಥವಾ ಆಮ್ಲಜನಕ ಕೊರತೆಯಿಲ್ಲ.ನೈಜವಾಗಿ ಬಫರ್ ಸ್ಟಾಕ್ ಇದೆ, ಎಂಫೊಟೆರಿಸಿನ್-ಬಿ ಔಷಧಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಇದ್ದು ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯಾದ್ಯಂತ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರ ಹಾಗೂ ಸುಮಾರು 500 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಹೇಳುವುದಾದರೆ - ರಾಜ್ಯದಲ್ಲಿ 1.9 ಲಕ್ಷ ಜನರಿಗೆ ಕೊವಾಕ್ಸಿನ್ 2ನೇ ಡೋಸ್ ಹಾಕಿಸಬೇಕಿದ್ದು 1.7 ಲಕ್ಷ ಡೋಸ್ ಲಭ್ಯವಿದೆ. ಬರುವ ಡಿಸೆಂಬರ್ ಒಳಗಾಗಿ ರಾಜ್ಯದ ಪ್ರತಿಯೊಬ್ಬರಿಗೂ ಕನಿಷ್ಠಪಕ್ಷ ಪಕ್ಷ ಮೊದಲನೇ ಲಸಿಕೆ ಹಾಕಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ ಗೋಪಾಲಯ್ಯ, ಬಿಡಿಎ ಅಧ್ಯಕ್ಷ ಎಸ್ ವಿಶ್ವನಾಥ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ನಾರಾಯಣ ಉಪಸ್ಥಿತರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios