'ರಾಜ್ಯ ರಾಜಕೀಯ ಹೈಡ್ರಾಮದ ಹಿಂದೆ ಸಿದ್ದರಾಮಯ್ಯ ಕೈವಾಡ!'
ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕಳೆದೊಂದು ವಾರದಿಂದ ಆಪರೇಷನ್ ಕಮಲ ಹೈಡ್ರಾಮ ನಡೆಯುತ್ತಿದೆ. ಸರ್ಕಾರ ಬೀಳುತ್ತದೆ ಎಂಬ ಭೀತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪಕ್ಷದ ಶಾಸಕರನ್ನು ರೆಸಾರ್ಟ್‌ಗೆ ರವಾನಿಸಿದ್ದಾರೆ. ಆದರೀಗ ಈ ಕಚ್ಚಾಟದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರ ಕೈವಾಡ ಇದೆ ಎಂದು ಸಚಿವ ಡಿವಿಎಸ್ ಆರೋಪಿಸಿದ್ದಾರೆ.
ಮಂಗಳೂರು[ಜ.19]: ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಕಳೆದೊಂದು ವಾರದಿಂದ ಆಪರೇಷನ್ ಕಮಲ ಸದ್ದು ಮಾಡುತ್ತಿದ್ದು, ಶಾಸಕರು ರೆಸಾರ್ಟ್ ಗೂ ರವಾನೆಯಾಗಿದ್ದಾರೆ. ಸದ್ಯ ಈ ವಿಚಾರವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ದೂಷಿಸಿದ್ದು, 'ಇಡೀ ರಾಜ್ಯದ ರಾಜಕಾರಣವನ್ನ ಸದ್ಯ ನಗೆಪಾಟಲಿಗೀಡಾಗಿಸಿದ್ದಾರೆ. ಏಡಿಗಳನ್ನು ತಟ್ಟೆಯಲ್ಲಿ ಹಾಕಿದ್ರೆ ಪರಸ್ಪರ ಕೈ-ಕಾಲು ಎಳೆಯುವ ರೀತಿಯಲ್ಲಿ ಕಾಂಗ್ರೆಸ್ ಕಚ್ಚಾಟವಿದೆ. ಕರ್ನಾಟಕದ ರಾಜಕಾರಣವನ್ನು ಹೇಸಿಗೆಯ ತಾಣವಾಗಿ ಪರಿವರ್ತನೆ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದರೂ ಕೆಲಸ ಮಾಡಲು ಆಗುತ್ತಿಲ್ಲ, ಸಿದ್ದರಾಮಯ್ಯ ಕೆಲಸ ಮಾಡಲು ಬಿಡ್ತಿಲ್ಲ' ಎಂದಿದ್ದಾರೆ.
ಅಲ್ಲದೇ 'ಈ ಎಲ್ಲಾ ನಾಟಕದ ಹಿಂದೆ ಸಿದ್ದರಾಮಯ್ಯರ ಪೂರ್ತಿ ಕೈವಾಡವಿದೆ. ಸಿದ್ದರಾಮಯ್ಯರೇ ತನ್ನ ಹಿಂಬಾಲಕರನ್ನ ಬಿಟ್ಟು ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಮಾಡ್ತಿದಾರೆ. ಒಂದು ಕಡೆಯಿಂದ ಸಮಾಧಾನ ಮಾಡುವ ನಾಟಕ, ಮತ್ತೊಂದೆಡೆ ಒಳಗಿಂದೊಳಗೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದಾರೆ. ಭಾರತೀಯ ಜನತಾ ಪಾರ್ಟಿ ಈ ವಿಚಾರದಲ್ಲಿ ಸ್ಪಷ್ಟವಾಗಿದೆ. ಇವರ ನಾಟಕಗಳು, ಕುಮಾರಸ್ವಾಮಿ ಏನು ಮಾಡ್ತಿದ್ದಾರೆ ಅನ್ನೋದೇ ಗೊತ್ತಿಲ್ಲದೇ ರಾಜ್ಯ ಅಸ್ಥಿರತೆಯ ಪರಾಕಾಷ್ಠೆಯನ್ನ ಮುಟ್ಟಿದೆ. ರಾಜ್ಯ ಅಭಿವೃದ್ಧಿಯಲ್ಲಿ ನೆನೆಗುದಿಗೆ ಬಿದ್ದಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದ್ರೆ ಇದು ಕುಮಾರಸ್ವಾಮಿಗೆ ಒಳ್ಳೆಯದೇ ಆಗಿದೆ. ಈ ಕಸರತ್ತುಗಳ ನಡುವೆ ಅವರ ಒಳಗಿಂದೊಳಗಿನ ಕಸರತ್ತು ಬಾಹ್ಯಕ್ಕೆ ಬರಲು ಸಾಧ್ಯವೇ ಇಲ್ಲ. ಇದರಲ್ಲಿ ಸಿದ್ದರಾಮಯ್ಯರೇ ಪಾತ್ರಧಾರಿ, ಅವರೇ ಎಲ್ಲಾ ಆಡಿಸುತ್ತಿರುವುದು' ಎಂದಿರುವ ಡಿವಿಎಸ್ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಸಿದ್ದರಾಮಯ್ಯರೇ ಕಾರಣವೆಂದಿದ್ದಾರೆ.
ಬಿಜೆಪಿ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿರುವ ಡಿ. ವಿ ಸದಾನಂದಗೌಡ 'ಸುಮ್ಮನೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಜನರಿಗೆ ಆಗ್ತಿರೋ ಅನ್ಯಾಯವನ್ನು ನಮಗೆ ನೋಡಲಿಕ್ಕೆ ಆಗಲ್ಲ. ಅಧಿಕಾರ ಮಾಡಲು ಆಗದೇ ಇದ್ರೆ ಬಿಟ್ಟು ಬಿಡಿ. ಕಾಂಗ್ರೆಸ್ ಜೊತೆ ಇರಲಿಕ್ಕೆ ಆಗದೇ ಇದ್ರೆ ಶಾಸಕರು ರಾಜೀನಾಮೆ ಕೊಡಿ. ಸುಮ್ಮನೇ ಈ ದೊಂಬರಾಟದಿಂದ ರಾಜ್ಯದ ಹಿತಾಸಕ್ತಿ ಬಲಿಕೊಡಬೇಡಿ' ಎಂದು ಎಚ್ಚರಿಸಿದ್ದಾರೆ.