ವರ್ತೂರು ಕಿಡ್ನಾಪ್ ಕೇಸ್‌ನಲ್ಲಿ ಮಹಿಳೆ?| ಕಾರಿನಲ್ಲಿ ಸಿಕ್ಕ ಮಹಿಳೆಯ ದುಪಟ್ಟಾದಿಂದ ಅನುಮಾನ| ಪೊಲೀಸರಿಗೆ ಸರಿಯಾಗಿ ಮಾಹಿತಿ ನೀಡಲು ಮಾಜಿ ಮಂತ್ರಿ ಹಿಂದೇಟು| ಪೊಲೀಸರು ವಿಚಾರಣೆ ವೇಳೆ ವಿಧಿಯಿಲ್ಲದೆ ದೂರು| ಕಿಡ್ನಾಪರ್‌ಗಳ ಬಗ್ಗೆ ಪ್ರಕಾಶ್‌ಗೆ ಖಚಿತವಾಗಿ ಗೊತ್ತು: ಪೊಲೀಸ್ ಮೂಲ
ಬೆಂಗಳೂರು(ಡಿ.01): ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣದಲ್ಲಿ ಹಲವು ಗೊಂದಲಗಳು ಹುಟ್ಟಿದ್ದು, ಕೃತ್ಯದಲ್ಲಿ ಅವರ ಪರಿಚಿತ ಮಹಿಳೆಯೊಬ್ಬರ ನೆರಳಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ತಮ್ಮ ಅಪಹರಣದ ಬಗ್ಗೆ ಪೊಲೀಸರಿಗೆ ವರ್ತೂರು ಪ್ರಕಾಶ್ ಮುಕ್ತವಾಗಿ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಆರಂಭದಲ್ಲಿ ಅಪಹರಣದ ಬಗ್ಗೆ ದೂರು ಕೊಡಲು ಅವರು ನಿರಾಕರಿಸಿದ್ದರು. ಆದರೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿದ್ದ ಮಾಜಿ ಸಚಿವರ ಕಾರಿನಲ್ಲಿ ಮಹಿಳೆಯ ದುಪಟ್ಟಾಹಾಗೂ ಖಾರದ ಪುಡಿ ಚೆಲ್ಲಾಡಿರುವುದು ಕಂಡ ಪೊಲೀಸರು, ಕಾರು ಅನಾಥವಾಗಿ ನಿಲುಗಡೆ ಮಾಡಿದ್ದರ ಹಿಂದೆ ಬೇರೇನೋ ನಡೆದಿದೆ ಎಂದು ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಿಸಿದಾಗ ವಿಧಿ ಇಲ್ಲದೆ ದೂರು ನೀಡಲು ಒಪ್ಪಿದರು ಎನ್ನಲಾಗಿದೆ.
ವರ್ತೂರು ಪ್ರಕಾಶ್ ಕಿಡ್ನಾಪ್, ಚಿತ್ರಹಿಂಸೆ: 30 ಕೋಟಿ ರೂ. ಹಣಕ್ಕೆ ಬೇಡಿಕೆ!
ತಮ್ಮನ್ನು ಅಪಹರಿಸಿದ್ದವರ ಬಗ್ಗೆ ಪ್ರಕಾಶ್ ಅವರಿಗೆ ಖಚಿತವಾಗಿ ಗೊತ್ತಿದೆ. ಅವರ ಪರಿಚಯಸ್ಥರಿಂದಲೇ ಕೃತ್ಯ ನಡೆದಿರುವುದು ಖಾತ್ರಿಯಾಗಿದೆ. ಆದರೆ ಕೃತ್ಯಕ್ಕೆ ಹಣಕಾಸು ವಿವಾದ ಅಥವಾ ಮಹಿಳೆಯ ಸಂಗ ಹೀಗೆ ಯಾವ ಅಂಶ ಕಾರಣವಾಗಿದೆ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಈಗಾಗಲೇ ಅಪಹರಣಕಾರರ ಕುರಿತು ಮಾಹಿತಿ ಸಿಕ್ಕಿದ್ದು, ಇನ್ನೆರಡು ದಿನಗಳಲ್ಲಿ ಅವರ ಬಂಧನವಾಗಲಿದೆ. ನಂತರ ಪ್ರಕರಣದ ಇಡೀ ಚಿತ್ರಣ ಅನಾವರಣೆಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹನಿಟ್ರ್ಯಾಪ್ ಅಥವಾ ಪ್ರೇಮಕತೆ:
ಕೋಲಾರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವರ್ತೂರು ಪ್ರಕಾಶ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಕೋಲಾರ ಸಮೀಪದ ಫಾರಂ ಹೌಸ್ ಹಾಗೂ ಬೆಂಗಳೂರಿನ ಮನೆಯಲ್ಲಿ ಅವರು ವಾಸಿಸುತ್ತಿದ್ದರು.
ಕೋಲಾರದಲ್ಲಿ ರಾಜಕೀಯ ಜೀವನ ಆರಂಭಿಸಿದ ಬಳಿಕ ಅವರಿಗೆ ಕೆಲವು ಮಹಿಳೆಯರ ಜತೆ ಆತ್ಮೀಯತೆ ಬೆಳೆದಿತ್ತು. ಈ ಒಡನಾಟದಲ್ಲಿ ಹಣಕಾಸು ವ್ಯವಹಾರ ಸಹ ನಡೆದಿತ್ತು. ಅದರಲ್ಲೂ ಮಾಜಿ ಸಚಿವರಿಗೆ ಒಬ್ಬ ಶಿಕ್ಷಕಿ ಹಾಗೂ ಆಕೆಯ ಪುತ್ರಿ ಆಪ್ತರಾಗಿದ್ದರು. ಆದರೆ ಇತ್ತೀಚೆಗೆ ವೈಯಕ್ತಿಕ ವಿಚಾರವಾಗಿ ತಾಯಿ-ಮಗಳ ಜತೆ ಪ್ರಕಾಶ್ ಅವರಿಗೆ ಮನಸ್ತಾಪವಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಸಂತ್ರಸ್ತರಿಗೆ ತಿಂಗಳೊಳಗೆ ಪರಿಹಾರ ನೀಡಿ: ಹೈಕೋರ್ಟ್
ಅಲ್ಲದೆ, ಅಪಹರಣಕ್ಕೂ ಮುನ್ನ ಅವರಿಗೆ ಬೆಂಗಳೂರಿನ ಮಹಿಳೆಯೊಬ್ಬರು ಕರೆ ಮಾಡಿ ಮಾತನಾಡಿದ್ದಾರೆ. ಹೀಗಾಗಿ ಕೃತ್ಯದಲ್ಲಿ ಯಾರ ಪಾತ್ರವಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಈ ಗೆಳೆತನದ ಬಗ್ಗೆ ಮಾಜಿ ಸಚಿವರು ಬಾಯಿಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 3, 2020, 8:38 AM IST