ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರನ್ನು ಮನೆಗೆ ಕರೆಯಿಸಿಕೊಂಡು ಹಣ ಲೆಕ್ಕ ಹಾಕುವ ವೇಳೆ ದಾಳಿ ನಡೆಸಿ ಹತ್ತು ಲಕ್ಷ ಹಣ ಲಪಟಾಯಿಸಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಡಿಎಸ್‌ಪಿ ಹಾಗೂ ಇಬ್ಬರು ಪೇದೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 

ಬೆಂಗಳೂರು : ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರನ್ನು ಮನೆಗೆ ಕರೆಯಿಸಿಕೊಂಡು ಹಣ ಲೆಕ್ಕ ಹಾಕುವ ವೇಳೆ ದಾಳಿ ನಡೆಸಿ ಹತ್ತು ಲಕ್ಷ ಹಣ ಲಪಟಾಯಿಸಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಡಿಎಸ್‌ಪಿ ಹಾಗೂ ಇಬ್ಬರು ಪೇದೆ ಸೇರಿ ನಾಲ್ವರು ಆರೋಪಿಗಳು ಉತ್ತರ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚಿಕ್ಕಬಳ್ಳಾಪುರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಡಿಎಸ್ಪಿ ನಾಗೇಂದ್ರ ಕುಮಾರ್‌, ಸಿಎಆರ್‌ ಕಾನ್ಸ್‌ಟೇಬಲ್‌ಗಳಾದ ವೆಂಕಟರಮಣ, ಸಂತೋಷ್‌ ಹಾಗೂ ಬೆಂಗಳೂರು ಗಂಗಮ್ಮನಗುಡಿ ನಿವಾಸಿ ಖಾಸಗಿ ಕಂಪನಿ ಕಾರು ಚಾಲಕ ಶಂಶುದ್ದೀನ್‌ ಬಂಧಿತರು. ಉಳಿದ ಆರೋಪಿಗಳಾದ ಪ್ರಸಾದ್‌, ಶಂಕರ್‌, ಸಂತೋಷ್‌, ಮಂಜು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ರಾಮಮೂರ್ತಿ ನಗರ ನಿವಾಸಿ ಶಿವಕುಮಾರ್‌ (41) ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ಸಶಸ್ತ್ರ ಮೀಸಲು ಪಡೆಯಲ್ಲಿ ನಾಗೇಂದ್ರ ಕುಮಾರ್‌ ಕಳೆದ 14 ವರ್ಷಗಳಿಂದ ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವೆಂಕಟರಮಣ ಮತ್ತು ಸಂತೋಷ್‌ ಕಾನ್ಸ್‌ಟೇಬಲ್‌ಗಳಾಗಿದ್ದರು.

ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಓರ್ವ ‘ಮಾಸ್ಟರ್‌ ಮೈಂಡ್‌’ ಆಗಿದ್ದಾನೆ. ಮಾಸ್ಟರ್‌ ಮೈಂಡ್‌ ಮತ್ತು ಆರೋಪಿ ಶಂಶುದ್ದೀನ್‌ಗೆ ಶಿವಕುಮಾರ್‌ ಪರಿಚಯವಿದ್ದು, ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಶಿವಕುಮಾರ್‌ಗೆ ತುರ್ತು ಹಣದ ಅಗತ್ಯ ಇರುತ್ತದೆ. ಇದನ್ನು ತಿಳಿದಿದ್ದ ಮಾಸ್ಟರ್‌ ಮೈಂಡ್‌ ಶಿವಕುಮಾರ್‌ನಿಗೆ ಹಣ ದುಪಟ್ಟು ಮಾಡಿಕೊಡುವ ಆಮಿಷವೊಡ್ಡಿದ್ದಾನೆ. ನಂತರ ಶಂಶುದ್ದೀನ್‌ನಿಂದ ಶಿವಕುಮಾರ್‌ಗೆ ಕರೆ ಮಾಡಿಸಿ ಎರಡು ಸಾವಿರ ಮುಖ ಬೆಲೆಯ .10 ಲಕ್ಷ ಹಣವನ್ನು ನಗದಾಗಿ ಕೊಟ್ಟರೆ ದುಪಟ್ಟು .20 ಲಕ್ಷ ಹಣ ನೀಡಲಾಗುವುದು ಎಂದು ನಂಬಿಸಿದ್ದರು.

ದುಪ್ಪಟ್ಟು ಹಣದ ಆಸೆಗೆ ಬಿದ್ದ ಶಿವಕುಮಾರ್‌ ಹಣ ನೀಡಲು ಒಪ್ಪಿದ್ದರು. ಅದರಂತೆ ಶಿವಕುಮಾರ್‌ ನ.8 ರಂದು ಹತ್ತು ಲಕ್ಷ ಹಣದ ಸಮೇತ ಬೆಳಗ್ಗೆ ದೂರುವಾಣಿ ಮೂಲಕ ಆರೋಪಿ ಶಂಶುದ್ದೀನ್‌ನನ್ನು ಸಂಪರ್ಕ ಮಾಡಿದ್ದರು. ಅಂದು ತನ್ನ ಮನೆಗೆ ಆರೋಪಿ ಶಿವಕುಮಾರ್‌ನನ್ನು ಕರೆಯಿಸಿಕೊಂಡಿದ್ದ. ಆರೋಪಿಗಳು ಹತ್ತು ಲಕ್ಷ ಹಣ ಲೆಕ್ಕ ಹಾಕುವ ವೇಳೆ ಮೊದಲೇ ಸಂಚು ರೂಪಿಸಿದಂತೆ ಡಿಎಸ್ಪಿ ನಾಗೇಂದ್ರ ನೇತೃತ್ವದ ತಂಡ ಮನೆ ಮೇಲೆ ದಾಳಿ ಮಾಡುವ ಸೋಗಿನಲ್ಲಿ ನಟಿಸಿ ಹತ್ತು ಲಕ್ಷದೊಂದಿಗೆ ಪರಾರಿಯಾಗಿತ್ತು. ಈ ಬಗ್ಗೆ ಅನುಮಾನ ಹೊಂದಿದ್ದ ಶಿವಕುಮಾರ್‌ ಗಂಗಮ್ಮನ ಗುಡಿ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಚಿಕ್ಕಬಳ್ಳಾಪುರದಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಾಸ್ಟರ್‌ ಮೈಂಡ್‌ ಬೇರೆ

ಪ್ರಕರಣ ಹಿಂದೆ ಮಾಸ್ಟರ್‌ ಮೈಂಡ್‌ ಬೇರೊಬ್ಬ ಇದ್ದು, ಆತನ ಅಣತಿಯಂತೆ ಎಲ್ಲರೂ ಕೃತ್ಯ ಎಸಗುತ್ತಿದ್ದರು. ಇದೇ ರೀತಿ ಬೇರೆಯವರಿಗೆ ವಂಚನೆ ಆಗಿರುವ ಶಂಕೆ ಇದೆ. ಪ್ರಮುಖ ಆರೋಪಿ ಬಂಧನದ ಬಳಿಕ ಮಾಹಿತಿ ಹೊರ ಬರಲಿದೆ. ಡಿಎಸ್‌ಪಿ ಅಂಡ್‌ ಗ್ಯಾಂಗ್‌ ಬೇರೆಯವರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೃತ್ಯಕ್ಕೆ ಆರೋಪಿಗಳು ಎಷ್ಟುಹಣ ಪಡೆದಿದ್ದಾರೆ ಎಂಬ ಬಗ್ಗೆ ಬಾಯ್ಬಿಟ್ಟಿಲ್ಲ. ಆದರೆ ಗಂಗಮ್ಮನಗುಡಿ ಪ್ರಕರಣದಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯಕ್ಕೆ ಖಾಸಗಿ ಕಾರು ಬಳಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ‘ಕನ್ನಡಪ್ರಭ’ಕ್ಕೆ ವಿವರಿಸಿದರು.