Asianet Suvarna News Asianet Suvarna News

ಕೇಂದ್ರ ನೀಡಿದ ಬರ ಹಣ ರೈತರಿಗೆ ಪಾವತಿ: ಸಚಿವ ಕೃಷ್ಣ ಬೈರೇಗೌಡ

2023ರ ಮುಂಗಾರು ಬೆಳೆ ಹಾನಿ ಬರ ಪರಿಹಾರ ವಿತರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಸೋಮವಾರವೇ ರೈತರ ಆಧಾರ್‌ ಜೋಡಣೆಯಾದ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಆರ್‌ಬಿಐನಿಂದ ರೈತರ ಖಾತೆಗೆ ವರ್ಗಾಯಿಸಲು 48 ಗಂಟೆ ಸಮಯ ಅಗತ್ಯ. ಹೀಗಾಗಿ ಎರಡು ಮೂರು ದಿನದಲ್ಲಿ ಎಲ್ಲರಿಗೂ ಹಣ ತಲುಪಲಿದೆ: ಕೃಷ್ಣ ಬೈರೇಗೌಡ

Drought Compensation Money Transferred to Farmers Says Minister Krishna Byre Gowda grg
Author
First Published May 7, 2024, 10:15 AM IST

ಬೆಂಗಳೂರು(ಮೇ.07):  ಕೇಂದ್ರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣದಲ್ಲಿ ಮೇ 6 ರಂದು ಸೋಮವಾರ 2,425 ಕೋಟಿ ರು. ಹಣವನ್ನು 27.38 ಲಕ್ಷ ರೈತರಿಗೆ ಅರ್ಹತೆಗೆ ಅನುಗುಣವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆ ಮಾಡಲಾಗಿದೆ. 2-3 ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೆ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2023ರ ಮುಂಗಾರು ಬೆಳೆ ಹಾನಿ ಬರ ಪರಿಹಾರ ವಿತರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಸೋಮವಾರವೇ ರೈತರ ಆಧಾರ್‌ ಜೋಡಣೆಯಾದ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಆರ್‌ಬಿಐನಿಂದ ರೈತರ ಖಾತೆಗೆ ವರ್ಗಾಯಿಸಲು 48 ಗಂಟೆ ಸಮಯ ಅಗತ್ಯ. ಹೀಗಾಗಿ ಎರಡು ಮೂರು ದಿನದಲ್ಲಿ ಎಲ್ಲರಿಗೂ ಹಣ ತಲುಪಲಿದೆ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್‌: ಇದು ಪ್ರಪಂಚದ ಅತೀ ದೊಡ್ಡ ಲೈಂಗಿಕ ದೌರ್ಜನ್ಯ ‌ಪ್ರಕರಣ, ಕೃಷ್ಣಭೈರೇಗೌಡ

ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ ಎನ್‌ಡಿಆರ್‌ಎಫ್‌ ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33.58 ಲಕ್ಷ ರೈತರಿಗೆ 636.45 ಕೋಟಿ ರು.ಗಳನ್ನು ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳುಗಳಲ್ಲೇ ಪಾವತಿಸಿದೆ. ಇದರಲ್ಲಿ 31,82,602 ಮಂದಿಗೆ ಹಣ ಪಾವತಿಯಾಗಿದ್ದು 2 ಲಕ್ಷ ಜನರಿಗೆ ಬಾಕಿಯಿದೆ. ಈ ಪೈಕಿ ಅತಿ ಕಡಿಮೆ ಜಮೀನು ಹೊಂದಿರುವ 4.43 ಲಕ್ಷ ರೈತರಿಗೆ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ರೈತರಿಗೆ ಎನ್‌ಡಿಆರ್‌ಎಫ್‌ ಅಡಿ ಬರ ಪರಿಹಾರ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋದ ಪರಿಣಾಮ ಏ.26 ರಂದು ಕೇಂದ್ರ ಸರ್ಕಾರ 3,454.22 ಕೋಟಿ ರು. ಬಿಡುಗಡೆ ಮಾಡಿದೆ. ಏ.2 ರಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ 3,454 ಕೋಟಿ ರು. ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ತಕ್ಷಣ ಆ ಹಣವನ್ನು ರೈತರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾನೂನು ಹೋರಾಟ ಮುಂದುವರೆಯಲಿದೆ

ಮೊದಲ ಹಂತದಲ್ಲಿ ರಾಜ್ಯ ಸರ್ಕಾರವೇ ರೈತರಿಗೆ ಬರ ಪರಿಹಾರ ಪಾವತಿಸಿದ್ದು, ಇದೀಗ ಎನ್‌ಡಿಆರ್‌ಎಫ್‌ ಪರಿಹಾರ ಹಣ ಲಭ್ಯವಾಗಿದ್ದು ಆ ಹಣವನ್ನೂ ನಿಯಮದಂತೆ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಕೇಂದ್ರದಿಂದ ಇನ್ನೂ ಬಾಕಿ ಹಣ ಬರಬೇಕಾಗಿದ್ದು ಈ ಕುರಿತು ಕೇಂದ್ರದ ಜೊತೆಗಿನ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Follow Us:
Download App:
  • android
  • ios