ಬೆಂಗಳೂರು (ಡಿ. 23): ಬೇಸಿಗೆ ಕಾಲ ಹತ್ತಿರವಾಗುತ್ತಿದ್ದಂತೆ ಅರಣ್ಯಕ್ಕೆ ಬೆಂಕಿ ಬೀಳದಂತೆ ಎಚ್ಚರ ವಹಿಸಲು ಮುಂದಾಗಿರುವ ಅರಣ್ಯ ಇಲಾಖೆ, ಸಂಭವನೀಯ ಕಾಡ್ಗಿಚ್ಚಿನ ಕುರಿತು ನಿಗಾ ವಹಿಸಲು ಡ್ರೋನ್‌ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ.

ಕಳೆದ ವರ್ಷ ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ಸುಮಾರು 10 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿ ನಾಶವಾಗಿತ್ತು. ಈ ರೀತಿಯ ಘಟನೆ ಮರುಕಳಿಸಬಾರದು ಎಂಬ ಕಾರಣದಿಂದ ಅರಣ್ಯ ಇಲಾಖೆ ಇದೀಗ ಡ್ರೋನ್‌ ಕ್ಯಾಮೆರಾಗಳ ನೆರವು ಪಡೆಯಲು ಮುಂದಾಗಿದೆ.

ಬಂಡೀಪುರ ಅರಣ್ಯದಲ್ಲಿ ಪ್ರಾಥಮಿಕ ಹಂತವಾಗಿ ಡ್ರೋನ್‌ ತಂತ್ರಜ್ಞಾನ ಬಳಸಲಾಗುತ್ತಿದೆ. ನಂತರ ಇತರೆ ಅರಣ್ಯ ವಿಭಾಗಗಳಿಗೆ ವಿಸ್ತರಣೆ ಮಾಡುಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ: ಮಾಹಿತಿಗಾಗಿ ಮಂಗಳೂರಲ್ಲಿ ಹೆಲ್ಪ್‌ ಡೆಸ್ಕ್‌..!

ಡ್ರೋನ್‌ನಿಂದ ಬೆಂಕಿ ಬಗ್ಗೆ ಎಚ್ಚರಿಕೆ:

ಡ್ರೋನ್‌ ಕ್ಯಾಮೆರಾ ಅಳವಡಿಕೆ ಮಾಡುವುದರಿಂದ ಅರಣ್ಯ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ನಂದಿಸುವ ಕಾರ್ಯದಲ್ಲಿ ತೊಡಗಲು ಸೂಚನೆ ನೀಡಬಹುದಾಗಿದೆ. ಒಂದು ವೇಳೆ ವಿಳಂಬ ಮಾಡಿದರೆ ಕ್ಯಾಮೆರಾದಲ್ಲಿ ಅದು ದಾಖಲಾಗಲಿದ್ದು, ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನೆರವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕಳೆದ ವರ್ಷ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಯಿಂದ ನಂದಿಸುವ ಕಾರ್ಯ ನಡೆಯುತ್ತಿತ್ತು. ಮತ್ತೊಂದೆಡೆ ಅರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬೆಂಕಿ ಹಚ್ಚಿರುವ ಆರೋಪವಿತ್ತು. ಈ ರೀತಿಯ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಲು ಈ ತಂತ್ರಜ್ಞಾನ ನೆರವಾಗಲಿದೆ. ಅಲ್ಲದೆ, ಅರಣ್ಯದಲ್ಲಿ ನೈಸರ್ಗಿಕವಾಗಿ ಅಷ್ಟುದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಳೆದ ವರ್ಷ ಆದಂತಹ ಘಟನೆಯಲ್ಲಿ ಕೆಲ ಅಪರಿಚಿತರು ಬೆಂಕಿ ಹಚ್ಚಿರಬಹುದು ಎಂಬ ಸಂಶವೂ ಇತ್ತು. ಆದ್ದರಿಂದ ಡ್ರೋನ್‌ ಕ್ಯಾಮೆರಾಗಳಿಂದ ನಿಗವಾಹಿಸಲು ನಿರ್ಧರಿಸಿದ್ದೇವೆ. 2020ರ ಫೆಬ್ರವರಿ ತಿಂಗಳಿನಿಂದ ಡ್ರೋನ್‌ ಕ್ಯಾಮೆರಾಗಳ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಡ್ರೋನ್‌ ಸೌಕರ್ಯಕ್ಕೆ ಟೆಂಡರ್‌ ಪ್ರಕ್ರಿಯೆ:

ಒಟ್ಟು 874 ಚದರ ಕಿಲೋಮೀಟರ್‌ ವ್ಯಾಪ್ತಿಯ ಬಂಡೀಪುರ ಅಭಯಾರಣ್ಯದ ಮೇಲೆ ನಾಲ್ಕು ಡ್ರೋನ್‌ ಕ್ಯಾಮೆರಾ ಬಳಸಿ ನಿಗಾ ವಹಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಡ್ರೋನ್‌ ನಿರ್ವಹಣಾ ಸಂಸ್ಥೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದರು.

ಬೆಂಕಿ ರೇಖೆಗಳ ನಿರ್ವಹಣೆ:

ಪ್ರಸಕ್ತ ವರ್ಷದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಅರಣ್ಯ ಭಾಗದಲ್ಲಿ ಹೆಚ್ಚು ಹುಲ್ಲು ಬೆಳೆದಿದೆ. ಹೀಗಾಗಿ ಬೆಂಕಿ ರೇಖೆಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಬೆಂಕಿ ರೇಖೆಗಳನ್ನು ರಚನೆ ಮಾಡುವ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಕಳೆದ ಮಾಚ್‌ರ್‍ ತಿಂಗಳಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಿಂದಾಗಿ ಸುಮಾರು 10 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿ ಬೆಂಕಿಗೆ ಆಹುತಿಯಾಗಿತ್ತು. ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಾಕಷ್ಟುಸಾಹಸಪಟ್ಟಿತ್ತು. ಅಂತಿಮವಾಗಿ ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಂಕಿ ನಂದಿಸಲಾಗಿತ್ತು.

ಬಂಡೀಪುರ ಅಭಯಾರಣ್ಯದಲ್ಲಿ ಬೆಂಕಿ ಬೀಳುವ ಕುರಿತಂತೆ ನಿಗಾವಹಿಸಲು ಡ್ರೋನ್‌ ಕ್ಯಾಮೆರಾ ಬಳಕೆ ಮಾಡಲು ನಿರ್ಧರಿಸಲಾಗಿದೆ. ನಾಲ್ಕು ಡ್ರೋನ್‌ ಕ್ಯಾಮೆರಾ ಅಳವಡಿಸಬೇಕು ಎಂದು ತೀರ್ಮಾನಿಸಿದ್ದೇವೆ. ಈ ಸಂಬಂಧ ಶೀಘ್ರದಲ್ಲಿ ಟೆಂಡರ್‌ ಕರೆಯಲಾಗುವುದು. ಫೆಬ್ರವರಿಯಿಂದ ಕ್ಯಾಮೆರಾಗಳು ಕಾರ್ಯ ನಿರ್ವಹಿಸಲಿವೆ.

- ಟಿ.ಬಾಲಚಂದ್ರ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ