ಇಂಡಿ (ಮಾ. 03):  ಸ್ಟೇರಿಂಗ್‌ ರಾಡ್‌ ತುಂಡಾಗಿದ್ದರಿಂದ ನಿಯಂತ್ರಣ ತಪ್ಪಿದ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಬಳಿ ಶನಿವಾರ ನಡೆದಿದೆ. ಈ ಸಂದರ್ಭದಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತವೊಂದು ಬಸ್‌ ಚಾಲಕ ತುಕಾರಾಮ ಅವರ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಈಶಾನ್ಯ ಸಾರಿಗೆ ಸಂಸ್ಥೆಯ ಇಂಡಿ ಡಿಪೋಕ್ಕೆ ಸೇರಿದ ಬಸ್‌ ಪಂಢರಪುರದಿಂದ ಶನಿವಾರ ಬೆಳಗ್ಗೆ 9 ಗಂಟೆಗೆ ಹೊರಟು, ಚಡಚಣ, ದೇವರನಿಂಬರಗಿ, ಜಿಗಜೇವಣಿ, ಇಂಚಗೇರಿ, ಕನ್ನೂರ ಮಾರ್ಗವಾಗಿ ವಿಜಯಪುರದಿಂದ ಇಂಡಿ ತಲುಪಬೇಕಾಗಿತ್ತು. ಇಂಚಗೇರಿ ಗ್ರಾಮ ಮಠದ ಹತ್ತಿರ ಬಸ್‌ನ ರಾಡ್‌ ತುಂಡಾಯಿತು.

ಇದು ಅರಿವಿಗೆ ಬರುತ್ತಲೇ ಚಾಲಕ ತುಕಾರಾಮ ಅವರು ಬಸ್ಸಿನ ವೇಗವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಣಾಮ ಅಪಘಾತವಾಗಬೇಕಿದ್ದ ಬಸ್‌ ನಿಧಾನಗತಿಯಲ್ಲಿ ಪಕ್ಕದ ಕಂದಕದಲ್ಲಿ ಬಂದು ನಿಂತಿದೆ. ಹೀಗಾಗಿ ನಡೆಯಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿ ಹೋಗಿದೆ. ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ಸುಮಾರು 30 ಪ್ರಯಾಣಿಕರಿಗೆ ಸಣ್ಣಪುಟ್ಟಗಾಯಗಳಾಗಿವೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ. ಚಾಲಕ ತುಕಾರಾಮ ಮಾಡಗ್ಯಾಳಗೆ ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ.

ಚಾಲಕಗೆ ಶ್ಲಾಘನೆ:

ಅಪಘಾತದ ಸ್ಥಳದಲ್ಲಿ ಕಿರುಚಾಟ ಕಂಡ ಇಂಚಗೇರಿ ಗ್ರಾಮಸ್ಥರು ಧಾವಿಸಿ ಬಂದು ಪ್ರಯಾಣಿಕರಿಗೆ ನೆರವಾದರು. ಚಾಲಕನ ಸಮಯಪ್ರಜ್ಞೆಯಿಂದ ನಾವೆಲ್ಲರೂ ಸಾವನ್ನು ಗೆದ್ದಂತಾಗಿದೆ ಎಂದು ಪ್ರಯಾಣಿಕರು ಚಾಲಕನನ್ನು ಶ್ಲಾಘಿಸಿದರು. ಚಾಲಕ ತುಕಾರಾಮ ಇಲ್ಲಿಯವರೆಗೆ ಅಪಘಾತ ರಹಿತ ಸೇವೆ ಮಾಡುತ್ತಾ ಬಂದಿದ್ದಾರೆ.