ಬೆಂಗಳೂರು(ಜು.20): ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಬಂದ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಕೊರೋನಾ ಸೋಂಕಿತ ರೋಗಿಗಳಿಗೆ ‘ಡ್ರೆಸ್‌ ಕೋಡ್‌’ ಜಾರಿ, ಮನೋವೈದ್ಯರಿಂದ ಕೌನ್ಸೆಲಿಂಗ್‌ ಮಾಡಲು ಮುಂದಾಗಿದೆ.

ಕಳೆದ ಎರಡು ತಿಂಗಳಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವುದಾಗಿ ತಿಳಿಸಿದ ನಂತರ ಇಬ್ಬರು ಮಹಿಳಾ ರೋಗಿಗಳು ತಮ್ಮ ಸೀರೆಯಿಂದಲೇ ನೇಣಿಗೆ ಶರಣಾಗಿದ್ದರು. ಈ ಘಟನೆಗೆ ಸಾರ್ವಜನಿಕ ವಲಯದಿಂದ ಟೀಕೆಗಳು ಸಾಕಷ್ಟು ಕೇಳಿ ಬಂದಿದ್ದವು. ಹಾಗಾಗಿ ಇಂತಹ ಘಟನೆ ಮರುಕಳಿಸದಿಲು ಎಲ್ಲ ರೋಗಿಗಳಿಗೆ ಸಡಿಲವಾದ ಪ್ಯಾಂಟ್‌, ಶರ್ಟ್‌ ಧರಿಸಬೇಕೆಂಬ ನಿಯಮ ಜಾರಿಗೆ ತರಲು ಹೊರಟಿದೆ.
ಎರಡು ಆತ್ಮಹತ್ಯೆ ಪ್ರಕರಣಗಳು ಶೌÜಚಾಲಯದಲ್ಲಿ ನಡೆದಿದ್ದು, ಅಲ್ಲಿರುವ ಕಂಬಿಗಳಿಗೆ ನೇಣು ಬಿಗಿದುಕೊಳ್ಳಲಾಗಿದೆ. ಆದ್ದರಿಂದ ಈಗ ಕಂಬಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ ಆಸ್ಪತ್ರೆಯಿಂದ ಹೊರ ಹೋಗದಂತೆ ಶೀಘ್ರದಲ್ಲಿ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಟೇಲ್‌ಗಳನ್ನು ಖಾಸಗಿ ಆಸ್ಪತ್ರೆಗೆ ಕೊರೋನಾ ಚಿಕಿತ್ಸೆಗೆ ನೀಡಲು ಮುಂದಾದ ಮಾಲೀಕರು

ಹಿರಿಯ ರೋಗಿಗಳ ವಿರೋಧ:

ಸೋಂಕಿತರಿಗೆ ಪ್ಯಾಂಟ್‌ ಮತ್ತು ಶರ್ಟ್‌ ಧರಿಸುವ ಪದ್ಧತಿ ಜಾರಿಗೆ ಹಿರಿಯ ಮಹಿಳಾ ರೋಗಿಗಳು ಒಪ್ಪುತ್ತಿಲ್ಲ. ಹಾಗಾಗಿ ಅಂತಹವರಿಗೆ ಮನೋವೈದ್ಯರ ಮೂಲಕ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ಕೆ.ಸಿ.ಜನರಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ಮಾಹಿತಿ ನೀಡಿದ್ದಾರೆ.

ಮನೋವೈದ್ಯರಿಂದ ಕೌನ್ಸಿಲಿಂಗ್‌:

ರೋಗಿಗಳ ಮಾನಸಿಕ ಸಾಮರ್ಥ್ಯ ಪರಿಶೀಲಿಸಲು ಎಲ್ಲ ರೋಗಿಗಳಿಗೂ ಮನೋವೈದ್ಯರಿಂದ ಕೌನ್ಸೆಲಿಂಗ್‌ ಮಾಡಿಸಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಎಲ್ಲ ರೋಗಿಗಳ ಮೊಬೈಲ್‌ ಸಂಖ್ಯೆಯನ್ನು ವೈದ್ಯರಿಗೆ ನೀಡಲಾಗಿದ್ದು, ಪ್ರತಿ ದಿನ ಕರೆ ಮಾಡಿ ಮಾತನಾಡಿಸಲಾಗುತ್ತಿದೆ. ಮಾನಸಿಕವಾಗಿ ಕುಗ್ಗಿರುವವರನ್ನು ಗುರುತಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಎರಡು ದಿನಗಳಲ್ಲಿ ಮನೆಗೆ ಹೋಗಬಹುದು ಎಂದು ತಿಳಿಸಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರೂ ತಮ್ಮ ಸೀರೆಗಳಿಂದ ಆತ್ಮಹತ್ಯೆಗೆ ನೇಣು ಹಾಕಿಕೊಂಡಿದ್ದರು. ಆದ್ದರಿಂದ ಪ್ಯಾಂಟ್‌, ಶರ್ಟ್‌ ಧರಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆ.ಸಿ.ಜನರಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ಅವರು ತಿಳಿಸಿದ್ದಾರೆ.

ಮನೋರಂಜನೆ, ಮಾಹಿತಿ

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು ಆತ್ಮ ವಿಶ್ವಾಸದಿಂದ ಇರುವಂತೆ ಮಾಡಲು ಯೋಗ, ಧ್ಯಾನ, ಹಾಡು ಸೇರಿದಂತೆ ಕೊರೋನಾ ನಿಯಂತ್ರಣ ಕುರಿತು ಕಾರ್ಯಕ್ರಮಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕೊಠಡಿಯಲ್ಲಿ ಟಿ.ವಿಗಳನ್ನು ಅಳವಡಿಸಲಾಗಿದೆ, ಉತ್ತಮ ಸಂದೇಶ ಸಾರುವಂತಹ ಚಲನಚಿತ್ರಗಳು, ಸರ್ಕಾರದ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಅಲ್ಲದೆ, ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮ ಹಾಗೂ ತಗುಲಿದ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.