ಬೆಂಗಳೂರು(ಜು.19): ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಸಿಗೆ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ ಮಾಲಿಕರು ಹೋಟೆಲ್‌ಗಳನ್ನು ಕೊರೋನಾ ಸೋಂಕಿತರ ಆರೈಕೆಗೆ ನೀಡಲು ಮುಂದಾಗಿದ್ದಾರೆ.

ಈ ಕುರಿತು ಈಗಾಗಲೇ ಹೋಟೆಲ್‌ ಮಾಲಿಕರು, ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮತ್ತು ರಾಜ್ಯ ಕೊರೋನಾ ಸೋಂಕು ಆರೈಕೆ ಕೇಂದ್ರದ ಉಸ್ತುವಾರಿ ಅಧಿಕಾರಿ ರಾಜೇಂದ್ರ ಕಠಾರಿಯಾ ಅವರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದಾರೆ. ನಗರದ ಸುಮಾರು 50ರಿಂದ 60 ಹೋಟೆಲ್‌ ಮಾಲಿಕರು ಖಾಸಗಿ ಆಸ್ಪತ್ರೆಗಳಿಗೆ ಹೋಟೆಲ್‌ಗಳನ್ನು ನೀಡುವುದಕ್ಕೆ ಮುಂದಾಗಿದ್ದಾರೆ.

ಪತಿ ಸೋಂಕಿಗೆ ಬಲಿಯಾಗಿ ವಾರದಲ್ಲಿ ಪತ್ನಿ, ಬಿಎಂಟಿಸಿ ಸಿಬ್ಬಂದಿ ಕೊರೋನಾಗೆ ಬಲಿ

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌, ಹೋಟೆಲ್‌ನಲ್ಲಿ ಇರುವ ರೋಗಿಗೆ ಅದೇ ಹೋಟೆಲ್‌ನಿಂದ ಆಹಾರ ಪೂರೈಕೆ ಆಗಲಿದೆ. ಉಳಿದ ವೈದ್ಯಕೀಯ ವ್ಯವಸ್ಥೆಯನ್ನು ಆಸ್ಪತ್ರೆ ನೋಡಿಕೊಳ್ಳಲಿದೆ ಎಂದು ವಿವರಿಸಿದರು.

ಬಿಐಇಸಿನಲ್ಲಿ 5 ಸಾವಿರ ಬೆಡ್‌ ಲಭ್ಯ

ರಾಜಧಾನಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಿರುವ 10 ಸಾವಿರ ಬೆಡ್‌ ವ್ಯವಸ್ಥೆಯ ಕೊರೋನಾ ಆರೈಕೆ ಕೇಂದ್ರದಲ್ಲಿ ಐದು ಸಾವಿರ ಬೆಡ್‌ ವ್ಯವಸ್ಥೆ ಮಾಡಲಾಗಿದೆ.

ಬೆಂಗ್ಳೂರಲ್ಲಿ 30 ಸಾವಿರ ಗಡಿ ಸನಿಹಕ್ಕೆ ಕೊರೋನಾ ಸೋಂಕಿತರ ಸಂಖ್ಯೆ

ಅದಕ್ಕೆ ಪೂರಕವಾಗಿ ಶೌಚಾಲಯ, ಫ್ಯಾನ್‌ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯಗಳು ಭರದಿಂದ ಸಾಗಿವೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮುಂದಿನ ಮಂಗಳವಾರದೊಳಗೆ ಸೋಂಕಿತರ ಆರೈಕೆಗೆ ಬೆಡ್‌ಗಳು ಲಭ್ಯವಾಗಲಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.