Asianet Suvarna News Asianet Suvarna News

Dream11, ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಬಂದ್!

* ಆನ್‌ಲೈನ್‌ ಜೂಜು ಆ್ಯಪ್‌ ಡ್ರೀಮ್‌-11 ಬಂದ್‌

* ಬೆಂಗಳೂರಲ್ಲಿ ಕೇಸ್‌ ಬೆನ್ನಲ್ಲೇ ಸೇವೆ ಸ್ಥಗಿತ

* ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಸಿಗದು

Dream 11 suspends operations in Karnataka after FIR against founders pod
Author
Bangalore, First Published Oct 11, 2021, 7:47 AM IST

ನವದೆಹಲಿ(ಅ.11): ದೇಶದ ಅತ್ಯಂತ ಜನಪ್ರಿಯ ಆನ್‌ಲೈನ್‌ ಗೇಮಿಂಗ್‌ ಆ್ಯಪ್‌(Online Gaming) ‘ಡ್ರೀಮ್‌ 11’(Dream 11) ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ(Karnataka) ತನ್ನ ಸೇವೆ ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿದೆ. ಕಂಪನಿಯ ಸಂಸ್ಥಾಪಕರ ಮೇಲೆ 2 ದಿನದ ಹಿಂದೆ ಬೆಂಗಳೂರಿನಲ್ಲಿ(Bengaluru) ಪ್ರಕರಣ ದಾಖಲಾದ ಬೆನ್ನಲ್ಲೇ, ‘ಡ್ರೀಮ್‌ 11’ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಕಂಪನಿ ‘ನಮ್ಮ ಬಳಕೆದಾರರ ಕಳವಳವನ್ನು ದೂರ ಮಾಡುವ ನಿಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ನಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಇದು, ನಮ್ಮ ಹಕ್ಕುಗಳ ಕುರಿತು ಯಾವುದೇ ಪೂರ್ವಾಗ್ರಹ ಮತ್ತು ಕಾನೂನಿನ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೈಗೊಂಡ ನಿಲುವು. ಈ ವಿಷಯದಲ್ಲಿ ನಾವು ನಮ್ಮ ಮುಂದಿರುವ ಎಲ್ಲಾ ಕಾನೂನು ಅವಕಾಶಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮದು ಜವಾಬ್ದಾರಿಯುತ, ಕಾನೂನು ಪಾಲಿಸುವ ಸಂಸ್ಥೆಯಾಗಿದ್ದು, ಯಾವುದೇ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದೆ.

"

‘ಡ್ರೀಮ್‌ 11’ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಫ್ಯಾಂಟಸಿ ಗೇಮಿಂಗ್‌(Fantacy Gaming) ಅವಕಾಶ ಒದಗಿಸುವ ವೇದಿಕೆಯಾಗಿದೆ. ಕಳೆದ ವರ್ಷ ಈ ಸ್ಟಾರ್ಟಪ್‌ನ ಮಾರುಕಟ್ಟೆ ಮೌಲ್ಯ 1 ಶತಕೋಟಿ ಡಾಲರ್‌ ದಾಟುವ ಮೂಲಕ, ಇಂಥ ಸಾಧನೆ ಮಾಡಿದ ಭಾರತದ ಮೊದಲ ಗೇಮಿಂಗ್‌ ಆ್ಯಪ್‌(Gaming App) ಎಂಬ ಹಿರಿಮೆಗೆ ಪಾತ್ರವಾಗಿತ್ತು.

ಆದರೆ ಇತ್ತೀಚೆಗೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಆನ್‌ಲೈನ್‌ ಗೇಮಿಂಗ್‌ ನಿಷೇಧಿಸಿ ಕಾನೂನು ಜಾರಿಗೊಳಿಸಿತ್ತು. ಅದರ ಹೊರತಾಗಿಯೂ ಕರ್ನಾಟಕದಲ್ಲಿ ಕಂಪನಿಯ ಸೇವೆ ಮುಂದುವರೆದಿದೆ ಎಂದು ಮೂರು ದಿನಗಳ ಹಿಂದೆ ಕ್ಯಾಬ್‌ ಚಾಲಕರೊಬ್ಬರು ಬೆಂಗಳೂರಿನಲ್ಲಿ ಕೇಸು ದಾಖಲಿಸಿದ್ದರು. ಜೊತೆಗೆ ಇದೇ ಕಾಯ್ದೆಯಡಿ ಶನಿವಾರವಷ್ಟೇ ಬೆಂಗಳೂರಿನಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಕಂಪನಿ ಕರ್ನಾಟಕದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದೆ.

ಏನಿದು ಡ್ರೀಮ್‌-11?

ಇದೊಂದು ಆನ್‌ಲೈನ್‌ ಗೇಮಿಂಗ್‌ ಆ್ಯಪ್‌. ಇದರಲ್ಲಿ ಕ್ರಿಕೆಟ್‌ ಸೇರಿದಂತೆ ಹಲವು ಕ್ರೀಡೆಗಳ ಫ್ಯಾಂಟಸಿ ಗೇಮಿಂಗ್‌ಗೆ ಅವಕಾಶವಿದೆ. ಜನರು ಇದರಲ್ಲಿ ಹಣ ಬೆಟ್‌ ಕಟ್ಟಬಹುದು. ಕರ್ನಾಟಕದಲ್ಲಿ ಆನ್‌ಲೈನ್‌ ಗೇಮಿಂಗ್‌ ನಿಷೇಧಿಸಿದ ಬೆನ್ನಲ್ಲೇ ಇತ್ತೀಚೆಗೆ ಈ ಆ್ಯಪ್‌ ವಿರುದ್ಧ ಕೇಸು ದಾಖಲಿಸಿ, ಇದರಲ್ಲಿ ಬೆಟ್ಟಿಂಗ್‌ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದರು.

Follow Us:
Download App:
  • android
  • ios