ಹಂಪಿ ಉತ್ಸವ ರದ್ದು!
ವಿಶ್ವಪರಂಪರೆ ತಾಣವಾಗಿರುವ ಹಂಪಿಯಲ್ಲಿ ಕಳೆದ ಮೂರು ದಶಕಗಳಿಂದ ನಡೆದು ಬಂದಿದ್ದ ಹಂಪಿ ಉತ್ಸವವನ್ನು ಈ ಬಾರಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಚರಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು[ನ.28]: ವಿಶ್ವಪರಂಪರೆ ತಾಣವಾಗಿರುವ ಹಂಪಿಯಲ್ಲಿ ಕಳೆದ ಮೂರು ದಶಕಗಳಿಂದ ನಡೆದು ಬಂದಿದ್ದ ಹಂಪಿ ಉತ್ಸವವನ್ನು ಈ ಬಾರಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಚರಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಉತ್ಸವ ಆಚರಿಸುವುದು ಅಷ್ಟುಸೂಕ್ತವಲ್ಲ ಎಂಬ ಕಾರಣಕ್ಕೆ ಈ ವರ್ಷ ನಡೆಯಬೇಕಿದ್ದ ಹಂಪಿ ಉತ್ಸವವನ್ನು ರದ್ದು ಮಾಡಲಾಗಿದೆ. ಮುಂದಿನ ವರ್ಷ ಉತ್ಸವವನ್ನು ಅದ್ಧೂರಿಯಾಗಿ ನಡೆಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಕಳೆದ ವರ್ಷ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಸಾಕಷ್ಟುಅನುದಾನ ಬಿಡುಗಡೆ ಮಾಡಿತ್ತು ಎಂದ ಅವರು, ಈ ಬಾರಿಯೂ ಹಂಪಿ ಉತ್ಸವ ನಡೆಸುವಂತೆ ಕಲಾವಿದರಿಂದ ಒತ್ತಾಯ ಕೇಳಿಬಂದಿದೆ. ಆದರೆ, ಬರ ಪರಿಸ್ಥಿತಿಯಿಂದಾಗಿ ಅನಿವಾರ್ಯವಾಗಿ ಉತ್ಸವ ಮುಂದೂಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ರೈತರ ಸಾಲಮನ್ನಾ ಪರಿಣಾಮ ಹಲವು ಯೋಜನೆಗಳ ಅನುದಾನಗಳನ್ನು ಕಡಿತ ಮಾಡಿದ ರಾಜ್ಯ ಸರ್ಕಾರ ಈ ಹಿಂದೆ ಪ್ರತಿ ವರ್ಷ ಬಜೆಟ್‌ನಲ್ಲಿಯೇ ಹಂಪಿ ಉತ್ಸವಕ್ಕಾಗಿ ಅನುದಾನ ಘೋಷಣೆ ಮಾಡುತ್ತಿತ್ತು. ಆದರೆ ಈ ಬಾರಿ ಬಜೆಟ್‌ನಲ್ಲಿ ಹಂಪಿ ಉತ್ಸವಕ್ಕೆ ಅನುದಾನ ಮೀಸಲು ಇಡಲಾಗಿರಲಿಲ್ಲ. ಇದರಿಂದಾಗಿ ಈ ವರ್ಷ ಐತಿಹಾಸಿಕ ಹಂಪಿ ಉತ್ಸವ ನಡೆಯುವ ಕುರಿತು ಸಂಶಯ ವ್ಯಕ್ತವಾಗಿತ್ತು. ಅದು ಇದೀಗ ನಿಜವಾಗಿದೆ.
ಕಲಾವಿದರ ಆಕ್ರೋಶ:
ಪ್ರಸಿದ್ಧ ಹಂಪಿ ಉತ್ಸವ ಆಚರಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಈ ಹಿಂದಿನ ಸರ್ಕಾರಗಳು ಮಾಡುತ್ತಾ ಬಂದಿದ್ದವು. ಆದರೆ ಇದೀಗ ಮೈತ್ರಿ ಸರ್ಕಾರದಲ್ಲಿ ಮೊದಲ ಹಂಪಿ ಉತ್ಸವವೇ ರದ್ದು ಮಾಡಲಾಗಿದೆ. ಹಂಪಿ ಐತಿಹಾಸಿ ವೈಭವವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಮತ್ತು ರಾಜ್ಯದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಉತ್ಸವ ರದ್ದು ಮಾಡಿರುವುದು ಸರಿಯಲ್ಲ ಎಂದು ಹಿರಿಯ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.