ಧರ್ಮ ಸಂರಕ್ಷಣಾ ರಥ ಯಾತ್ರೆ: ಸಮಾವೇಶದಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಮೌನ ಮುರಿದ ಡಾ.ವೀರೇಂದ್ರ ಹೆಗ್ಗಡೆ!
ದೇಶದಲ್ಲಿ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ನೀವೇ ಶಿಷ್ಟ ರಕ್ಷಣೆಯನ್ನ ಮಾಡಬೇಕು ಎಂದು ಧರ್ಮಸ್ಥಳದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಭಕ್ತರನ್ನ ಧರ್ಮ ಸೈನಿಕರು ಎಂದು ಕರೆದರು.
ಧರ್ಮಸ್ಥಳ (ಅ.29): ದೇಶದಲ್ಲಿ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ನೀವೇ ಶಿಷ್ಟ ರಕ್ಷಣೆಯನ್ನ ಮಾಡಬೇಕು ಎಂದು ಧರ್ಮಸ್ಥಳದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಭಕ್ತರನ್ನ ಧರ್ಮ ಸೈನಿಕರು ಎಂದು ಕರೆದರು.
ಧರ್ಮಸ್ಥಳಕ್ಕೆ ತಲುಪಿದ ಧರ್ಮ ಸಂರಕ್ಷಣಾ ರಥ ಯಾತ್ರೆ ಸ್ವಾಗತಿಸಿದ ಬಳಿಕ ಸಾವಿರಾರು ಭಕ್ತರನ್ನು ಉದ್ದೇಶಿಸಿ ಸಮಾವೇಶದಲ್ಲಿ ಮಾತನಾಡಿದ ಹೆಗ್ಗಡೆಯವರು, ಕಾರ್ಯಕ್ರಮಕ್ಕೆ ನಿಮ್ಮ ಕೋರಿಕೆ ಮೇಲೆ ಬಂದಿದ್ದೇನೆ. ಕ್ಷೇತ್ರದ ಕುರಿತು ಧರ್ಮ ರಕ್ಷಕರ ತಂಡವಾಗಿ ಉತ್ತಮ ಕೆಲಸ ಮಾಡಿದ್ದೀರಿ. ಕ್ಷೇತ್ರದಲ್ಲಿ ಇರುವವರು ಮಂಜುನಾಥ ಸ್ವಾಮಿ ಚಂದ್ರ ನಾಥ್ ಸ್ವಾಮಿ ಇಬ್ಬರು ಶಾಂತ. ಅವರು ಶಾಂತವಾಗಿರುವ ಹಿನ್ನಲೆಯಲ್ಲಿ ನಾನು ಕೂಡ ಶಾಂತ ನಾಗಿದ್ದೇನೆ. ನಿಮ್ಮೆಲ್ಲರ ಅಭಯದ ಮೂಲಕ ನಾನು ಶಾಂತನಾಗಿದ್ದೇನೆ. ನೀವೇ ದುಷ್ಟರ ಶಿಕ್ಷೆ ಮಾಡಬೇಕು ದೇಶವನ್ನ ಹಾಳು ಮಾಡಬೇಕಾದ್ರೆ ಮೊದಲು ಸಂಸ್ಕೃತಿಯನ್ನ ನಾಶ ಮಾಡಬೇಕು ಎಂಬ ಮಾತಿದೆ. ಅದರಂತೆ. ದುಷ್ಟಶಕ್ತಿಗಳು ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೇ ಯಾವ ಕ್ಷೇತ್ರಗಳಿಗೂ ಬರಬಹುದು. ಆದರೆ ವಿಷವನ್ನು ಸ್ವೀಕರಿಸುವ ಶಕ್ತಿ ಸ್ವಾಮಿ ಮಂಜುನಾಥನಿಗೆ ಇದೆ ಎಂದರು.
ಧರ್ಮಸ್ಥಳ ಸೌಜನ್ಯ ಪ್ರಕರಣ ತೀರ್ಪಿನ ಬಳಿಕ ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ!
ದೇಶ, ಸಂಸ್ಕೃತಿ ಹಾಳು ಮಾಡುವ ಪ್ರಯತ್ನ:
ವೈಯಕ್ತಿಕವಾದ ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು. ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದರೆ ಎಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಕಾರಣ. ಕ್ಷೇತ್ರದ ಕಾರ್ಯವನ್ನು ಎಲ್ಲಾ ಜನರು ಮೆಚ್ಚಿದ್ದಾರೆ. ಇಲ್ಲಿಗೆ ಇಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಮ್ಮ ವಾಹನವನ್ನ ಅಪೇಕ್ಷಿಸದೆ ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ನೀಡಿದ್ದೀರಿ. ಇದು ದೇವರ ಪರೀಕ್ಷೆ, ಮಳೆ ಬರುತ್ತಿದೆ, ಆದರೆ ಯಾರೂ ಓಡುತ್ತಿಲ್ಲ ನಿಂತಲ್ಲೇ ನಿಂತಿದ್ದೀರಿ. ನಿಮ್ಮ ದೀಕ್ಷೆಯಿಂದ ಈ ಎಲ್ಲಾ ಕಷ್ಟಗಳೂ ದೂರವಾಗಲಿ. ಧರ್ಮಸ್ಥಳಕ್ಕೆ ಆಪತ್ತು ಬಂದಾಗ ನೀವು ಕೈಗೊಂಡ ಈ ಪ್ರಾರ್ಥನೆಯನ್ನ ಸ್ವಾಮಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದರು.
ಸೌಜನ್ಯ ಪ್ರಕರಣ ಬಗ್ಗೆ ಮೌನ ಮುರಿದ ಧರ್ಮಾಧಿಕಾರಿ:
ಸೌಜನ್ಯ ಪ್ರಕರಣದಲ್ಲಿ ದಾಖಲೆಯಿಲ್ಲದೆ ಆರೋಪ ಮಾಡುತ್ತಿದ್ದಾರೆ. ಯಾವುದೇ ರೀತಿಯ ತನಿಖೆಗೂ ನಾವು ಸಿದ್ಧರಾಗಿದ್ದೇವೆ. ದುಷ್ಟರು ದಾಖಲೆ ಇಲ್ಲದೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಸೌಜನ್ಯ ಪ್ರಕರಣದ ಆರೋಪಗಳ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೌನ ಮರಿದರು.
ನನಗೆ ಯಾವುದೇ ಹಾನಿಯಾಗಿಲ್ಲ, ಕ್ಷೇತ್ರದಲ್ಲಿ ಯಥಾ ಪ್ರಕಾರ ಧರ್ಮ ನಡಿತಾ ಇದೆ, ಭಕ್ತರು ಬರುತ್ತಿದ್ದಾರೆ. ಸ್ವಾಸ್ಥ್ವ ಸಂಕಲ್ಪ ಮಾಡುವ ಮೂಲಕ ಒಂದು ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ಬಿರುಗಾಳಿ ಬಂದಾಗ ನಾಶದ ಜೊತೆಗೆ ಸ್ವಚ್ಛವಾಗುತ್ತದೆ, ನಿಮ್ಮ ಈ ಬಿರುಗಾಳಿ ಮುಂದೆ ಸ್ವಚ್ಛತೆಗೆ ದಾರಿಯಾಗಲಿ. ನಮ್ಮ ಯಾವುದೇ ಹಿಂದೂ ಕ್ಷೇತ್ರಗಳಿಗೂ ಈ ತರದ ಹಾನಿಗಳು ಆಗಬಾರದು. ನಮಗೆ ಯಾವುದೇ ಭಯವಿಲ್ಲ ನನಗೆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿಯ ಭಯವಿದೆ. ತಿಳಿದು ತಪ್ಪು ಮಾಡಿದರೆ ಮಾತ್ರ ದೇವರು ಶಿಕ್ಷೆ ನೀಡುತ್ತಾನೆ. ಧರ್ಮ ದೇವತೆಗಳಿಗೆ ಉತ್ತರ ಕೊಡಬೇಕಾದ ನೈತಿಕ ಭಾದ್ಯತೆ ಇದೆ. ನಾವು ತಪ್ಪು ಮಾಡಿಲ್ಲ, ಸತ್ಯದಲ್ಲಿ ನ್ಯಾಯದಲ್ಲಿದ್ದೇವೆ. ಏನು ಬೇಕಾದರೂ ಯಾವ ತನಿಖೆ ಬೇಕಾದರೂ ನಾನು ಸಿದ್ಧ, ನ್ಯಾಯಕ್ಕೆ ತಲೆಬಾಗುತ್ತೇನೆ. ಯಾವ ಸಹಾಯ ಸಂಪತ್ತು ಅಪೇಕ್ಷಿಸದೆ ಬಂದ ಅಪಾರ ಭಕ್ತರಿಗೆ ಧನ್ಯವಾದ ತಿಳಿಸಿದರು. ನಿಮಗೆ ಧನ್ಯವಾದಗಳು
ನೀರು ಅಮೂಲ್ಯವಾದುದು, ರೈತರ ನಿಜವಾದ ಜೀವನಾಡಿ: ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಸುತ್ತ ಭಕ್ತಸಾಗರ:
ಇಂದು ಸಾವಿರಾರು ಭಕ್ತರ ಪಾದಯಾತ್ರೆ ಮೂಲಕ ಧರ್ಮ ಸಂರಕ್ಷಣಾ ರಥ ಯಾತ್ರೆ ಧರ್ಮಸ್ಥಳ ತಲುಪಿತು. ಭಜನಾ ಸಂಕೀರ್ತನೆ, ಚೆಂಡೆ ಮದ್ದಳೆಯೊಂದಿಗೆ ಆಗಮಿಸಿದ ರಥಯಾತ್ರೆಯನ್ನು ಡಾ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಸಾವಿರಾರು ಭಕ್ತರು ವೀರೇಂದ್ರ ಹೆಗ್ಗಡೆಯವರ ಮಾತು ಕೇಳಲು ಕಾತುರದಿಂದ ಜಮಾಯಿಸಿದ್ದರು. ಅಪಾರ ಜನಸ್ಥೋಮದೊಂದಿಗೆ ಆಗಮಿಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಒಳಗೊಂಡಂತೆ ಕ್ಷೇತ್ರದ ಗಣ್ಯರು ನಾಡಿನ ಪ್ರಸಿದ್ಧ ಸಂತರು ಉಪಸ್ಥಿತರಿದ್ದರು.