Asianet Suvarna News Asianet Suvarna News

ಲಾಲ್‌ಬಾಗಲ್ಲಿ ‘ಬೆಟ್ಟದ ಹೂ’ ನೋಡಲು ಮುಗಿಬಿದ್ದ ಜನ, ಒಂದೇ ದಿನ 29 ಲಕ್ಷ ಸಂಗ್ರಹ

ಡಾ.ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರ ಜೀವನ ಕುರಿತ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ  ಭಾನುವಾರ 43 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು.  ಸಂಜೆ ಡಾ.ರಾಜ್‌ ಕುಟುಂಬದ ಸದಸ್ಯರು ಲಾಲ್‌ಬಾಗ್‌ಗೆ ಆಗಮಿಸಿದ್ದರು.

dr rajkumar family members visited lalbagh flower show
Author
Bengaluru, First Published Aug 8, 2022, 5:23 PM IST

ಬೆಂಗಳೂರು (ಆ.8): ದಿನವಿಡಿ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯ ನಡುವೆಯೂ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದು, ಇಡೀ ಗಾಜಿನ ಮನೆ ತುಂಬಿ ತುಳುಕುತ್ತಿತ್ತು. ರಜಾ ದಿನವಾದ ಕಾರಣ ಭಾನುವಾರ ನಗರದ ವಿವಿಧ ಭಾಗಗಳಿಂದ ಮಕ್ಕಳು, ಹಿರಿಯರು ಸೇರಿದಂತೆ ಕುಟುಂಬ ಸಹಿತ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಟಿಕೆಟ್‌ ಪಡೆಯಲು ಬಹು ಉದ್ದನೆಯ ಸಾಲು ಕಂಡು ಬಂದಿತ್ತು. ಗಾಜಿನ ಮನೆ ಹೊರತುಪಡಿಸಿ ಉಳಿದೆಡೆ ಜನರು ಛತ್ರಿ ಹಿಡಿದುಕೊಂಡು ಓಡಾಡಿದರು. ಲಾಲ್‌ಬಾಗ್‌ ಬಂಡೆ, ಕೆರೆ ದಂಡೆ, ಬೋನ್ಸಾಯ್‌ ಗಾರ್ಡನ್‌, ಟೊಪಿಯಾರಿ ಗಾರ್ಡನ್‌ ಬಳಿಯೂ ಜನ ಹೆಚ್ಚಾಗಿದ್ದರು. ಉದ್ಯಾನವನಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಅಪ್ಪು ಮತ್ತು ಡಾ.ರಾಜ್‌ ಅವರ ಪ್ರತಿಮೆಗಳ ಮತ್ತು ರಾಜ್‌ ಕುಮಾರ್‌ ಅವರ ಗಾಜನೂರು ಮನೆ, ಮುಂದೆ ಸೆಲ್ಪಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು. ಇದರಿಂದ ಜನ ಸರಾಗವಾಗಿ ಹೋಗದ ಹಿನ್ನಲೆ ನೂಕು ನುಗ್ಗಲಿಗೆ ಕಾರಣವಾಗಿತ್ತು. ಫಲಪುಷ್ಪ ಪ್ರದರ್ಶನಕ್ಕಾಗಿ ಆಗಮಿಸಿದ್ದ ಜನತೆ ಡಾ.ಮರೀಗೌಡ ಸಭಾಂಗಣದಲ್ಲಿ ಆಯೋಜಿಸಿರುವ ಪುಷ್ಪಗಳ ಜೋಡಣೆಯನ್ನು ಕಣ್ತುಂಬಿಕೊಂಡರು. ಅನೇಕರು ನರ್ಸರಿಗಳತ್ತ ತೆರಳಿ ಬೇಕಾದ ಅಲಂಕಾರಿಕ ಗಿಡಗಳನ್ನು ಖರೀದಿಸಿದರು.

ಸಂಚಾರ ದಟ್ಟಣೆ: ಬಹುತೇಕರು ವಾಹನಗಳಲ್ಲೇ ಆಗಮಿಸಿದ್ದರಿಂದ ಸಿದ್ದಾಪುರ ರಸ್ತೆ, ಜಯನಗರ 2ನೇ ಬ್ಲಾಕ್‌ ರಸ್ತೆ, ಆರ್‌.ವಿ. ರಸ್ತೆ, ಲಾಲ್‌ಬಾಗ್‌ ಕೋಟೆ ರಸ್ತೆ, ಹೊಸೂರು ರಸ್ತೆ, ಡಬ್ಬಲ್‌ ರೋಡ್‌, ಶಾಂತಿನಗರ ಭಾಗದ ಕೆಲವು ರಸ್ತೆಗಳಲ್ಲಿ ವಾಹನಗಳು ಬೆಳಗಿನಿಂದ ಮಂದಗತಿಯಲ್ಲಿ ಸಾಗುತ್ತಿದ್ದವು. ಸಂಜೆಯ ವೇಳೆಗೆ ಎಲ್ಲೆಡೆ ಸಂಚಾರ ದಟ್ಟಣೆಯಿಂದ ವಾಹನ ಸಂಚಾರಕ್ಕೆ ತೀವ್ರ ತೊಡಕಾಯಿತು.

ಡಾ.ರಾಜ್‌ ಕುಟುಂಬ ಲಾಲ್‌ಬಾಗ್‌ಗೆ ಭೇಟಿ:
ಡಾ.ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರ ಜೀವನ ಕುರಿತ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಭಾನುವಾರ ಸಂಜೆ ಡಾ.ರಾಜ್‌ ಕುಟುಂಬ ಲಾಲ್‌ಬಾಗ್‌ಗೆ ಆಗಮಿಸಿದ್ದರು. ರಾಜ್‌ಕುಮಾರ್‌ ಮಗಳು ಪೂರ್ಣಿಮಾ ಮತ್ತವರ ಕುಟುಂಬ. ರಾಘವೇಂದ್ರ ರಾಜ್‌ಕುಮಾರ್‌ ಮಕ್ಕಳು ಮತ್ತು ಪುನೀತ್‌ ರಾಜ್‌ಕುಮಾರ್‌ ಮಕ್ಕಳು ಆಗಮಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್‌ ಅವರ ಸಹೋದರ ಗೋವಿಂದರಾಜ್‌ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರಗಳು, ಪ್ರತಿಮೆಗಳನ್ನು ಸಂತಸ ವ್ಯಕ್ತಪಡಿಸಿದರು. ಕೆಲ ಕಾಲ ಗಾಜಿನ ಮನೆಯಲ್ಲಿ ಸುತ್ತಾಡಿದರು.

43 ಸಾವಿರ ಮಂದಿ ಭೇಟಿ: 29 ಲಕ್ಷ ಸಂಗ್ರಹ
ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ಒಟ್ಟು 43 ಸಾವಿರ ಮಂದಿ ಭೇಟಿ ನೀಡಿದ್ದರು. ಈ ಪೈಕಿ 37,734 ವಯಸ್ಕರು ಮತ್ತು 5,322 ಮಕ್ಕಳು ಸೇರಿ ಒಟ್ಟು 43,056 ಮಂದಿ ಭೇಟಿ ನೀಡಿದ್ದರು. ಪ್ರವೇಶ ಶುಲ್ಕದಿಂದ 29,62,855 ರು.ಗಳು ಸಂಗ್ರಹವಾಗಿದೆ.

ತೆಂಗಿನ ಗರಿಯಲ್ಲಿ ಅರಳಿದ ಅಪ್ಪು ಸಮಾಧಿ: ತೆಂಗಿನ ಗರಿಗಳಿಂದ ಸಿದ್ಧಪಡಿಸಿರುವ ಅಪ್ಪು ಸಮಾಧಿ ಪ್ರತಿರೂಪ ಹಾಗೂ ನಿಂತಿರುವ ಮಹಿಳೆಯ ಕೃತಿ ಲಾಲಬಾಗ್‌ನಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನದ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದು, ನೋಡಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ಲಾಲ್‌ಬಾಗ್‌ನ ಡಾ. ಮರೀಗೌಡ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ಇಕೆಬಾನ (ಹೂಗಳ ಅಲಂಕಾರ) ಮತ್ತು ತರಕಾರಿ ಕೆತ್ತನೆ ಕಾರ್ಯಗಾರದಲ್ಲಿ ಹತ್ತಾರು ಬಗೆಯ ಆಕೃತಿಗಳು ಮೂಡಿ ಬಂದಿವೆ. ಒಂದೆಡೆ ಫಲಪುಷ್ಪ ಪ್ರದರ್ಶನದಲ್ಲಿ ಡಾ.ರಾಜಕುಮಾರ್‌ ಮತ್ತು ಪುನೀತ್‌ ರಾಜಕುಮಾರ್‌ ಕುರಿತು ಪುಷ್ಪಗಳಿಂದ ನಿರ್ಮಿಸಿರುವ ಕೃತಿಗಳು, ಮತ್ತೊಂದೆಡೆ ತೆಂಗಿನ ಗರಿಯಲ್ಲಿ ತರಕಾರಿ ಕೆತ್ತನೆಗಳು ವೀಕ್ಷಕರನ್ನು ಆಕರ್ಷಿಸುತ್ತಿವೆ.

ಹೂಗಳಲ್ಲರಳಿದ ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ, ಲಾಲ್‌ಬಾಗ್ ಫ್ಲವರ್ ಶೋ ಆಕರ್ಷಣೆ

ಸುಮಾರು 200ಕ್ಕೂ ಹೆಚ್ಚಿನ ಮಹಿಳೆಯರು ತೆಂಗಿನ ಗರಿ, ಬಾಳೆದಿಂಡು, ತರಕಾರಿ, ವಿವಿಧ ಬಗೆಯ ಹೂಗಳು ಮತ್ತು ಹಣ್ಣುಗಳಿಂದ ಹಲವು ಬಗೆಯ ಕಣ್ಮನ ಸೆಳೆಯುವ ಕೃತಿ, ಹೂವಿನ ರಂಗೋಲಿ ಹಾಗೂ ಮನೆಯ ಅಲಂಕಾರಿಕ ರಚನೆಗಳು ಗಮನ ಸೆಳೆದಿವೆ.

ಫಲಪುಷ್ಪದಲ್ಲಿ ಅರಳಿದ ಡಾ| ರಾಜ್‌, ಪುನೀತ್‌ ಜೀವನ

12ರಂದು ಪ್ರಶಸ್ತಿ ಪ್ರದಾನ: ಈ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಆ.12ರವರೆಗೆ ನಡೆಯಲಿದೆ. ಅಂತಿಮ ದಿನ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Follow Us:
Download App:
  • android
  • ios