ಬೆಂಗಳೂರು(ಮೇ.07): ರಾಜ್ಯದಲ್ಲಿ ತಕ್ಷಣವೇ ಲಾಕ್‌ಡೌನ್‌ ಮಾಡಬೇಕು. ಈಗಾಗಲೇ ಆರೋಗ್ಯ ವ್ಯವಸ್ಥೆ ಕುಸಿದಿದ್ದು, ಇನ್ನೂ ಕುಸಿದು ಬೀಳುವ ತನಕ ಕಾಯುವುದರಲ್ಲಿ ಅರ್ಥವಿಲ್ಲ. ಸರ್ಕಾರ ಲಾಕ್‌ಡೌನ್‌ ಮಾಡಲು ಯಾಕೆ ಮೀನಾಮೇಷ ಎಣಿಸುತ್ತಿದೆ ಎಂದು ಅರ್ಥ ಆಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫನಾ)ದ ಅಧ್ಯಕ್ಷ ಡಾ.ಎಚ್‌.ಎಂ.ಪ್ರಸನ್ನ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನತಾ ಕರ್ಫ್ಯೂ ಹೇರಿ ಒಂದು ವಾರ ಆಗಿದ್ದರೂ ಇನ್ನೂ ಪ್ರಕರಣ ಸಂಖ್ಯೆ ಕಡಿಮೆ ಆಗಿಲ್ಲ, ಬದಲಾಗಿ ಹೆಚ್ಚಾಗುತ್ತಿದೆ. ಉತ್ಪಾದನಾ ಘಟಕ, ಗಾರ್ಮೆಂಟ್‌ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ನಡೆಯುತ್ತಿದೆ. ಅಗತ್ಯ ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ಮಧ್ಯಾಹ್ನ 12 ಗಂಟೆ ತನಕ ಜನ ಓಡಾಡುತ್ತಿದ್ದಾರೆ. ಕೊರೋನಾ ವೈರಾಣು ಗಾಳಿಯಲ್ಲಿ ತೇಲುತ್ತಿರುವುದರಿಂದ ಲಾಕ್‌ಡೌನ್‌ ಮಾಡದೇ ವಿಧಿಯಿಲ್ಲ ಎಂದರು.

"

ಸರ್ಕಾರ ಈಗಿನ ಪಾಸಿಟಿವಿಟಿ ದರ ನೋಡಿಕೊಂಡು ಲಾಕ್‌ಡೌನ್‌ ಮಾಡಲು ಹಿಂಜರಿಯುತ್ತಿರುವಂತೆ ಕಾಣುತ್ತಿದೆ. ಆದರೆ ಬೆಂಗಳೂರಿನಲ್ಲಿ ಪ್ರತಿ ದಿನ 10 ಸಾವಿರದಿಂದ 15 ಸಾವಿರ ಮಂದಿಗೆ ಸಿಟಿ ಸ್ಕಾ್ಯನ್‌ನಲ್ಲಿ ಪಾಸಿಟಿವ್‌ ಬರುತ್ತಿರುವುದನ್ನು ಗಮನಿಸಿದಂತಿಲ್ಲ. ಸರ್ಕಾರಕ್ಕೆ ಜನರಿಗಿಂತ ಹಣವೇ ಮುಖ್ಯ ಆದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಳಂಬೆಳಿಗ್ಗೆ ಅಣ್ಣಮ್ಮ ದೇವಿ ದರ್ಶನ ಪಡೆದ ಸಿಎಂ: ಲಾಕ್‌ಡೌನ್‌ ಸುಳಿವು ಕೊಟ್ಟ ಬಿಎಸ್‌ವೈ

ಈಗಿರುವ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಬಹುದೇ ಹೊರತು ಕಡಿಮೆ ಆಗಲಾರದು. ಈಗಾಗಲೇ ವೈದ್ಯಕೀಯ ವ್ಯವಸ್ಥೆಯ ಮೇಲೆ ಅಪರಿಮಿತ ಒತ್ತಡ ಸೃಷ್ಟಿಯಾಗಿದ್ದು, ಮುಂದೆ ಆಸ್ಪತ್ರೆಯ ಮಾಲಿಕರು, ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯನ್ನು ಮುಚ್ಚಿ ಓಡಿಹೋಗಬೇಕಾದ ಪರಿಸ್ಥಿತಿ ಬರಬಹುದು ಎಂದು ತಿಳಿಸಿದರು.

ಲಾಕ್‌ಡೌನ್‌ ಮಾಡುವಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾಗ ನಾವು ಕೋರಿದ್ದೆವು. ಕೋವಿಡ್‌ ತಾಂತ್ರಿಕ ಸಮಿತಿ ಕೂಡ ಇಂತಹದ್ದೆ ಸಲಹೆ ನೀಡಿದೆ. ಆದರೂ ಸರ್ಕಾರ ಲಾಕ್‌ಡೌನ್‌ಗೆ ಮೀನಮೇಷ ಎಣಿಸುತ್ತಿದೆ. ಈಗ ಲಾಕ್‌ಡೌನ್‌ ಮಾಡಿದರೆ ಮುಂದಿನ ಒಂದು ವಾರದಲ್ಲಿ ಪರಿಸ್ಥಿತಿ ತುಸು ಸುಧಾರಿಸಬಹುದು. ಅದು ಬಿಟ್ಟು ಒಂದು ವಾರ ಬಿಟ್ಟೇ ಲಾಕ್‌ಡೌನ್‌ ಮಾಡುತ್ತೇನೆ ಎಂದರೆ ಆಗ ಪರಿಸ್ಥಿತಿ ಅಧೋಗತಿಗೆ ಹೋಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಆಮ್ಲಜನಕದ ಕೊರತೆ ತೀವ್ರವಾಗಿಯೇ ಇದೆ. ಈ ಸಮಸ್ಯೆ ಪರಿಹರಿಸಲು ಸರ್ಕಾರ ಏನೇನೂ ಮಾಡುತ್ತಿಲ್ಲ. ನಮಗೆ ಪ್ರತಿದಿನ ಎಷ್ಟುಆಮ್ಲಜನಕ ಬೇಕು ಎಂಬ ಮಾಹಿತಿ ನೀಡುವಂತೆ ಸರ್ಕಾರ ಹೇಳಿದೆ. ಅದರಂತೆ ಮಾಹಿತಿ ಸಲ್ಲಿಸುತ್ತಿದ್ದರೂ ಕೂಡ ಆಮ್ಲಜನಕ ಸಿಗುತ್ತಿಲ್ಲ. ವಾರ್‌ ರೂಂ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ನಾವು ಹಿಂದಿನಂತೆ ನಮ್ಮ ಪೂರೈಕೆದಾರರ ಕೈಯಿಂದಲೇ ಆಮ್ಲಜನಕ ಪಡೆಯುತ್ತಿದ್ದೇವೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona