ಹೆಚ್ಚುವರಿ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹಿಸಲು ಡಿಪಿಆರ್
500 ಮೆ.ವ್ಯಾ. ವಿದ್ಯುತ್ ಹೈಬ್ರಿಡ್ ಮಾದರಿಯಲ್ಲಿ ಪೂರೈಸಲು ಇಂಧನ ಇಲಾಖೆ ಸಿದ್ಧತೆ, ರಾಜ್ಯದಲ್ಲಿ ಈಗ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ
ಲಿಂಗರಾಜು ಕೋರಾ
ಬೆಂಗಳೂರು(ನ.04): ರಾಜ್ಯದಲ್ಲಿ ಎಲ್ಲ ಮೂಲಗಳಿಂದ ಬೇಡಿಕೆಗಿಂತಲೂ ದುಪ್ಪಟ್ಟು ವಿದ್ಯುತ್ ಉತ್ಪಾದಿಸುತ್ತಿರುವ ಇಂಧನ ಇಲಾಖೆ ಬರುವ ದಿನಗಳಲ್ಲಿ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್‌ಅನ್ನು ಬ್ಯಾಟರಿಯಲ್ಲಿ ಸಂಗ್ರಹಿಸಿ ಹೈಬ್ರಿಡ್ ಮಾದರಿಯಲ್ಲಿ ಗ್ರಾಹಕರಿಗೆ ಪೂರೈಸಲು ಮುಂದಾಗಿದೆ. ರಾಜ್ಯ ನವೀಕರಿಸಬಹುದಾದ ಇಂದನ ಅಭಿವೃದ್ಧಿ ಸಂಸ್ಥೆಯ (ಕೆಆರ್‌ಇಡಿಎಲ್) ಮೂಲಕ ಪವನಶಕ್ತಿ, ಸೌರಶಕ್ತಿಯಿಂದ ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್‌ನಲ್ಲಿ 5000 ಮೆಗಾ ವ್ಯಾಟ್‌ನಷ್ಟನ್ನು ಬ್ಯಾಟರಿ ಮೂಲಕ ಸಂಗ್ರಹಿಸಿ ತಾಂತ್ರಿಕ ಸಮಸ್ಯೆ, ಹವಾಮಾನ ವೈಪರಿತ್ಯ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತವಾದಾಗ ಬಳಸಿಕೊಳ್ಳಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.
ಈ ಯೋಜನೆಯಡಿ ಚಿತ್ರದುರ್ಗ, ಕೊಪ್ಪಳ, ಧಾರವಾಡ, ರಾಯಚೂರು, ವಿಜಯನಗರ, ವಿಜಯಪುರ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೈಬ್ರಿಡ್ ಪಾರ್ಕ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
Electric Battery ಬೆಂಗಳೂರು ಸ್ಟಾರ್ಟ್‌ಅಪ್‌ನಿಂದ ಅತೀ ವೇಗವಾಗಿ ಚಾರ್ಜ್, ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ಸಂಶೋಧನೆ!
ಕೆಆರ್‌ಇಡಿಎಲ್ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಮೇಳದಲ್ಲಿ ತನ್ನ ಯೋಜನೆಗಳ ಪ್ರದರ್ಶನ ಮಳಿಗೆ ತೆರೆದಿದೆ. ಈ ವೇಳೆ ‘ಕನ್ನಡಪ್ರಭ’ ದೊಂದಿಗೆ ಮಾತನಾಡಿದ ಸಂಸ್ಥೆಯ ಉನ್ನತ ಅಧಿಕಾರಿಗಳು ಹೈಬ್ರಿಡ್ ಮಾದರಿ ವಿದ್ಯುತ್ ಪೂರೈಕೆ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 15 ಸಾವಿರ ಮೆಗಾ ವ್ಯಾಟ್ ವಿದ್ಯುತ್‌ನ ಬೇಡಿಕೆಯಿದೆ. ಆದರೆ, ಎಲ್ಲ ಮೂಲಗಳಿಂದ 30 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಪೈಕಿ 15 ಸಾವಿರಕ್ಕೂ ಹೆಚ್ಚು ಮೆಗಾ ವ್ಯಾಟ್ (15 ಗಿಗಾ ವ್ಯಾಟ್) ವಿದ್ಯುತ್ ಅನ್ನು ನವೀಕರಿಸಬಹುದಾದ ಶಕ್ತಿಗಳಿಂದಲೇ ಉತ್ಪಾದಿಸಲಾಗುತ್ತಿದೆ. ಹೆಚ್ಚುವರಿಯಾಗಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಅವಶ್ಯಕತೆ ಇರುವವರಿಗೆ ಮಾರಾಟ ಮಾಡುತ್ತಿದೆ. ಅದರ ನಡುವೆಯೂ ವಿದ್ಯುತ್ ಉತ್ಪಾದನೆಯಲ್ಲಿ ಅದರಲ್ಲೂ ನವೀಕರಿಸಬಹುದಾದ ಇಂಧನಗಳ ಮೂಲಕ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿದ್ದು ಪ್ರಮುಖವಾಗಿ ಸೋಲಾರ್, ಪವನ ವಿದ್ಯುತ್ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಹೀಗೆ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಬ್ಯಾಟರಿ ಮೂಲಕ ಶೇಖರಿಸಿ ಅದನ್ನು ಹೈಬ್ರಿಡ್ ವಿದ್ಯುತ್ ಆಗಿ ಪರಿವರ್ತಿಸಲು ಇದೀಗ ಯೋಜನೆ ರೂಪಿಸಲಾಗುತ್ತಿದೆ.
30,000 ಕೊಟ್ಟರೆ ಎಲೆಕ್ಟ್ರಿಕ್ ಆಗುತ್ತೆ ಪೆಟ್ರೋಲ್ ಸ್ಕೂಟರ್..!
ಕೇಂದ್ರ ಸರ್ಕಾರ ನವೀಕರಿಸಬಹುದಾದ ಅಥವಾ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ರೂಪಿಸಿದೆ. ‘ಒನ್ ಸನ್ ಒನ್ ವರ್ಡ್’ ಯೋಜನೆಯಡಿ ಎಲ್ಲ ರಾಜ್ಯಗಳೂ 2030ರ ವೇಳೆಗೆ 5 ಲಕ್ಷ ಮೆಗಾ ವ್ಯಾಟ್ (500 ಗಿಗಾ ವ್ಯಾಟ್) ವಿದ್ಯುತ್‌ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲು ಗುರಿ ನೀಡಿದೆ. ಆ ರೀತಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ‘ಇನ್‌ಸ್ಟ್ರಾ ಸ್ಟೇಟ್ ಟ್ರಾನ್ಸ್‌ಮಿಷನ್ ಸಿಸ್ಟಮ್’ ಮೂಲಕ ರಾಜ್ಯ ರಾಜ್ಯಗಳ ಮಧ್ಯೆ ಪೂರೈಕೆಗೆ ಸೂಚಿಸಿದೆ. ಈ ಯೋಜನೆಯಡಿ ರಾಜ್ಯ ಇಂಧನ ಇಲಾಖೆಯು ಕೆಆರ್‌ಇಡಿಎಲ್ ಮೂಲಕ ನವೀಕರಿಸಬಹುದಾದ ಇಂಧನ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಹಲವು ಯೋಜನೆಗಳನ್ನು ಕೈಗೊಂಡಿದೆ. ಇದರಲ್ಲಿ ಹೈಬ್ರೀಡ್ ಮಾದರಿ ಕೂಡ ಒಂದು ಎಂದು ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.
ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದನೆ
ಸೋಲಾರ್: 7800 ಮೆ.ವ್ಯಾಟ್
ಪವನ ಶಕ್ತಿ: 5200 ಮೆ. ವ್ಯಾಟ್
ಕೋಜೆನ್: 1730 ಮೆ.ವ್ಯಾಟ್
ಬಿಯೋ ಮಾಸ್: 0.130 ಮೆ.ವ್ಯಾಟ್
ಸಣ್ಣ ಹೈಡ್ರೋ: 0.90 ಮೆ.ವ್ಯಾಟ್