ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ! ಭದ್ರತೆಯ ನೆಪದಲ್ಲಿ DPAR ಹೊರಡಿಸಿದ ಹೊಸ ಆದೇಶದ ಹಿಂದಿನ ಅಸಲಿ ಕಾರಣವೇನು? ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ತಂತ್ರವೇ? ಪೂರ್ಣ ವಿವರ ತಿಳಿಯಿರಿ.
ಬೆಂಗಳೂರು (ಫೆ.18): ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆಯೇ? ಇಂತಹದೊಂದು ಅನುಮಾನ ಈಗ ವಿಧಾನಸೌಧದ ಪಡಸಾಲೆಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಭದ್ರತೆಯ ನೆಪವೊಡ್ಡಿ ಮಾಧ್ಯಮಗಳ ಸಂಚಾರ ಮತ್ತು ವರದಿಗಾರಿಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊಸ 'ಲಕ್ಷ್ಮಣ ರೇಖೆ' ಎಳೆದಿದೆ.
ತಮಿಳುನಾಡು ಮಾದರಿ ಕಾಪಿ: ಮಾಧ್ಯಮಗಳಿಗೆ ನಿರ್ದಿಷ್ಟ ಜಾಗದ ಬೇಲಿ?
ಕರ್ನಾಟಕ ಸರ್ಕಾರ ಈಗ ನೆರೆಯ ತಮಿಳುನಾಡು ಮಾದರಿಯನ್ನು ಅನುಸರಿಸಲು ಹೊರಟಿದೆ. ಇನ್ಮುಂದೆ ವಿಧಾನಸೌಧದ ಒಳಗೆ ಅಥವಾ ಜನಪ್ರತಿನಿಧಿಗಳ ಹಿಂದೆ ಹೋಗಿ ಬೈಟ್ (ಹೇಳಿಕೆ) ಪಡೆಯುವಂತಿಲ್ಲ. ಕೇವಲ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಮಾಧ್ಯಮಗಳು ಹೇಳಿಕೆ ಪಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ವಾರ್ತಾ ಇಲಾಖೆಗೆ ಪತ್ರ ಬರೆದಿರುವ DPAR, ಗಣ್ಯರ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದೆ.

ತನ್ನ ಲೋಪ ಮುಚ್ಚಿಕೊಳ್ಳಲು ಡಿಪಿಎಆರ್ ಹರಸಾಹಸ?
ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಈ ಸವಾರಿ ಮಾಡುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ ಎಂಬ ಚರ್ಚೆ ಶುರುವಾಗಿದೆ. ಕಳೆದ ವಾರವಷ್ಟೇ ಇದೇ ಡಿಪಿಎಆರ್ ಇಲಾಖೆಯ ಸಿಬ್ಬಂದಿಯಿಂದ 300 ಗ್ರಾಂ ಚಿನ್ನದ ಕಳ್ಳತನ ನಡೆದಿರುವುದು ಜಗಜ್ಜಾಹೀರಾಗಿತ್ತು. ಅಲ್ಲದೆ, ಇತ್ತೀಚೆಗೆ ಸಿಎಂ ಸಹಿ ಮಾಡಿದ್ದ ಶಿಫಾರಸ್ಸು ಪತ್ರ ವೈರಲ್ ಆಗಿದ್ದು ಮತ್ತು ಸ್ವಯಂ ನಿವೃತ್ತಿ ಪಡೆದ ಸ್ವಾಮೀಜಿಯೊಬ್ಬರಿಗೆ ಬಡ್ತಿ ನೀಡಿದ ವಿವಾದಗಳು ಸರ್ಕಾರಕ್ಕೆ ಮುಜುಗರ ತಂದಿದ್ದವು. ಈ ಎಲ್ಲಾ ಆಡಳಿತಾತ್ಮಕ ವೈಫಲ್ಯಗಳು ಮಾಧ್ಯಮಗಳಲ್ಲಿ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

ವಿರೋಧ ಪಕ್ಷಗಳ ಧ್ವನಿ ಅಡಗಿಸುವ ತಂತ್ರ?
ಸರ್ಕಾರದ ಈ ನಡೆ ಕೇವಲ ಮಾಧ್ಯಮಗಳ ಮೇಲಿನ ನಿರ್ಬಂಧವಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿಯನ್ನು ಜನರಿಗೆ ತಲುಪದಂತೆ ಮಾಡುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧಾನಸೌಧದ ಆವರಣದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ನೀಡುವ ಹೇಳಿಕೆಗಳಿಗೆ ಬ್ರೇಕ್ ಹಾಕಲು ಈ ಹೊಸ ನಿಯಮವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುವ ಮೂಲಕ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ನೋಟೀಸ್‌ನಲ್ಲಿ ಏನಿದೆ? ಸುರಕ್ಷತೆಯೋ, ನಿಯಂತ್ರಣವೋ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳು ನೀಡಿರುವ ಸೂಚನೆಯ ಪ್ರಕಾರ, ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಥವಾ ಸಚಿವರುಗಳು ವಿಧಾನಸೌಧ ಪ್ರವೇಶಿಸುವಾಗ ಅವರ ಹಿಂದೆ ಹೋಗಬಾರದು. ವಾರ್ತಾ ಇಲಾಖೆಯಿಂದ ಗುರುತಿನ ಚೀಟಿ ಪಡೆದ ಪತ್ರಕರ್ತರು ಕೇವಲ ನಿಗದಿಪಡಿಸಿದ ಜಾಗದಲ್ಲೇ ಇರಬೇಕು. ಒಂದು ವೇಳೆ ಈ ಸೂಚನೆ ಮೀರಿದರೆ ಅದನ್ನು ಭದ್ರತಾ ಲೋಪವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಆದರೆ, ಪದೇ ಪದೇ ವಿಧಾನಸೌಧದಲ್ಲಿ ನಡೆಯುತ್ತಿರುವ ನೈಜ ಭದ್ರತಾ ಲೋಪಗಳನ್ನು ಸರಿಪಡಿಸುವ ಬದಲು ಮಾಧ್ಯಮಗಳನ್ನೇ ಗುರಿ ಮಾಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.



