ಅಧಿಕಾರ ಹಂಚಿಕೆಯ ಬಗ್ಗೆ ಯಾರೂ ಮಾತಾಡುವಂತಿಲ್ಲ: ಡಿಕೆಶಿ ಸೂಚನೆ
ಅಧಿಕಾರ ಹಂಚಿಕೆಯ ಬಗ್ಗೆ ಮಾತಾಡುವಂತಿಲ್ಲ ಎರಡೂವರೆ ವರ್ಷಗಳ ಬಳಿಕ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ನೀಡಿದ್ದ ಹೇಳಿಕೆ ಸಂಚಲನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಈ ಸೂಚನೆ ನೀಡಿದರು.

ಬೆಂಗಳೂರು (ಅ.22) : ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆಯಾಗುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಪಕ್ಷದಲ್ಲಿ ಆಂತರಿಕವಾಗಿ ಕೆಲವು ವಿಚಾರಗಳು ಚರ್ಚೆ ಆಗಿರುತ್ತವೆ. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ತಮಗೆ ಇರುವ ಮಾಹಿತಿ ಪ್ರಕಾರ ಆ ರೀತಿ ಚರ್ಚೆ ನಡೆದಿಲ್ಲ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಧಿಕಾರ ಹಂಚಿಕೆ ಸೇರಿದಂತೆ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಶಾಸಕರು ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ.
ಎರಡೂವರೆ ವರ್ಷಗಳ ಬಳಿಕ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ನೀಡಿದ್ದ ಹೇಳಿಕೆ ಸಂಚಲನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಈ ಸೂಚನೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಆಪ್ತನ ತೆಲಂಗಾಣ ಮನೆ ಮೇಲೆ ಐಟಿ ದಾಳಿ: ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯದಿಂದಲೂ ಶಾಕ್
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳು ಏನೇ ಇದ್ದರೂ ಶಾಸಕರು ಮುಖ್ಯಮಂತ್ರಿಗಳು ಹಾಗೂ ತಮ್ಮ ಬಳಿ ಮಾತನಾಡಬಹುದು. ಆದರೆ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದರು.
ನನ್ನಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ನಾನು ಎಂದೂ ಹೇಳಿಲ್ಲ. ಇಂದೂ ಹೇಳಿಲ್ಲ. ಮುಂದೆಯೂ ಹೇಳುವುದಿಲ್ಲ. ಮುಖ್ಯಮಂತ್ರಿ ಮತ್ತು ನಾನು ಸೇರಿ 136 ಜನರಿದ್ದು, ನಾವೆಲ್ಲರೂ ಒಂದೇ ಆಗಿದ್ದೇವೆ. ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿದಂತೆ ಅನೇಕ ಜನರ ಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಡಿಕೆಶಿ ಒಬ್ಬರೇ ಕಾರಣರಲ್ಲ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಕಮಿಷನ್‌ಗಾಗಿ ರಾಜ್ಯ ಸರ್ಕಾರ ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಆ ರೀತಿ ಅನುಮಾನ ಇದ್ದರೆ ತನಿಖೆ ನಡೆಸಲಿ. ಅವರ ಮಾತುಗಳಿಗೆ ಸೊಪ್ಪು ಹಾಕುವುದಿಲ್ಲ’ ಎಂದರು.
‘ಪ್ರತಿ ವರ್ಷ ಶೇ.5ರಿಂದ ಶೇ.10ರಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಳ್ಳಬೇಕು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಳ ಮಾಡಲಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕಾವೇರಿಗಾಗಿ ಈಗ ಡ್ರಾಮಾ ಮಾಡುತ್ತಿದ್ದಾರೆ. ಕಾಳಜಿ ಇದ್ದರೆ ಕೇಂದ್ರದ ಬಳಿಗೆ ಹೋಗಿ ಮನವಿ ಮಾಡಲಿ. ರಾಜ್ಯದ 192 ತಾಲೂಕುಗಳಲ್ಲಿ ಬರ ಇದೆ. ನಾವು ಮಳೆ ಬಾರದಂತೆ ತಡೆಯಲು ಆಗುತ್ತದೆಯೇ?’ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕಲೆಕ್ಷನ್‌ನಲ್ಲೂ ಸಿದ್ದು, ಡಿಕೆಶಿ ನಡುವೆ ತೀವ್ರ ಸ್ಪರ್ಧೆ: ಸದಾನಂದಗೌಡ
ಪ್ರೋತ್ಸಾಹ ನೀಡಲು ಕ್ರಿಕೆಟ್ ಪಂದ್ಯ ವೀಕ್ಷಣೆ:
ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಹೋಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕ್ರೀಡೆಗೆ ಪ್ರೋತ್ಸಾಹ ನೀಡುವುದು, ಬರ ನಿರ್ವಹಿಸುವುದು, ಸಮಾಜ ಸೇವೆ ಮಾಡುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಆದರೆ, ಅವರಿಗೆ ಕ್ರೀಡೆಯ ರುಚಿಯೇ ಇಲ್ಲ. ಕ್ರೀಡೆಗೆ ಪ್ರೋತ್ಸಾಹ ನೀಡಲೆಂದು ಕ್ರಿಕೆಟ್ ನೋಡಲು ಹೋಗಿದ್ದಾಗಿ ಹೇಳಿದರು.
‘ಹೆಚ್ಚು ಶಕ್ತಿಶಾಲಿಯಾಗಿದ್ದರೆ, ಹೆಚ್ಚು ಶತ್ರುಗಳು. ಕಡಿಮೆ ಶಕ್ತಿಶಾಲಿಯಾಗಿದ್ದರೆ ಕಡಿಮೆ ಶತ್ರುಗಳು. ಶಕ್ತಿಯೇ ಇಲ್ಲದಿದ್ದರೆ ಶತ್ರುಗಳೇ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಜೆಡಿಎಸ್‌ನವರು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.