ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಟ್ಟಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.  

ವಿಜಯಪುರ (ಫೆ.27): ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಟ್ಟಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನೀರನ್ನು ಮಾನವೀಯತೆಯ ದೃಷ್ಟಿಯಿಂದ ಬಿಡಲಾಗಿದೆಯೋ? ಅಥವಾ ನೀರನ್ನು ಬಿಡಲೇ ಬೇಕಿತ್ತಾ ಎಂಬ ಬಗ್ಗೆ ಮಾಹಿತಿ ಇಲ್ಲ. ನಮ್ಮ‌ಲ್ಲಿ ಸಾಕಷ್ಟು ನೀರು ಇದೆ, ನಮಗೆ ಬೇಸಿಗೆ ಕಳೆಯಲು ಯಾವುದೇ ತೊಂದರೆಯಿಲ್ಲ. ಒಂದು ವೇಳೆ ನೀರು ಕಡಿಮೆ ಬಿದ್ದರೆ ಡೆಡ್ ಸ್ಟೋರೇಜ್‌ನಿಂದ ಕೂಡ ನೀರು ತಗೆಯಬಹುದಾಗಿದೆ. ಅಧಿಕಾರಿಗಳು ನೀರು ಬಿಟ್ಟಿದ್ದಾರೆ ಎಂದರೆ ಎಲ್ಲವನ್ನೂ ಆಲೋಚಿಸಿಯೇ ಬಿಟ್ಟಿರುತ್ತಾರೆ ಎಂದು ಹೇಳಿದ್ದಾರೆ.

ಕೈ ಗ್ಯಾರಂಟಿ ನಕಲು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಕಲು ಮಾಡಿದ್ದಾರೆ. ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರೆ. ಬಿಜೆಪಿ ಹಾಗೂ ಮೋದಿ ಘೋಷಿಸಿದರೆ ನಡೆಯುತ್ತದೆ. ಕಾಂಗ್ರೆಸ್‌ನ ಯೋಜನೆ ಏಕೆ ನಡೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೇಳಿ, ಮೋದಿ ಹಾಗೂ ಬಿಜೆಪಿಯವರು ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರೆ. ಬಿಜೆಪಿ ಹಾಗೂ ಮೋದಿ ಘೋಷಿಸಿದರೆ ನಡೆಯುತ್ತದೆ. 

ಕಾಂಗ್ರೆಸ್‌ನ ಯೋಜನೆ ಏಕೆ ನಡೆಯಬಾರದು? ಅದು ಬಡವರಿಗೆ, ಮಹಿಳೆಯರಿಗೆ ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಅವು ಮುಂದುವರಿಯಲಿದ್ದು, ಅಭಿವೃದ್ಧಿ ಕೂಡ ಆಗಲಿದೆ ಎಂದು ಸಚಿವೆ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದರು. ಗೃಹ ಲಕ್ಷ್ಮಿ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು. ಬಡವರಿಗೆ ಹೋಗಬೇಕು. ಶ್ರೀಮಂತರು ಸ್ವಯಂ ಪ್ರೇರಿತವಾಗಿ ಯೋಜನೆ ಬಿಟ್ಟು ಕೊಡಬೇಕು. ಇಲ್ಲವೇ ಸರ್ಕಾರವೇ ಅಂಥವರನ್ನು ತೆಗೆದು ಹಾಕಬೇಕು ಎಂದರು.

ಗುಂಟಾ ಪ್ಲಾಟ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್‌: ಸಚಿವ ಎಂ.ಬಿ.ಪಾಟೀಲ್

ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಹಣ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಗುತ್ತಿಗೆದಾರರ ಸಮಸ್ಯೆಗೆ ಯಾರು ಕಾರಣ? ಈ ಹಿಂದಿನ ಬಿಜೆಪಿ ಸರ್ಕಾರ ಅನಧಿಕೃತವಾಗಿ ಗುತ್ತಿಗೆ ನೀಡಿದೆ. ಬಜೆಟ್ ಇಲ್ಲದೆ ಟೆಂಡರ್ ಕರೆದು ಕಮೀಷನ್ ಹೊಡೆದು ಹೋಗಿದ್ದಾರೆ. ಅವರ ಪಾಪದ ಕೊಡವನ್ನು ನಾವು ಹೊರುತ್ತಿದ್ದೇವೆ ಎಂದು ಕಿಡಿಕಾರಿದರು. ಹಿಂದಿನ ಬಿಜೆಪಿ ಸರ್ಕಾರದ ಅವಾಂತರಗಳು ಒಂದೆರಡಲ್ಲ. ನೂರು ರೂಪಾಯಿ ಅನುದಾನ ಇದ್ದರೆ ಸಾವಿರ ರೂಪಾಯಿಯಷ್ಟು ಟೆಂಡರ್ ಕೊಟ್ಟಿದ್ದಾರೆ. ಬಜೆಟ್‌ಗಿಂತ ಹೆಚ್ಚಿನ ಕಾಮಗಾರಿ ಕೊಟ್ಟಿದ್ದಾರೆ. ಸಚಿವ ಸಂಪುಟದ ಅನುಮೋದನೆ ಪಡೆಯದೇ ಟೆಂಡರ್ ನೀಡಿದ್ದು ಯಾರ ತಪ್ಪು? ಅಷ್ಟೇ ಏಕೆ ವೈದ್ಯಕೀಯ ಇಲಾಖೆಯಲ್ಲಿಯೂ ಇಂಥದ್ದೇ ಹಗರಣ ಆಗಿದೆ. ಅದೆಲ್ಲದರ ತನಿಖೆಯಾಗುತ್ತಿದೆ ಎಂದು ಹೇಳಿದರು.