ಕರ್ಜಗಿ, ಗುರೂಜಿಗೆ ಅವಮಾನ ಮಾಡಬೇಡಿ: ಖಾದರ್‌ಗೆ ಕೋಟ ಸಲಹೆ
ರಾಜ್ಯದ ನೂತನ ಶಾಸಕರಿಗೆ ಸೋಮವಾರದಿಂದ ಆರಂಭವಾಗುವ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿದ್ದ ಶ್ರೀ ರವಿಶಂಕರ ಗುರೂಜಿ ಮತ್ತು ಗುರುರಾಜ್ ಕರ್ಜಗಿ ಅವರನ್ನು ಕೈಬಿಟ್ಟಿರುವುದಕ್ಕೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ (ಜೂ.25) ರಾಜ್ಯದ ನೂತನ ಶಾಸಕರಿಗೆ ಸೋಮವಾರದಿಂದ ಆರಂಭವಾಗುವ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿದ್ದ ಶ್ರೀ ರವಿಶಂಕರ ಗುರೂಜಿ ಮತ್ತು ಗುರುರಾಜ್ ಕರ್ಜಗಿ ಅವರನ್ನು ಕೈಬಿಟ್ಟಿರುವುದಕ್ಕೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದ್ದೋ ಒತ್ತಡ ಉಂಟು, ಆದ್ದರಿಂದ ಅವರಿಬ್ಬರನ್ನು ಕರೆಯೋದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳುತ್ತಿದ್ದಾರೆ. ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿದ್ದರಿಂದ ಕರೆಯುತಿದ್ದೇವೆ, ಇಲ್ಲದಿದ್ದರೆ ಕರೆಯುತ್ತಿರಲಿಲ್ಲ ಎಂದವರು ಹೇಳಿದ್ದಾರೆ. ಯಾವ ಆಧಾರದಲ್ಲಿ ಕೈ ಬಿಟ್ಟಿದ್ದೀರಿ? ಕೈ ಬಿಡಲು ಮಾನದಂಡ ಏನು? ಎಂದು ಖಾದರ್ ಸ್ಪಷ್ಟಪಡಿಸಬೇಕು ಎಂದವರು ಆಗ್ರಹಿಸಿದರು.
ಶಾಸಕರಿಗೆ ಶ್ರೀ ರವಿಶಂಕರ ಗುರೂಜಿ, ಹೆಗ್ಗಡೆ ಪಾಠಕ್ಕೆ ಎಸ್.ಡಿ.ಪಿ.ಐ. ವಿರೋಧ
ಸ್ಪೀಕರ್ ಎಲ್ಲ ಧರ್ಮ, ಎಲ್ಲ ಪಕ್ಷಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು, ರವಿಶಂಕರ್ ಗುರೂಜಿ ಮತ್ತು ಕರ್ಜಗಿ ಅವರ ಹೆಸರನ್ನು ಕೈಬಿಟ್ಟು ಅವರಿಗೆ ಅವಮಾನ ಮಾಡಬೇಡಿ, ಪುನರ್ ಪರಿಶೀಲನೆ ಮಾಡಿ ಎಂದವರು ಸಲಹೆ ಮಾಡಿದ್ದಾರೆ. ಪ್ರಗತಿಪರರು ಏನು ಹೇಳಿದರೂ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಎಡಪಂಥೀಯರು ಹೇಳಿದರು ಅಂತ ಪಠ್ಯಪುಸ್ತಕ ಪರಿಷ್ಕರಣೆ, ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ವಾಪಾಸ್ ತೆಗೆದುಕೊಳ್ಳುತ್ತಿದ್ದೀರಿ, ಇದು ಸರಿಯಲ್ಲ ಎಂದು ಕೋಟ ಹೇಳಿದರು.
ಕೇಂದ್ರದ ಮೇಲೆ ಆರೋಪ ಬೇಡ: ಚುನಾವಣೆಗೆ ಮೊದಲು ನೀಡಿದ ಗ್ಯಾರಂಟಿಯಂತೆ 10 ಕೆಜಿ ಅಕ್ಕಿ ಕೊಡುವ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಲೋಪವಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ದೇಶದ 80 ಕೋಟಿ ಜನಕ್ಕೆ ಉಚಿತ ಅಕ್ಕಿ ಕೋಡುತ್ತಿದೆ. ಕರ್ನಾಟಕದ 4 ಕೋಟಿ ಜನರು ಪಡೆಯುತ್ತಿರುವ 5 ಕೆಜಿ ಉಚಿತ ಅಕ್ಕಿ ಸಂಪೂರ್ಣವಾಗಿ ಮೋದಿ ಸರ್ಕಾರದ್ದು. ಆದ್ದರಿಂದ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಅಪಾದನೆ ಮಾಡಬೇಡಿ ಎಂದರು.
ಅಕ್ಕಿ ಖರೀದಿಸಿ ತಂದಾದ್ರೂ ಕೊಡಿ: ಕಾಂಗ್ರೆಸ್ ಘೋಷಣೆ ಮಾಡಿದ 10 ಕೆ.ಜಿ ಅಕ್ಕಿಯನ್ನು ಸದನ ಆರಂಭವಾಗುವ ಮೊದಲು ಕೊಡಿ, ಕೇಂದ್ರ ಕೊಟ್ಟರೆ ನಾವು ಕೊಡುತ್ತೇವೆ ಅಂತ ಆರಂಭದಲ್ಲಿ ನೀವು ಹೇಳಿಲ್ಲ, ನಿಮ್ಮ ಬಳಿ ಹಣ ಇದೆ ಅಂತೀರಿ, ಎಲ್ಲಿಂದ ಬೇಕಾದರೂ ಖರೀದಿಸಿ ತಂದು ಕೊಡಿ. ಇಲ್ಲದಿದ್ದಲ್ಲಿ ಸದನದ ಒಳಗೆ ಹೊರಗೆ ಸಾರ್ವತ್ರಿಕವಾಗಿ ಸತ್ಯವನ್ನು ನಾವು ಜನಕ್ಕೆ ತಿಳಿಸುತ್ತೇವೆ ಎಂದವರು ಎಚ್ಚರಿಕೆ ನೀಡಿದರು.
ಕೇಂದ್ರ ಅಕ್ಕಿ ನೀಡುತ್ತಿದೆ ಎಂದು ಸತ್ಯ ಹೇಳಿ ಸಿದ್ದರಾಮಯ್ಯನವರೇ: ಕೋಟ
ಕ್ರಿಯಾಶೀಲ ಅಧ್ಯಕ್ಷರನ್ನು ಆಯ್ಕೆ ಮಾಡ್ತೇವೆ
ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ, ಅವರ ಅವಧಿ ಮೀರಿದೆ, ಪಕ್ಷದ ವರಿಷ್ಠರಿಗೆ ನನ್ನ ಅವಧಿ ಮುಗಿದಿದೆ ಎಂದು ತಿಳಿಸುವ ಸಂಪ್ರದಾಯ ಇದೆ. ಅದರಂತೆ ತಿಳಿಸಿದ್ದಾರೆ. ಬೇರೆಯವರು ಬಿಜೆಪಿ ಅಧ್ಯಕ್ಷ ನಾನಾಗಬೇಕು ಎಂದು ಆಸೆ ಪಟ್ಟರೆ ತಪ್ಪಲ್ಲ, ರಾಜ್ಯ, ಕೇಂದ್ರದ ನಾಯಕರು ಸೇರಿ ಕ್ರಿಯಾಶೀಲ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೆವೆ ಎಂದು ಪ್ರಶ್ನೆಯೊಂದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು.