ಬೆಂಗಳೂರು(ಆ.16): ‘ಕೊರೋನಾ ಸೋಂಕಿತರು ಆತಂಕ ಅಥವಾ ಭಯಭೀತರಾಗುವ ಅಗತ್ಯವಿಲ್ಲ. ಜಾಗರೂಕತೆಯಿಂದ ಸಾಮಾಜಿಕ ಅಂತರ, ಸ್ಯಾನಿಟೈಸರ್‌ ಬಳಕೆ ಮತ್ತು ಮಾಸ್ಕ್‌ ಧರಿಸಿದರೆ ಕೊರೋನಾ ಗೆಲ್ಲಬಹುದಾಗಿದೆ. ಸ್ವತಃ ನಾನೇ ಸೋಂಕಿತನಾಗಿ ಗುಣಮುಖನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಂಕಿತರಿಗೆ ಧೈರ್ಯ ತುಂಬಿದರು.

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣೆ ನೆರವೇರಿಸಿದ ಬಳಿಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಲಾಕ್‌ಡೌನ್‌ ಸಮಯದಲ್ಲಿ ಮಂದಗತಿಯಲ್ಲಿದ್ದ ಜನಜೀವನ ಚೇತರಿಕೆಯತ್ತ ಸಾಗುತ್ತಿದೆ. ಆದ್ದರಿಂದ ಎಲ್ಲವನ್ನು ಧೈರ್ಯವಾಗಿ ಎದುರಿಸಿ ಎಂದು ಸಲಹೆ ನೀಡಿದರು.

ಕೊರೋನಾ ಕಾಟ: ಕಂಟೈನ್ಮೆಂಟ್‌ ಕೈಬಿಡಲು ಪ್ರಸ್ತಾವನೆ ...

‘ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ರಾಜಧರ್ಮ ಪಾಲನೆಗೆ ಮುಂದಾಗಿದ್ದೇವೆ. ಕೊರೋನಾ ಜಾಗತಿಕ ಪಿಡುಗಾಗಿದ್ದು, ಕೇವಲ ಆರೋಗ್ಯ ಕ್ಷೇತ್ರವನ್ನು ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರವನ್ನು ಬಾಧಿಸುತ್ತಿದೆ. ಸ್ವತಃ ನಾನು ಕೂಡ ಕೊರೋನಾ ಸೋಂತಿಗೆ ಒಳಗಾಗಿ ಗುಣಮುಖನಾಗಿದ್ದೇನೆ. ಆದ್ದರಿಂದ ಜನರು ಸೋಂಕಿನ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ’ ಎಂದರು.

‘ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸಚಿವರ ಕಾರ್ಯಪಡೆ, ಪರಿಣಿತ ವೈದ್ಯರ ಕಾರ್ಯಪಡೆ ಮತ್ತು ಅಧಿಕಾರಿಗಳ ಕಾರ್ಯಪಡೆಯನ್ನು ರಚಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲ, ಜಿಲ್ಲಾ ಕೇಂದ್ರಗಳಲ್ಲಿಯೂ ಕೊರೋನಾ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಗಳು, ಫೀವರ್‌ ಕ್ಲಿನಿಕ್‌ಗಳು ಮತ್ತು ಕೊರೋನಾ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಂಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ..!

‘ಆಯುಷ್ಮಾನ್‌ ಭಾರತ ಯೋಜನೆಯಡಿ 1.31 ಕೋಟಿಗೂ ಹೆಚ್ಚಿನ ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. 1,694 ಕೋಟಿ ರು. ವೆಚ್ಚದಲ್ಲಿ ಈ ವರೆಗೆ 8.5 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

‘ಕೊರೋನಾ ಆರಂಭಿಕ ಹಂತದಲ್ಲಿ ಸೋಂಕು ತಡೆಗಟ್ಟುವುದಕ್ಕಾಗಿ ಅನಿವಾರ್ಯವಾಗಿ ಲಾಕ್‌ಡೌನ್‌ ಘೋಷಿಸಲಾಯಿತು. ಇದರಿಂದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಕ್ಷೀಣಗೊಂಡವು. ಆದರೆ, ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ ಎಂಬುದನ್ನು ತಿಳಿದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಮಾಸ್ಕ್‌ ಧರಿಸುವಿಕೆ, ಸೋಪಿನಿಂದ ಕೈ ತೊಳೆದುಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.