ಕೊರೋನಾ ಕಾಟ: ಕಂಟೈನ್ಮೆಂಟ್ ಕೈಬಿಡಲು ಪ್ರಸ್ತಾವನೆ
ಪಾಲಿಕೆಯಿಂದ ಸರ್ಕಾರಕ್ಕೆ ಮನವಿ| 2 ದಿನದಲ್ಲಿ ಅಧಿಕೃತ ಆದೇಶ ನಿರೀಕ್ಷೆ| ಹಿಂದಿನ ಪದ್ಧತಿಯಿಂದ ಸೋಂಕಿತರಿಗೆ ಮುಜಗರ ಹಿನ್ನೆಲೆ, ಹೊಸ ಕ್ರಮ| ತಗಡಿನ ಶೀಟುಗಳು, ಮರದ ಪಟ್ಟಿ ಬಳಸಿ ಕಂಟೈನ್ಮೆಂಟ್ ಮಾಡುವುದಕ್ಕೆ ಬ್ರೇಕ್| ಸೋಂಕಿತರ ಮನೆಗೆ ಎಚ್ಚರಿಕೆ ಪತ್ರ ಅಂಟಿಸಿ, ಜಾಗೃತಿ ಮೂಡಿಸಲು ನಿರ್ಧಾರ|
ಬೆಂಗಳೂರು(ಆ.15): ನಗರದಲ್ಲಿ ಕಂಟೈನ್ಮೆಂಟ್ ಪದ್ಧತಿ ಕೈ ಬಿಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯೊಂದಿಗೂ ಚರ್ಚಿಸಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದರು.
ವೈದ್ಯರು ಕೊರೋನಾ ಚಿಕಿತ್ಸೆಗೆ ನಿರಾಕರಿಸಿದರೆ ಈ ನಂಬರ್‌ಗೆ ಕರೆ ಮಾಡಿ ಹೇಳಿ
ತಗಡಿನ ಶೀಟುಗಳು, ಮರದ ಪಟ್ಟಿಗಳನ್ನು ಬಳಸಿ ರಸ್ತೆಗಳನ್ನು ಕಂಟೈನ್ಮೆಂಟ್ ಮಾಡುವುದರಿಂದ ಸೋಂಕು ದೃಢಪಟ್ಟವರು ಮುಂಜುಗರಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಕಂಟೈನ್ಮೆಂಟ್ ಪದ್ಧತಿ ಕೈಬಿಡಲು ನಿರ್ಧರಿಸಲಾಗಿದೆ. ಇದರ ಬದಲು ಸೋಂಕಿತರ ಮನೆಗೆ ಎಚ್ಚರಿಕೆಯ ಪತ್ರ ಅಂಟಿಸಿ, ಅವರ ಸುತ್ತಮುತ್ತಲ ಮನೆಗಳಿಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಇದರ ನಡುವೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುವ ಪ್ರದೇಶಗಳಲ್ಲಿ (ಕ್ಲಸ್ಟರ್) ಮಾತ್ರ ಕಂಟೈನ್ಮೆಂಟ್ ಮಾಡುವಂತೆ ಮೇಯರ್ ಗೌತಮ್ ಕುಮಾರ್ ಸಲಹೆ ನೀಡಿದ್ದಾರೆ. ಹೀಗಾಗಿ ಈ ಸಲಹೆಯನ್ನೂ ರಾಜ್ಯ ಸರ್ಕಾರಕ್ಕೆ ಗಮನಕ್ಕೆ ತರಲಾಗಿದೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.