ಕೋವಿಡ್ ವ್ಯಾಕ್ಸಿನ್ ಪಡೆದ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲವಾಗಿರುವುದರಿಂದ ಈ ಸಮಸ್ಯೆ ಮತ್ತಷ್ಟುಬಿಗಡಾಯಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಪಡೆಯುವ ಮುನ್ನವೇ ದಾನಿಗಳು ರಕ್ತದಾನ ಮಾಡುವಂತೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮನವಿ ಮಾಡಿದೆ.
ವರದಿ : ಸೋಮರಡ್ಡಿ ಅಳವಂಡಿ
ಕೊಪ್ಪಳ (ಏ.27): ಕೋವಿಡ್ ಸಂಕಷ್ಟದಿಂದಾಗಿ ರಾಜ್ಯಾದ್ಯಂತ ದಿನೇದಿನೇ ರಕ್ತದ ಅಭಾವ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಇದೀಗ ಕೋವಿಡ್ ವ್ಯಾಕ್ಸಿನ್ ಪಡೆದ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲವಾಗಿರುವುದರಿಂದ ಈ ಸಮಸ್ಯೆ ಮತ್ತಷ್ಟುಬಿಗಡಾಯಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಪಡೆಯುವ ಮುನ್ನವೇ ದಾನಿಗಳು ರಕ್ತದಾನ ಮಾಡುವಂತೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮನವಿ ಮಾಡಿದೆ. ಮಾತ್ರವಲ್ಲದೆ ದಾನಿಗಳು ಇದ್ದಲ್ಲಿಗೇ ತೆರಳಿ ರಕ್ತ ಸಂಗ್ರಹಿಸುವುದಾಗಿ ತಿಳಿಸಿದೆ.
ಶೇ.20ರಷ್ಟುಲಭ್ಯತೆ: ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ರಕ್ತದ ಅಭಾವ ಇದ್ದು ರಕ್ತದ ಕೊರತೆಯಿಂದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿಯೂ ರಕ್ತದ ಸಮಸ್ಯೆಯಾದರೆ ಜೀವಗಳೇ ಬಲಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 55-60 ಸಾವಿರ ಯುನಿಟ್ ಬೇಕಾಗುತ್ತದೆ. ಆದರೆ, ಸದ್ಯ ಇದರ ಶೇ. 25-30ರಷ್ಟುರಕ್ತದ ಲಭ್ಯತೆ ಇಲ್ಲ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬೆಂಗಳೂರಿನಲ್ಲಿರುವ ರಕ್ತಭಂಡಾರದಲ್ಲಿ ತಿಂಗಳಿಗೆ 3 ಸಾವಿರ ಯುನಿಟ್ ಬದಲು 650 ಯುನಿಟ್ ಸಂಗ್ರಹವಾಗುತ್ತಿದೆ. ಕೆಲವೆಡೆ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಹರು ರಕ್ತದಾನ ಮಾಡಿಯೇ ಆನಂತರ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯಾದ್ಯಂತ ಮನವಿ ಮಾಡುತ್ತಿದೆ.
ಕೋವಿಡ್ ಸಮಸ್ಯೆಯೇ - ಆತಂಕ ಬೇಡ : ಆಸ್ಪತ್ರೆಗಳನ್ನು ಇಲ್ಲಿ ಸಂಪರ್ಕಿಸಿ ...
ನೀವಿರುವಲ್ಲೇ ರಕ್ತ ಸಂಗ್ರಹ
ರಕ್ತದಾನ ಮಾಡುವವರು ರಕ್ತದಾನ ಶಿಬಿರವನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಗುಂಪು ಸೇರುವುದಕ್ಕೆ ಅವಕಾಶ ಇಲ್ಲವಾದ್ದರಿಂದ ಈಗ ರಕ್ತದಾನಿಗಳ ಬಳಿಗೆ ಹೋಗಿ ರಕ್ತ ಸಂಗ್ರಹಿಸಲು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬೆಂಗಳೂರು ಘಟಕ ನಿರ್ಧರಿಸಿದೆ. ಕನಿಷ್ಠ 15-20 ಜನರು ಇದ್ದರೂ ಅಲ್ಲಿಗೆ ಹೋಗಿ, ರಕ್ತ ಪಡೆದುಕೊಂಡು ಬರಲಾಗುತ್ತದೆ.
