ಬೆಂಗಳೂರು (ಡಿ.13):  ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವಕ್ಕೆ ಹಿರಿಯ ಕವಿ ಡಾ.ದೊಡ್ಡರಂಗೇಗೌಡ, ಗೊ.ರು.ಚನ್ನಬಸಪ್ಪ ಸೇರಿದಂತೆ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ. 

ಶನಿವಾರ ಈ ವಿಷಯ ತಿಳಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್‌, ‘ಧಾರವಾಡದ ಹಿರಿಯ ಕಥೆಗಾರ್ತಿ ಡಾ.ವೀಣಾ ಶಾಂತೇಶ್ವರ, ಜಾನಪದ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ, ಹಿರಿಯ ಸಂಶೋಧಕ ಡಾ.ಹಂಪ ನಾಗರಾಜಯ್ಯ, ಹಿರಿಯ ಕವಿ ಡಾ.ದೊಡ್ಡರಂಗೇಗೌಡ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಗೌರವ ಸದಸ್ಯತ್ವ ಪಡೆದವರಿಗೆ ತಲಾ ಒಂದು ಲಕ್ಷ ರು.ಗೌರವ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

'ಬೆಂಗಳೂರಿನಲ್ಲಿ ಕನ್ನಡ ಹುಡುಕುವ ದಯನೀಯ ಸ್ಥಿತಿ' .

ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ (2001), ಡಾ.ಕೈಯ್ಯಾರ ಕಿಞ್ಞಣ್ಣ ರೈ (2009), ಡಾ.ಎಂ.ಅಕಬರ ಅಲಿ(2011), ಚಂದ್ರಕಾಂತ ಕುಸನೂರು (2011) ಮತ್ತು ಡಾ.ಎಚ್‌.ಜೆ.ಲಕ್ಕಪ್ಪಗೌಡ (2011) ಅವರು ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪಡೆದಿದ್ದರು. ಇದೀಗ ಲಕ್ಕಪ್ಪಗೌಡ ಅವರನ್ನು ಹೊರತು ಪಡಿಸಿ ನಾಲ್ವರು ಗಣ್ಯರು ನಿಧನರಾಗಿದ್ದು, ಅವರಿಂದ ತೆರವಾದ ಗೌರವ ಸದಸ್ಯತ್ವದ ಸ್ಥಾನಕ್ಕೆ ಈ ಐವರನ್ನು ಆಯ್ಕೆ ಮಾಡಲಾಗಿದೆ. ಈ ಸದಸ್ಯತ್ವ ಪಡೆದವರು ಜೀವದಿಂದಿರುವವರೆಗೂ ಸದಸ್ಯತ್ವ ಹೊಂದಿರಲಿದ್ದಾರೆ. ಇದಕ್ಕೂ ಮುನ್ನ ರಾಷ್ಟ್ರಕವಿ ಕುವೆಂಪು (ಡಾ.ಕೆ.ವಿ.ಪುಟ್ಟಪ್ಪ), ಕೆ.ಎಸ್‌.ನಿರಂಜನ, ಡಾ.ಕೆ.ಎಸ್‌.ನರಸಿಂಹಸ್ವಾಮಿ ಸೇರಿದಂತೆ (1985ರಿಂದ 2011ರವರೆಗೆ )19 ಮಂದಿಗೆ ಗೌರವ ಸದಸ್ಯತ್ವ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ರಾಜಕುಮಾರ್‌, ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌, ದಂಡಾವತಿ ಉಪಸ್ಥಿತರಿದ್ದರು.

ಮರಾಠಿ ಭಾಷೆ ನಿಗಮ ರಚನೆ ಆದರೆ ವಿರೋಧ: ಬಳಿಗಾರ್‌

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮವನ್ನು ಮರಾಠ ಜನಾಂಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸ್ಥಾಪನೆ ಮಾಡಿದೆ. ಒಂದು ವೇಳೆ ಮರಾಠಿ ಭಾಷೆಗೆ ಅಭಿವೃದ್ಧಿ ನಿಗಮ ರಚಿಸಿದ್ದರೆ ಅದನ್ನು ಪರಿಷತ್ತು ವಿರೋಧಿಸುತ್ತದೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಹೇಳಿದರು.

‘ರಾಜ್ಯದಲ್ಲಿ ಮನೆ ಭಾಷೆ ಮರಾಠಿ ಇದ್ದು, ಕನ್ನಡ ಮಾತನಾಡುವವರು ಬಹಳಷ್ಟುಜನರಿದ್ದಾರೆ. ಹಾಗೆಯೇ ಮರಾಠಿ ಜನ ಕನ್ನಡ ರಾಜ್ಯೋತ್ಸವದ ದಿನವನ್ನು ಕರಾಳ ದಿನವಾಗಿ ಆಚರಿಸುವುದು ಸರಿಯಲ್ಲ. ಇಂತಹ ಮನೋಭಾವ ಬಿಡಬೇಕು. ರಾಜ್ಯ ಸರ್ಕಾರ ನಿಗಮದ ಬಗ್ಗೆ ಕಾರ್ಯಸೂಚಿ ಮಾಡುವಾಗ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

ಸೋಂಕು ಕಡಿಮೆಯಾದರೆ ಹಾವೇರಿ ಸಮ್ಮೇಳನ

ಬೆಂಗಳೂರು: ಫೆಬ್ರವರಿ 26ರಿಂದ ಮೂರು ದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಹಾಗೆಯೇ ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಳು ಸಡಿಲಿಕೆಯಾದರೆ ಸಮ್ಮೇಳನ ಮಾಡಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ

ಮನು ಬಳಿಗಾರ ಹೇಳಿದರು. ‘ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದು, ಅನುಮತಿ ಕೋರಲಾಗಿದೆ. ಹಾಗೆಯೇ ಸಮ್ಮೇಳನ ಆಯೋಜನೆಗೆ ಖರ್ಚಿಲ್ಲದ ಕಾರ್ಯಗಳ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.