ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಮೇ.31): ಮಾರಕ ಕಪ್ಪು ಶಿಲೀಂಧ್ರ ರೋಗ ಒಮ್ಮೆ ಗುಣವಾದರೂ ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಕಪ್ಪು ಶಿಲೀಂಧ್ರ ರೋಗದ ಔಷಧಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು, ವೈದ್ಯರು ಸೂಚಿಸಿದ ಪರೀಕ್ಷೆಗಳಿಗೆ ಒಳಗಾಗುವುದು ಕಡ್ಡಾಯ ಎಂದು ವೈದ್ಯರು ಹೇಳುತ್ತಾರೆ.

ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಧನ್‌ಪಾಲ್‌, ರೋಗಿಗಳಿಗೆ ಚಿಕಿತ್ಸೆ ನೀಡಿ ಅವರನ್ನು ಮನೆಗೆ ಕಳುಹಿಸಿದ ಬಳಿಕವೂ ಮತ್ತೆ ಕಾಯಿಲೆ ಮರುಕಳಿಸುವ ಸಾಧ್ಯತೆ ಇದೆ. ಆದ್ದರಿಂದ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ಹೇಳುತ್ತಾರೆ.

ಮಲ್ಲೇಶ್ವರದ ಮಣಿಪಾಲ ಆಸ್ಪತ್ರೆಯ ಇಂಟರ್ನಲ್‌ ಮೆಡಿಸಿನ್‌ ವಿಭಾಗದ ಹಿರಿಯ ವೈದ್ಯ ಡಾ. ವಿ. ಶಂಕರ್‌ ಅವರು ಫಂಗಸ್‌ ಕಾಟ ಮರುಕಳಿಸುವ ಸಾಧ್ಯತೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ನಮ್ಮಲ್ಲಿ ಈ ರೀತಿ ಘಟನೆ ನಡೆದಿಲ್ಲ. ಆದರೆ ಔಷಧವನ್ನು ಸರಿಯಾಗಿ ತೆಗೆದುಕೊಂಡಿಲ್ಲದಿದ್ದರೆ, ಶಸ್ತ್ರಚಿಕಿತ್ಸೆ ಪರಿಪೂರ್ಣವಾಗಿಲ್ಲದಿದ್ದರೆ ಶಿಲೀಂಧ್ರ ಮರುಕಳಿಸುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ.

ಬ್ಲ್ಯಾಕ್‌ ಫಂಗಸ್‌ ಸಾವಿನ ಬಗ್ಗೆ ಆಡಿಟ್‌: ಸುಧಾಕರ್‌

ಸಾಮಾನ್ಯವಾಗಿ ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ಪಡೆಯುವ ರೋಗಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿರುತ್ತಾರೆ. ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ನೀಡುವುದು, ಡಯಾಬಿಟೀಸ್‌, ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವುದು ಈ ಚಿಕಿತ್ಸೆ ಮತ್ತು ಚಿಕಿತ್ಸೆಯ ನಂತರದ ಪ್ರಮುಖ ಭಾಗ ಆಗಿದೆ. ಆದರೆ ಸರ್ಕಾರ ಫಂಗಸ್‌ ರೋಗಿಗಳನ್ನು 14 ದಿನಗಳಲ್ಲಿ ಡಿಸ್‌ಚಾಜ್‌ರ್‍ ಮಾಡಬೇಕು ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಆರೋಗ್ಯದ ಮೇಲೆ ವೈದ್ಯರು ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಯ ನಿಗಾ ತಪ್ಪುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಮಾತ್ರೆ, ಔಷಧಗಳ ಕೊರತೆ: 

ಕಪ್ಪು ಶಿಲೀಂಧ್ರ ರೋಗಿಗೆ ಆಸ್ಪತ್ರೆಯಲ್ಲಿ ನೀಡುವ ಲಿಪೊಸೊಮಲ್‌ ಅಂಫೋಟೆರಿಸಿನ್‌ ಬಿ ಚುಚ್ಚುಮದ್ದಿನ ಕೊರತೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸೇವಿಸಬೇಕಾಗಿರುವ ಮಾತ್ರೆ, ಔಷಧದ ಕೊರತೆಯೂ ಇದೆ. ಸದ್ಯ ಬೆರಳೆಣಿಕೆಯ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಂದಿ ಬಿಡುಗಡೆಯಾಗುತ್ತಿದ್ದಂತೆ ಸಮಸ್ಯೆ ಉಲ್ಬಣವಾಗಬಹುದು. ಚೇತರಿಕೆಯ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಔಷಧಿಗಳ ಅಲಭ್ಯತೆ ರೋಗಿಯನ್ನು ಸಂಕಷ್ಟಕ್ಕೆ ದೂಡಲಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಔಷಧಿಗಳನ್ನು ಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ಕಪ್ಪು ಶಿಲೀಂಧ್ರ ರೋಗಕ್ಕೆ ರೂಪಾಂತರಿ ಕೊರೋನಾ ವೈರಾಣುವೇ ಕಾರಣ ಆಗಿದೆ. ಸೋಂಕು ಮಾನವ ದೇಹದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವಾಗ ದೇಹಕ್ಕೆ ಮಾಡುವ ಹಾನಿಯಿಂದ ಶಿಲೀಂಧ್ರ ಕಾಯಿಲೆಗಳು ಬರುತ್ತಿದೆ ಎಂದು ನನಗೆ ಅನಿಸುತ್ತದೆ. ಸಾಮಾನ್ಯವಾಗಿ ಕಪ್ಪು ಶಿಲೀಂಧ್ರ ರೋಗಕ್ಕೆ 6 ವಾರಗಳ ಚಿಕಿತ್ಸಾ ಅವಧಿ ಇರುತ್ತದೆ. ಈ ಸಂದರ್ಭದಲ್ಲಿ ಔಷಧಿ, ಚಿಕಿತ್ಸೆಗಳಲ್ಲಿ ವ್ಯತ್ಯಾಸ ಆಗಬಾರದು ಎಂದು ಡಾ.ವಿ. ಶಂಕರ್‌ ಹೇಳುತ್ತಾರೆ.