Asianet Suvarna News Asianet Suvarna News

ಸರ್ಕಾರಿ ವೈದ್ಯರ ‘ಅಸಹಕಾರ ಮುಷ್ಕರ’: ಸಾರ್ವಜನಿಕರೇ ಎಚ್ಚರ

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈದ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ತಮಮ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.

Doctors Strike Against Karnataka Govt Ram
Author
Bengaluru, First Published Sep 15, 2020, 7:27 AM IST

ಬೆಂಗಳೂರು (ಸೆ.15):  ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆ ವೈದ್ಯರು ಇಂದಿನಿಂದ (ಸೆ. 15, ಮಂಗಳವಾರ) ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿ, ಕೊರೋನಾ ಸೇರಿದಂತೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ಅಂಕಿ-ಅಂಶ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಅಸಹಕಾರ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಸೆ.20ರವರೆಗೆ ಕಾಲಾವಕಾಶ ನೀಡಿದ್ದು, ಸೂಕ್ತ ಭರವಸೆ ದೊರಕದಿದ್ದರೆ ಸೆ.21 ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿ ಸೇವೆ (ಒಪಿಡಿ) ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್‌ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯ ನಿರ್ಧಾರದಂತೆ ಸೋಮವಾರ ಎಲ್ಲಾ ಜಿಲ್ಲೆಗಳಲ್ಲೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೂ ಮನವಿ ಪತ್ರ ನೀಡಿದರು. ಆದರೆ, ಇನ್ನೂ ಸೂಕ್ತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಮಂಗಳವಾರದಿಂದ ‘ಅಸಹಕಾರ ಮುಷ್ಕರ’ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು .

ಹೀಗಾಗಿ ಮಂಗಳವಾರದಿಂದ ಕೋವಿಡ್‌-19 ಸೋಂಕಿತರು, ಡೆಂಘಿ, ಚಿಕೂನ್‌ ಗುನ್ಯಾ, ಎಚ್‌1ಎನ್‌1 ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳ ಮಾಹಿತಿ ದೊರೆಯುವುದಿಲ್ಲ. ಜತೆಗೆ ಟಿಬಿ, ಕುಷ್ಟರೋಗ, ತಾಯಂದಿರು ಮತ್ತು ಮಕ್ಕಳ ಸಾವು, ಜಂತುಹುಳು ಮಾತ್ರೆ ವಿತರಣೆ, ಹೆರಿಗೆ ವಿವರ ಸೇರಿದಂತೆ ಆಸ್ಪತ್ರೆಗಳಲ್ಲಿ ನಡೆಯುವ ಚಿಕಿತ್ಸೆಯ ವಿವರಗಳು ಹಾಗೂ ಆರೋಗ್ಯ ಕಾರ್ಯಕರ್ತರು ನಡೆಸುವ ಆರೋಗ್ಯ ಕುರಿತು ಸಮೀಕ್ಷೆ ಮತ್ತು ಜಾಗೃತಿ ಕಾರ್ಯಕ್ರಮಗಳ ಯಾವುದೇ ವರದಿ ಲಭ್ಯವಾಗದೆ ಆರೋಗ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.

ಇಲಾಖೆ ಸಭೆಗಳಿಗೂ ಬಹಿಷ್ಕಾರ:

ಆರೋಗ್ಯ ಇಲಾಖೆ ಸಚಿವರೂ ಸೇರಿದಂತೆ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಇಲಾಖೆಯ ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿ ನಡೆಸುವ ಝೂಮ್‌ ಕಾನ್ಫರೆನ್ಸ್‌, ವೆಬಿನಾರ್‌, ಆನ್‌ಲೈನ್‌ ಸಭೆಗಳಲ್ಲಿ ಭಾಗವಹಿಸದೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲಾಗುವುದು ಎಂದು ಡಾ.ಜಿ.ಎ. ಶ್ರೀನಿವಾಸ್‌ ತಿಳಿಸಿದ್ದಾರೆ.

ಸೆ.21ಕ್ಕೆ ಬೆಂಗಳೂರು ಚಲೋ:

ಮಂಗಳವಾರದಿಂದ ಯೋಜನೆಗಳು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಸರ್ಕಾರಕ್ಕೆ ನೀಡುವುದಿಲ್ಲ. ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸೇವೆಗೆ ಹಾಜರಾಗಿ ಎಂದಿನಂತೆ ಚಿಕಿತ್ಸೆ ನೀಡಲಾಗುವುದು. ಸೆ. 21ರಂದು ತುರ್ತು ಚಿಕಿತ್ಸೆ ಹೊರತುಪಡಿಸಿ, ಹೊರ ರೋಗಿಗಳ ಸೇವೆ ಸಂಪೂರ್ಣ ಸ್ಥಗಿತಗೊಳಿಸಿ ‘ಬೆಂಗಳೂರು ಚಲೋ’ ಜಾಥಾ ನಡೆಸಲಾಗುವುದು. ಈ ವೇಳೆ ತುರ್ತು ಚಿಕಿತ್ಸೆ, ಕೊರೋನಾ ಸೇವೆಯಲ್ಲಿ ವ್ಯತ್ಯಯ ಮಾಡುವುದಿಲ್ಲ ಎಂದು ತಿಳಿಸಿದರು.

ಬೇಡಿಕೆಗಳೇನು?

ರಾಜ್ಯ ಆರೋಗ್ಯ ಇಲಾಖೆ ಅಡಿಯಲ್ಲಿ 4,968 ವೈದ್ಯರ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕೊರೋನಾ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಡದಿದ್ದರೂ ಪರಿಹಾರ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.

Follow Us:
Download App:
  • android
  • ios