ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಬೇಡ: ಅನಂತ್ ಹೆಗಡೆ
ಟಿಪ್ಪು ಸುಲ್ತಾನ್ ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕಾರವಾರ: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ತನ್ನ ವಿರೋಧ ಇದ್ದು, ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದ ಜನರ ವಿರೋಧದ ನಡುವೆ ರಾಜ್ಯ ಸರ್ಕಾರ ನ.10ರಂದು ಟಿಪ್ಪು ಜಯಂತಿ ಆಚರಿಸುತ್ತಿರುವುದು ಸರಿಯಲ್ಲ. ತಮ್ಮ ವಿರೋಧ ಕೂಡಾ ಇದ್ದು, ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕುವುದು ಬೇಡ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಳೆದ ವರ್ಷವೂ ತಮ್ಮ ಹೆಸರು ಹಾಕದಂತೆ ಸೂಚಿಸಿದ್ದರು. ಆಗ ಶಿಷ್ಟಾಚಾರ ಪಾಲಿಸಬೇಕೆ ಬಿಡಬೇಕೆ ಎನ್ನುವ ಗೊಂದಲದಲ್ಲಿ ಸರ್ಕಾರ ಸಿಲುಕಿತ್ತು. ನಂತರ ಆಯಾ ಜನಪ್ರತಿನಿಧಿಗಳು ತಮ್ಮ ಹೆಸರು ಹಾಕುವುದು ಬೇಡ ಎಂದು ನಿರ್ಧರಿಸಿ ಸಂಸದರ, ಶಾಸಕರ ಹೆಸರನ್ನು ಕೈ ಬಿಡಲಾಗಿತ್ತು.