ಮಂಡ್ಯ(ಫೆ.14): ಹಿಂದಿ ರಾಷ್ಟ್ರಭಾಷೆಯಾಗಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಒಂದು ವೇಳೆ ರಾಜ್ಯದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರಲು ಯತ್ನಿಸಿದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಡಾ

ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತೀವ್ರವಾಗಿ ಖಂಡಿಸುತ್ತಲೇ ಕನ್ನಡ ಕಹಳೆ ಊದಿದರು.

ಉತ್ತರ ಭಾರತದ ಐದಾರು ರಾಜ್ಯಗಳನ್ನು ಹೊರತುಪಡಿಸಿದರೆ, ಪಂಜಾಬ್‌, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಎಲ್ಲಿಯೂ ಹಿಂದಿ ಮಾತನಾಡುವವರನ್ನು ಕಾಣಲಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕನ್ನಡ ನಾಡಿನಲ್ಲಿ ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಭಾಷೆ ಮುಂದೆ ಬರುವುದಕ್ಕೆ ಎಂದಿಗೂ ಸಾಧ್ಯವಿಲ್ಲ. ನಮ್ಮ ದೇಶ ಎಲ್ಲ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಒಳಗೊಂಡಿರುವ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ರಾಷ್ಟ್ರ. ಅಂದ ಮೇಲೆ ಹಿಂದಿ ಸಾರ್ವಭೌಮ ಭಾಷೆಯಾಗಲು ಸಾಧ್ಯವೇ ಎಂದು ಮತ್ತೊಮ್ಮೆ ಪ್ರಶ್ನಿಸಿದರು.

ಅಭಿಮಾನದ ಕೊರತೆ:

ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಅಭಿಮಾನದ ಕೊರತೆ ಇದೆ. ಕನ್ನಡದ ಬೆಳವಣಿಗೆ ಬಗ್ಗೆ ಪ್ರತಿಯೊಬ್ಬರಲ್ಲೂ ಬದ್ಧತೆ, ಪ್ರೀತಿ, ಗೌರವ ಇರಬೇಕು. ಮಾತೃಭಾಷೆಯನ್ನು ಗೌರವಿಸದಿದ್ದ ಮೇಲೆ ಇನ್ಯಾವ ಭಾಷೆಯನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ಕನ್ನಡದಲ್ಲಿ ಚಿಂತಿಸುವಷ್ಟುಬೇರೆ ಭಾಷೆಯಲ್ಲಿ ಚಿಂತಿಸಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಬೇರೆ ಭಾಷೆಯನ್ನು ಕಲಿಯಬಾರದು ಎಂದರ್ಥವಲ್ಲ. ಕನ್ನಡ ಕನ್ನಡ ನಾಡಿನಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂಬ ಕಳಕಳಿ ವ್ಯಕ್ತಪಡಿಸಿದರು.

ಕನಿಷ್ಠ ಅಭಿಮಾನವಿರಲಿ:

ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಕನಿಷ್ಠ ಅಭಿಮಾನವಿರಬೇಕು. ಅದು ಎಲ್ಲ ಸ್ತರಗಳಲ್ಲಿ ಬೆಳವಣಿಗೆ ಕಾಣಬೇಕು. ನಾವು ಮೊದಲು ಕನ್ನಡಿಗರು, ಆನಂತರ ಭಾರತೀಯರು ಎಂಬ ಭಾವನೆ ಬೆಳೆಸಿಕೊಂಡಾಗ ಅದಕ್ಕಿಂತ ಬೇರೆ ಅಭಿಮಾನ ಮತ್ತೊಂದಿಲ್ಲ ಎಂದರು. ಕನ್ನಡತನ ಕರ್ನಾಟಕದಲ್ಲಿ ಅನಿವಾರ್ಯವಾಗಬೇಕು. ಅಂತಹದೊಂದು ವಾತಾವರಣವನ್ನು ಸೃಷ್ಟಿಸಬೇಕು. ಅದು ಕನ್ನಡಿಗರಿಂದ ಮಾತ್ರವೇ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕೊಣಂದೂರು ಲಿಂಗಪ್ಪ ಹಾಗೂ ಪ್ರಮೋದ್‌ ಶಿಗ್ಗಾಂವ್‌ ಅವರಿಗೆ ಡಾ.ಹಾಮಾನಾ ಹಿರಿಯ ಮತ್ತು ಕಿರಿಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.