ರಾಜ್ಯಪಾಲರಿಗೆ ಧಿಕ್ಕಾರ ಕೂಗಿ ಅವಮಾನಿಸಿದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಲು ಆಗ್ರಹಿಸಿದ್ದಾರೆ. ಅಲ್ಲದೆ, ಅಬಕಾರಿ ಇಲಾಖೆಯಲ್ಲಿನ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಆರ್‌.ಬಿ.ತಿಮ್ಮಾಪುರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು: ರಾಜ್ಯಪಾಲರಿಗೆ ಧಿಕ್ಕಾರ ಕೂಗಿ ಅವಮಾನ ಮಾಡಿದ ಕಾಂಗ್ರೆಸ್ ಸದಸ್ಯರಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಬಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ವಾಪಸ್ ತೆರಳುವಾಗ ಅವಮಾನ ಮಾಡಿದ್ದಾರೆ. ಕೆಳಮನೆ ಸದಸ್ಯರಾದ ಪ್ರದೀಪ್ ಈಶ್ವರ್, ಶರತ್ ಬಚ್ಚೇಗೌಡ, ಮೇಲ್ಮನೆ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ರವಿ ಅವರು ಅಗೌರವ ತೋರಿ ಅಪಮಾನಿಸಿದ್ದಾರೆ. ಹೀಗಾಗಿ ಈ ನಾಲ್ವರನ್ನು ಅಮಾನತುಗೊಳಿಸಲು ಆಗ್ರಹಿಸಲಾಗಿದೆ ಎಂದು ಹೇಳಿದರು.

ಇವರಿಗೆ ಸಾಮಾನ್ಯ ಜ್ಞಾನ ಇಲ್ಲವೇ?

ಮೇಲ್ಮನೆಯಲ್ಲಿ ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ರವಿ ಅವರ ಅಮಾನತಿಗೆ ಆಗ್ರಹಿಸಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಈ ಅಮಾನತು ವಿಚಾರವನ್ನು ಸಭಾಪತಿ ನೀತಿ ನಿರೂಪಣಾ ಸಮಿತಿಗೆ ವಹಿಸಿದ್ದಾರೆ. ಈ ಇಬ್ಬರು ರಾಜ್ಯಪಾಲರಿಗೆ ಧಿಕ್ಕಾರ ಕೂಗಿದ್ದಾರೆ. ಇವರಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯಪಾಲರನ್ನು ಗೌರವಯುತವಾಗಿ ಕರೆತಂದು ಬಳಿಕ ವಾಪಸ್‌ ಹೋಗುವಾಗ ಗೌರವ ಕೊಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಆದರೆ, ವಾಪಾಸ್‌ ಹೋಗುವಾಗ ಅಪಮಾನಿಸುವ ಮುಖಾಂತರ ಸಂವಿಧಾನ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೂ ಅಪಮಾನಿಸಿದ್ದಾರೆ ಎಂದು ಕಿಡಿಕಾರಿದರು.

ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ

ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಬಗ್ಗೆ ಒಂದು ಆಡಿಯೋ ಬಂದಿದೆ. ಲಕ್ಷ್ಮೀನಾರಾಯಣ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಜಗದೀಶ್‌ ನಾಯ್ಕ್‌ ಎಂಬ ಅಧಿಕಾರಿ ಮತ್ತು ಮತ್ತಿಬ್ಬರು 25 ಲಕ್ಷ ರು. ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಆ ಮೂವರನ್ನು ಬಂಧಿಸಲಾಗಿದೆ. 2.50 ಕೋಟಿ ರು. ಲಂಚದಲ್ಲಿ ಮೊದಲ ಕಂತಿನಲ್ಲಿ 25 ಲಕ್ಷ ರು. ಕೊಡುವಾಗ ಅವರು ಸಿಕ್ಕಿಬಿದ್ದಿದ್ದಾರೆ. ಈ ರೀತಿ ಸಾವಿರಾರು ಲೈಸೆನ್ಸ್‌ಗೆ ಹಣ ಪಡೆದಿದ್ದಾರೆ. ಅಬಕಾರಿ ಇಲಾಖೆ ಲೂಟಿಕೋರರ ಇಲಾಖೆಯಾಗಿದೆ. ನೈತಿಕ ಹೊಣೆ ಹೊತ್ತು ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ರವಿಕುಮಾರ್‌ ಆಗ್ರಹಿಸಿದರು.