ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಪೂರ್ಣವಾಗಿ ಓದದ ಕಾರಣ, ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ರಾಜ್ಯಪಾಲರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು  ಚಲುವರಾಯಸ್ವಾಮಿ ಆರೋಪಿಸಿದರೆ, ಕಾಂಗ್ರೆಸ್‌ನ ರಾಜಕೀಯ ನಾಟಕ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವ ಮೂಲಕ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಿಂದ ಶುಕ್ರವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದಾರೆ. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. 

ವಿಧಾನಮಂಡಲ ಅಧಿವೇಶನದಲ್ಲಿ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡುವುದು ಅವರ ಕರ್ತವ್ಯವಾಗಿದೆ. ಆದರೆ, ರಾಜ್ಯಪಾಲರು ಅದನ್ನು ಮರೆತು ಭಾಷಣವನ್ನೇ ಮಾಡದೆ ಹೊರಟು ಹೋಗಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ದ್ರೋಹ ಮಾತ್ರವಲ್ಲ, ಸಂವಿಧಾನಕ್ಕೂ ಮಾಡಿದ ದ್ರೋಹವಾಗಿದೆ ಎಂದು ದೂರಿದರು. ಇದೇ ವೇಳೆ, ಮೈಸೂರು, ಚಾಮರಾಜನಗರ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

ರಾಜ್ಯಪಾಲರು ಕೇಂದ್ರದ ಏಜೆಂಟಾ?: ಕೃಷಿ ಸಚಿವ

ಮಂಡ್ಯ: ರಾಜ್ಯ ಸರ್ಕಾರದ ಭಾಷಣವನ್ನು ಮೊಟಕುಗೊಳಿಸಿ ಜಂಟಿ ಅಧಿವೇಶನದಿಂದ ಹೊರನಡೆದ ರಾಜ್ಯಪಾಲರ ನಡವಳಿಕೆ ಅವರಿಗೆ ಗೌರವ ತರುವುದಿಲ್ಲ. ರಾಜ್ಯಪಾಲರೇನು ಕೇಂದ್ರ ಸರ್ಕಾರದ ಏಜೆಂಟಾ? ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಆತುರಾತುರವಾಗಿ 2 ಪ್ಯಾರಾ ಓದಿ ತೆರಳುವುದು ರಾಜ್ಯಪಾಲರ ಘನತೆಯಲ್ಲ. ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವುದು ರಾಜ್ಯಪಾಲರ ಪರಿಪಾಠ. ಕೇಂದ್ರ ಸರ್ಕಾರದ ಭಾಷಣವನ್ನು ರಾಷ್ಟ್ರಪತಿ ಓದುವುದಿಲ್ಲವೇ. ಅದೇ ರೀತಿ ಇದು ಕೂಡ. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಎಂದು ಘೋಷಣೆ ಮಾಡಲಿ ಎಂದರು.

‘ಗೋ-ಬ್ಯಾಕ್ ಗವರ್ನರ್’ ಕೈ ರಾಜಕೀಯ ನಾಟಕ: ಎಚ್‌ಡಿಕೆ

ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್, ಗೋ ಬ್ಯಾಕ್ ಎನ್ನುವುದರಿಂದ ರಾಜ್ಯ ಕಾಂಗ್ರೆಸ್ ಏನನ್ನೂ ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಎನ್ನುವುದು ಕೇವಲ ರಾಜಕೀಯ ನಾಟಕವಷ್ಟೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.

ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡು ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದರು.

ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿಲ್ಲ. ಹಿಂದೆ ಜೆ.ಎಚ್.ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಮನರೇಗಾ ವಿಷಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದು, ವಿನಾಕಾರಣ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯಲ್ಲ. ಕೇಂದ್ರದ ಜತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.